ದ್ವಿತೀಯ ಏಕದಿನ: ಭಾರತಕ್ಕೆ ಜಯ ತಂದುಕೊಟ್ಟ ಭುವಿ, ಧೋನಿ
ಕ್ಯಾಂಡಿ, ಆಗಸ್ಟ್ 24: ಆಪದ್ಬಾಂಧವರಂತೆ ಆಟವಾಡಿದ ಭುವನೇಶ್ವರ್ ಕುಮಾರ್ (ಅಜೇಯ 53 ರನ್, 80 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಮಹೇಂದ್ರ ಸಿಂಗ್ ಧೋನಿ (ಅಜೇಯ 45 ರನ್, 68 ಎಸೆತ, 1 ಬೌಂಡರಿ) ಅವರ ಸಮಯೋಚಿತ ಬ್ಯಾಟಿಂಗ್ ನಿಂದಾಗಿ ಪ್ರವಾಸಿ ಭಾರತ ತಂಡ, ಗುರುವಾರ ಇಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 3 ವಿಕೆಟ್ ಗಳ ರೋಚಕ ಜಯ ಪಡೆಯಿತು.
ಮಳೆಯಿಂದ ತೊಂದರೆಗೊಳಗಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿತ್ತು. ಆದರೆ, ಭಾರತದ ಇನಿಂಗ್ಸ್ ಶುರುವಾಗುವಷ್ಟರಲ್ಲಿ ಮಳೆಯಾಗಿದ್ದರಿಂದಾಗಿ, ಪಂದ್ಯದ ಗೆಲುವಿನ ಗುರಿಯನ್ನು 47 ಓವರ್ ಗಳಿಂದ 231 ರನ್ ಗಳಿಗೆ ನಿಗದಿಗೊಳಿಸಲಾಯಿತು.
ಆದರೆ, ಈ ಸುಲಭದ ಗುರಿಯನ್ನು ಮುಟ್ಟುವ ಭರದಲ್ಲಿ ಭಾರತ, ಅಗ್ರ ಕ್ರಮಾಂಕದ ಕೆಲ ಬಲಿಷ್ಠ ಬ್ಯಾಟ್ಸ್ ಮನ್ ಗಳನ್ನು ಬೇಗನೇ ಕಳೆದುಕೊಂಡಿತು. ಪಂದ್ಯದ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ನೆರವಾದ ಭುವನೇಶ್ವರ್ ಹಾಗೂ ಧೋನಿ ತಂಡಕ್ಕೆ ಆಸರೆಯಾದರಲ್ಲದೆ, ಗೆಲುವನ್ನೂ ತಂದುಕೊಟ್ಟರು.

ಲಂಕಾಕ್ಕೆ ಮೊದಲು ಬ್ಯಾಟಿಂಗ್ ಅವಕಾಶ
ಪಂದ್ಯಕ್ಕೂ ಮೊದಲು ಟಾಸ್ ಗೆದ್ದಿದ್ದ ಭಾರತ, ಶ್ರೀಲಂಕಾವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿತ್ತು. ಲಂಕಾ ಸಾಧಾರಣ ಮೊತ್ತ ಪೇರಿಸಿತು. ಮಳೆಯಿಂದಾಗಿ ತೊಂದರೆಗೊಳಗಾದ ನಂತರ, ಭಾರತದ ಇನಿಂಗ್ಸ್ ಶುರುವಾಗುವಷ್ಟರಲ್ಲಿ ಗೆಲುವಿನ ಗುರಿಯನ್ನು 47 ಓವರ್ ಗಳಲ್ಲಿ 231 ರನ್ ಗಳಿಗೆ ನಿಗದಿಗೊಳಿಸಲಾಯಿತು. ಆದರೆ, ಈ ಸುಲಭ ಮೊತ್ತ ಬೆನ್ನಟ್ಟುವ ಭರದಲ್ಲಿ, ಭಾರತ ಭಾರೀ ಮಟ್ಟದಲ್ಲಿ ಎಡವಿತು. ಮೊದಲೇ 47 ಓವರ್ ಗಳಲ್ಲಿ ಗುರಿ ಮುಟ್ಟಬೇಕಾದ ಅನಿವಾರ್ಯತೆ ಆರಂಭಿಕರಾದ ರೋಹಿತ್ ಶರ್ಮಾ (54) , ಶಿಖರ್ ಧವನ್ (49) ಜೋಡಿ 109 ರನ್ ಗಳ ಜತೆಯಾಟವಾಡಿದರೂ, ಮೂರನೇ ಕ್ರಮಾಂಕದ ಕೆ.ಎಲ್.ರಾಹುಲ್ (4), ಕೇದಾರ್ ಜಾಧವ್ (1), ನಾಯಕ ವಿರಾಟ್ ಕೊಹ್ಲಿ (4), ಹಾರ್ದಿಕ್ ಪಾಂಡ್ಯ (0), ಅಕ್ಷರ್ ಪಟೇಲ್ (6) ಬೇಗನೇ ಔಟಾಗಿ ಭಾರತೀಯ ಅಭಿಮಾನಿಗಳಿಗೆ ಶಾಕ್ ನೀಡಿದರು. ಆಗ, ಭಾರತ ಸೋಲುವ ಭೀತಿಯಲ್ಲಿತ್ತು.

ಸಾಥ್ ಕೊಟ್ಟ ಭುವಿ
ಆ ಹಂತದಲ್ಲಿ, ಸಮಯೋಚಿತ ಬ್ಯಾಟಿಂಗ್ ನಡೆಸಿದ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಂದ್ಯವನ್ನು ಭಾರತದ ಕಡೆಗೆ ತಿರುಗಿಸಿದರು. ಈ ಜೋಡಿ, 8ನೇ ವಿಕೆಟ್ ಗೆ 100 ರನ್ ಜತೆಯಾಟ ನೀಡಿದ್ದು ಭಾರತಕ್ಕೆ ಗೆಲುವಿನ ನಗು ಬೀರುವಲ್ಲಿ ಪ್ರಧಾನ ಪಾತ್ರ ವಹಿಸಿತು.

ಸಿರಿವರ್ದನಾ, ಕಪುಗೇದರಾ ಉತ್ತಮ ಜತೆಯಾಟ
ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಲಂಕಾ, ಕೇವಲ 41 ರನ್ ಮೊತ್ತಕ್ಕೆ ಡಿಕ್ವೆಲ್ಲಾ ಅವರನ್ನು ಕಳೆದುಕೊಂಡಿತು. ಆದರೂ, ಮತ್ತೊಬ್ಬ ಆರಂಭಿಕ ಡಿಕ್ವೆಲ್ಲಾ (31) ಅವರು ಕೊಂಚ ಚೇತರಿಕೆಯ ಬ್ಯಾಟಿಂಗ್ ನೀಡಿದರು. ಆದರೆ, ಲಂಕಾ ಪಡೆಯಿಂದ ದೊಡ್ಡ ಮಟ್ಟದ ಆಟ ಹೊರಹೊಮ್ಮಿದ್ದು, ಸಿರಿವರ್ದನಾ (58) ಅವರಿಂದ. ಅವರು ಹಾಗೂ ಕಪುಗೇದರಾ (40) ಇಬ್ಬರೂ 6ನೇ ವಿಕೆಟ್ ಗೆ ನೀಡಿದ 91 ರನ್ ಗಳ ಸಹಾಯದಿಂದಾಗಿ ಲಂಕಾ ಪಡೆ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತ್ತು.

ಚುಟುಕು ಸ್ಕೋರ್ ಮಾಹಿತಿ
ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 236 (ಸಿರಿವರ್ದನ 58, ಕಪುಗೇದರಾ 40; ಜಸ್ ಪ್ರೀತ್ ಬುಮ್ರಾ 43ಕ್ಕೆ 4, ಯಜುವೇಂದ್ರ ಚಾಹಲ್ 43ಕ್ಕೆ 2); ಭಾರತ 44.2 ಓವರ್ ಗಳಲ್ಲಿ 7 ವಿಕೆಟ್ ಗೆ 231 (ಡಕ್ ವರ್ತ್ ನಿಯಮಗಳಾನುಸಾರ)(ರೋಹಿತ್ ಶರ್ಮಾ 54, ಭುವನೇಶ್ವರ್ ಕುಮಾರ್ ಅಜೇಯ 53; ಅಖಿಲ ಧನಂಜಯ 54ಕ್ಕೆ 6, ಸಿರಿವರ್ದನ 39ಕ್ಕೆ 1.) ಪಂದ್ಯಶ್ರೇಷ್ಠ: ಅಖಿಲ ಧನಂಜಯ (ಶ್ರೀಲಂಕಾ)
ಫಲಿತಾಂಶ: ಭಾರತಕ್ಕೆ 3 ವಿಕೆಟ್ ಜಯ (ಡಕ್ ವರ್ತ್ ಲೂಯಿಸ್ ನಿಯಮಗಳ ಪ್ರಕಾರ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications