ಪುಣೆಯಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 15 ರನ್‌ಗಳಿಂದ ಸೋಲಿಸುವ ಮೂಲಕ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ 3-1 ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ವಿಶ್ವ ದಾಖಲೆ ಸೃಷ್ಟಿಸಿದೆ.
ಟಿ20ಕ್ರಿಕೆಟ್‌ನಲ್ಲಿ ಈ ದಾಖಲೆ ಮಾಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಪುಣೆಯಲ್ಲಿ ಟೀಮ್ ಇಂಡಿಯಾ ತಮ್ಮ ಹೆಸರಿಗೆ ಸೇರಿಸಿಕೊಂಡ ದಾಖಲೆಯನ್ನು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೆ ಮಾಡಲು ಸಾಧ್ಯವಾಗಿಲ್ಲ.

ಕೋಲ್ಕತ್ತಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯ ಸಾಧಿಸಿದೆ. ಇದಾದ ಬಳಿಕ ಚೆನ್ನೈನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿಯೂ ಇಂಗ್ಲೆಂಡ್ ವಿರುದ್ಧ ಭಾರತ 2 ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು 26 ರನ್‌ಗಳಿಂದ ಸೋಲಿಸಿತು.
ಇದೀಗ ಪುಣೆಯಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯವನ್ನು 15 ರನ್‌ಗಳಿಂದ ಗೆದ್ದು ಸರಣಿಯನ್ನು ವಶಪಡಿಸಿಕೊಂಡ ಭಾರತ 3-1 ಅಂತರದ ಮುನ್ನಡೆ ಸಾಧಿಸಿದೆ. ಈ ಮೂಲಕ ಭಾರತ ತಂಡ ತವರಿನಲ್ಲಿ ಸತತ 17 ಟಿ20 ಸರಣಿಗಳಲ್ಲಿ ಅಜೇಯರಾಗಿ ಉಳಿದು ದಾಖಲೆ ನಿರ್ಮಿಸಿದೆ.
ಸತತ 6 ವರ್ಷಗಳಿಂದ ತವರಿನಲ್ಲಿ ಭಾರತ ತಂಡವನ್ನು ಯಾವ ತಂಡವೂ ಸೋಲಿಸಲು ಸಾಧ್ಯವಾಗಿಲ್ಲ. ಫೆಬ್ರವರಿ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಕಳೆದುಕೊಂಡ ನಂತರ ಭಾರತ ತಂಡವು ತವರಿನಲ್ಲಿ ಒಂದೇ ಒಂದು ಟಿ20 ಸರಣಿಯನ್ನು ಸೋತಿಲ್ಲ.
ಟೀಮ್ ಇಂಡಿಯಾದ ನಂತರ, ಆಸ್ಟ್ರೇಲಿಯಾವು ತವರಿನಲ್ಲಿ ಸತತ ಟಿ20 ಸರಣಿಗಳಲ್ಲಿ ಅಜೇಯವಾಗಿ ಉಳಿದಿದೆ. ಆಸ್ಟ್ರೇಲಿಯಾ ತವರಿನಲ್ಲಿ ಸತತ 8 ಟಿ20 ಸರಣಿಗಳಲ್ಲಿ ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕಾ ತಂಡ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ತವರಿನಲ್ಲಿ ಸತತ 7 ಟಿ20 ಸರಣಿಗಳನ್ನು ವಶಪಡಿಸಿಕೊಂಡಿದೆ.
ಪುಣೆಯಲ್ಲಿ ಶುಕ್ರವಾರ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದಾಗಿ ಭಾರತ 15 ರನ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿತು. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 3-1 ಮುನ್ನಡೆ ಸಾಧಿಸಿದೆ. ತವರಿನಲ್ಲಿ ಕಳೆದ 17 ದ್ವಿಪಕ್ಷೀಯ ಟಿ20 ಅಂತಾರಾಷ್ಟ್ರೀಯ ಸರಣಿಗಳಲ್ಲಿ ಭಾರತ ಸೋತಿಲ್ಲ.
ಭಾರತ ನೀಡಿದ 182 ರನ್ ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 19.4 ಓವರ್ ಗಳಲ್ಲಿ 166 ರನ್ ಗಳಿಗೆ ಆಲೌಟ್ ಆಯಿತು. ರವಿ ಬಿಷ್ಣೋಯ್ ಮತ್ತು ಹರ್ಷಿತ್ ರಾಣಾ ತಲಾ 3 ವಿಕೆಟ್ ಪಡೆದು ಮಿಂಚಿದರೆ, ವರುಣ್ ಚಕ್ರವರ್ತಿ 2 ವಿಕೆಟ್ ಕಬಳಿಸಿದರು. ಈ ಮೂವರ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ತಂಡ ಕುಸಿದುಬಿತ್ತು. ಹ್ಯಾರಿ ಬ್ರೂಕ್ (51) ಮತ್ತು ಆರಂಭಿಕ ಬೆನ್ ಡಕೆಟ್ (39) ಇಂಗ್ಲೆಂಡ್ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಟೀಮ್ ಇಂಡಿಯಾ ಬೌಲರ್‌ಗಳು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಬಿರುಸಿನ ಅರ್ಧಶತಕಗಳನ್ನು ಬಾರಿಸಿ ಮಿಂಚಿದರು.