ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ, ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಅರ್ಹತೆ ಪಡೆದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾ ನೀಡಿದ್ದ 265 ರನ್‌ಗಳ ಗುರಿಯನ್ನು ಭಾರತ 48.1 ಓವರ್‌ಗಳಲ್ಲಿ ಮುಟ್ಟಿ ಬೀಗಿದೆ. ಈ ಗೆಲುವಿನಲ್ಲಿ ಹಲವರು ತಮ್ಮ ತಮ್ಮ ಕಾಣಿಕೆ ನೀಡಿದ್ದಾರೆ. ವಿರಾಟ್ ಸಹ ತಮ್ಮ ಬ್ಯಾಟಿಂಗ್ ಮೂಲಕ ಸದ್ದು ಮಾಡಿದ್ದಾರೆ.
ಮಂಗಳವಾರ ಮಾರ್ಚ್ 4ರಂದು ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ ಗೆಲುವು, ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡು ತಿರಿಸಿಕೊಂಡಿತು. ಅಲ್ಲದೆ ಅಭಿಮಾನಿಗಳ ಮನದಲ್ಲಿ ಆಗಿದ್ದ ಗಾಯದ ಬರೆಗೆ ಮುಲಾಮು ಹಚ್ಚಿತು. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಹೈವೋಲ್ಟೇಜ್ ಪಂದ್ಯಗಳಲ್ಲಿ ಒಂದಾಗಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಈ ಪಂದ್ಯ ಮಾರ್ಡನ್ ಡೇ ಎದುರಾಳಿಗಳ ನಡುವಿನ ಕಾಳಗವಾಗಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಖಲೆ ಬರೆದಿದೆ.

5094 ದಿನಗಳ ನಂತರ, ಭಾರತವು ಐಸಿಸಿ ಟೂರ್ನಮೆಂಟ್‌ನ ನಾಕೌಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದೆ. ಇದಕ್ಕೂ ಮೊದಲು ಭಾರತ 2011 ಏಕದಿನ ವಿಶ್ವಕಪ್‌ನ ನಾಕೌಟ್ ಹಂತದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಆಗ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಪಡೆ 5 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಇತಿಹಾಸ ಸೃಷ್ಟಿಸಿತ್ತು. ಇದಾದ ಬಳಿಕ ಉಭಯ ದೇಳಗಳು ಕಾದಾಟ ನಡೆಸಿದಾಗ ಭಾರತ ಸಾಲು ಸಾಲು ಸೋಲುಗಳನ್ನು ಕಂಡಿದೆ. 2015ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ 95 ರನ್‌ಗಳಿಂದ ಆಸೀಸ್ ವಿರುದ್ಧ ಸೋಲು ಕಂಡಿತ್ತು. ಇನ್ನು ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತ 6 ವಿಕೆಟ್‌ಗಳಿಂದ ಸೋಲು ಕಂಡಿತ್ತು. ಅಲ್ಲದೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ 209 ರನ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ನಿರಾಸೆ ಅನುಭವಿಸಿತ್ತು. ಇದಾದ ಬಳಿಕ ಬ್ಲ್ಯೂ ಬಾಯ್ಸ್ ದಾಖಲಿಸಿದ ಮೊದಲ ಗೆಲುವು ಇದಾಗಿದೆ.

ದುಬೈನಲ್ಲಿ ಆಸ್ಟ್ರೇಲಿಯಾವನ್ನು ಸೆಮಿಫೈನಲ್ ಪಂದ್ಯದಲ್ಲಿ ಮಣಿಸಿದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತೊಂದು ದಾಖಲೆ ಬರೆದಿದ್ದಾರೆ. ರೋಹಿತ್ ನಾಲ್ಕು ಪುರುಷರ ಐಸಿಸಿ ಟೂರ್ನಿಗಳಲ್ಲಿ ಫೈನಲ್ ತಲುಪಿದ ಮೊದಲ ನಾಯಕರಾದರು. ಇದಕ್ಕೂ ಮೊದಲು, ಅವರ ನಾಯಕತ್ವದಲ್ಲಿ, ಭಾರತ ತಂಡವು 2023 ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್‌ನ ಫೈನಲ್‌ಗಳನ್ನು ಆಡಿತ್ತು. ಭಾರತ 2024 ರಲ್ಲಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಡಿತ್ತು. ಈಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಆಡಲು ಸಿದ್ಧತೆ ನಡೆಸಿದೆ.