ಬಳ್ಳಾರಿಯಲ್ಲಿ ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸಿದ ರಿಷಭ್ ಪಂತ್; ವಿಶ್ವಕಪ್‌ಗೆ ಪುನರಾಗಮನ?
ಕಳೆದ ಡಿಸೆಂಬರ್‌ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಟೀಂ ಇಂಡಿಯಾದಿಂದ ಹೊರಗುಳಿದಿರುವ ಪ್ರಮುಖ ವಿಕೆಟ್ ಕೀಪರ್- ಬ್ಯಾಟರ್ ರಿಷಭ್ ಪಂತ್ ಅವರು ಬಳ್ಳಾರಿಗೆ ಬಂದು ಕ್ರಿಕೆಟ್ ಅಭ್ಯಾಸ ನಡೆಸಿದ್ದಾರೆ. ಕಾರು ಅಪಘಾತದ ನಂತರ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿದೆ.
ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದು, ಫ್ರಾಂಚೈಸಿಯ ಮಾಲೀಕ ಸಂಸ್ಥೆಯಾದ ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ರಾಯಭಾರಿಯಾಗಿದ್ದಾರೆ. ಹೀಗಾಗಿ, ಜಾಹೀರಾತು ಶೂಟಿಂಗ್‌ಗಾಗಿ ಬಳ್ಳಾರಿಗೆ ಬಂದಿದ್ದಾರೆ ಎನ್ನಲಾಗಿದೆ. ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಘಟಕದಲ್ಲಿ ರಿಷಭ್ ಪಂತ್ ಬ್ಯಾಟ್ ಬೀಸಿದ್ದಾರೆ.

ಈ ವೇಳೆ ಕ್ರಿಕೆಟ್ ಅಭಿಮಾನಿಯೊಬ್ಬರು ರಿಷಭ್ ಪಂತ್ ಅವರ ಬ್ಯಾಟಿಂಗ್ ಅಭ್ಯಾಸದ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ರಿಷಭ್ ಪಂತ್ ಬ್ಯಾಟ್ ಹಿಡಿದು ಕ್ರೀಸ್‌ಗೆ ಆಗಮಿಸಿದಾಗ ಮೈದಾನದ ಸುತ್ತ ನೆರೆದಿದ್ದ ಅಭಿಮಾನಿಗಳು ಹರ್ಷೋದ್ಗಾರಗಳಿಂದ ಸಂಭ್ರಮಿಸಿದರು. ಆಟದ ವೇಳೆ ಅವರ ಬ್ಯಾಟಿಂಗ್ ಶೈಲಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಿಷಭ್ ಪಂತ್ ಅವರು ಕಾರು ಅಪಘಾತದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಕೆಲವು ತಿಂಗಳುಗಳ ಕಾಲ ವಿಶ್ರಾಂತಿ ಪಡೆದು, ಇದೀಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ನಲ್ಲಿ ಪುನರ್ವಸತಿ ಪಡೆಯುತ್ತಿದ್ದಾರೆ.

ಚಿಕಿತ್ಸೆ ಪಡೆಯುತ್ತಲೇ ವ್ಯಾಯಾಮ ಮತ್ತು ಓಟದ ಅಭ್ಯಾಸದಲ್ಲಿ ರಿಷಭ್ ಪಂತ್ ತೊಡಗಿದ್ದಾರೆ. ಜುಲೈ 21ರಿಂದಲೇ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಆರಂಭಿಸಿರುವ ರಿಷಭ್ ಪಂತ್ ಇದೀಗ ಬಳ್ಳಾರಿಯಲ್ಲಿ ಬ್ಯಾಟಿಂಗ್ ಮಾಡಿ ತನ್ನ ಫಿಟ್‌ನೆಸ್ ಮರಳಿ ಪಡೆಯಲು ಯತ್ನಿಸಿದ್ದಾರೆ.
25 ವರ್ಷದ ರಿಷಭ್ ಪಂತ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 33 ಟೆಸ್ಟ್, 30 ಏಕದಿನ ಮತ್ತು 66 ಟಿ20 ಪಂದ್ಯಗಳಲ್ಲಿ ಭಾರತ ತಂಡದ ಪರ ಆಡಿದ್ದಾರೆ. ಪಂತ್ ಇಲ್ಲಿಯವರೆಗೆ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 6 ಶತಕಗಳನ್ನು ಬಾರಿಸಿದ್ದಾರೆ.
ಕಳೆದ ಕೆಲವು ಸರಣಿಗಳಲ್ಲಿ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಸ್ಥಾನವನ್ನು ಕೆಎಸ್ ಭರತ್ ಮತ್ತು ಇಶಾನ್ ಕಿಶನ್ ತುಂಬಿದ್ದಾರೆ. ಈ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ರಿಷಭ್ ಪಂತ್ ಅವರ ಅನುಪಸ್ಥಿತಿಯು ಭಾರತ ತಂಡಕ್ಕೆ ದೊಡ್ಡ ಹಿನ್ನಡೆಗೆ ಕಾರಣವಾಯಿತು.
ರಿಷಭ್ ಪಂತ್ ಈ ವಾರದ ಆರಂಭದಲ್ಲಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. 2023ರ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತದ ತಂಡಕ್ಕೆ ಮರಳಲು ರಿಷಭ್ ಪಂತ್ ಫಿಟ್ ಆಗಿರುವುದು ಅಸಂಭವವಾಗಿದೆ.
ಭಾರತದಲ್ಲೇ ನಡೆಯುವ ಈ ಬಾರಿಯ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೆಎಲ್ ರಾಹುಲ್ ಮೊದಲ ಆಯ್ಕೆಯ ವಿಕೆಟ್ ಕೀಪರ್-ಬ್ಯಾಟರ್ ಸ್ಥಾನವನ್ನು ತುಂಬುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications