ಐಪಿಎಲ್ ಆಡಿದ್ದು ಪ್ಲಸ್ ಪಾಯಿಂಟ್; ಈ ತಂಡವೇ ಟಿ20 ವಿಶ್ವಕಪ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದ ಮೈಕೆಲ್ ವಾನ್

ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್ ನೆಲದಲ್ಲಿ ಬೀಡುಬಿಟ್ಟಿದ್ದು, ಆಂಗ್ಲರ ವಿರುದ್ಧ ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಈಗಾಗಲೇ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಪ್ರಥಮ ಪಂದ್ಯದಲ್ಲಿಯೂ ಕೂಡ ಗೆದ್ದು ಮುನ್ನಡೆಯನ್ನು ಸಾಧಿಸಿದೆ.
ಮಂಗಳವಾರ ( ಜುಲೈ 12) ಕೆನ್ನಿಂಗ್ಟನ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 110 ರನ್‌ಗಳಿಗೆ ಆಲ್ ಔಟ್ ಆಯಿತು ಹಾಗೂ ನಂತರ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೇ 114 ರನ್ ಕಲೆಹಾಕಿ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಇಂಗ್ಲೆಂಡ್ ತಂಡ ಟೀಮ್ ಇಂಡಿಯಾ ವಿರುದ್ಧ ಟಿ ಟ್ವೆಂಟಿ ಸರಣಿಯಲ್ಲಿ ಸೋತು ಮುಖಭಂಗ ಅನುಭವಿಸಿದ್ದು ಮಾತ್ರವಲ್ಲದೇ ಇದೀಗ ಏಕದಿನ ಸರಣಿಯಲ್ಲಿಯೂ ಕೂಡ ಸೋಲುವ ಭೀತಿಯಲ್ಲಿದೆ.
ಇನ್ನು ಈ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಪಂದ್ಯದ ಕುರಿತು ಮಾತನಾಡಿದ್ದ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಮೈಕೆಲ್ ವಾನ್ ಈ ಪಂದ್ಯದಲ್ಲಿ ಇಂಗ್ಲೆಂಡ್ ಟೀಮ್ ಇಂಡಿಯಾ ವಿರುದ್ಧ 400ಕ್ಕೂ ಅಧಿಕ ರನ್ ಕಲೆ ಹಾಕಲಿದೆ ಎಂದು ಬೃಹತ್ ಊಹೆಯನ್ನು ಮಾಡಿದ್ದರು. ಆದರೆ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ಕುಸಿದ ಇಂಗ್ಲೆಂಡ್ ಮೈಕೆಲ್ ವಾನ್ ಊಹೆಗೆ ವಿರುದ್ಧವಾಗಿ ಪ್ರದರ್ಶನ ನೀಡಿ 110 ರನ್ ಕಲೆಹಾಕಿ ಮಕಾಡೆ ಮಲಗಿತ್ತು. ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪ್ರಥಮ ಏಕದಿನ ಪಂದ್ಯದ ಕುರಿತಾಗಿ ಭವಿಷ್ಯ ನುಡಿದು ಭಾರೀ ಟ್ರೋಲ್ ಹಾಗೂ ಟೀಕೆಗೆ ಒಳಗಾಗಿದ್ದ ಮೈಕೆಲ್ ವಾನ್ ಇದೀಗ ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಗೆಲ್ಲುವ ಫೇವರೇಟ್ ತಂಡ ಯಾವುದು ಎಂಬ ಭವಿಷ್ಯವನ್ನು ನುಡಿದಿದ್ದಾರೆ.

ಭಾರತ ಈ ಬಾರಿ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ
ಮೈಕೆಲ್ ವಾನ್ ಈ ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿಯಬಹುದಾದ ನೆಚ್ಚಿನ ತಂಡ ಭಾರತ ಎಂದು ಹೇಳಿಕೆ ನೀಡಿದ್ದಾರೆ. 'ಐಪಿಎಲ್ ಟೂರ್ನಿಯಲ್ಲಿ ಉತ್ತಮ ಆಟವನ್ನು ಆಡಿ ಬಂದಿರುವ ಆಟಗಾರರನ್ನೊಳಗೊಂಡಿರುವ ಟೀಮ್ ಇಂಡಿಯಾ ಸಾಕಷ್ಟು ಬಲಿಷ್ಠತೆಯಿಂದ ಕೂಡಿದೆ. ಹೀಗಾಗಿಯೇ ಅವರು ವಿಶ್ವದ ಎಲ್ಲಾ ಪಿಚ್‌ನಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಿದ್ದು, ಮುಂಬರುವ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಗೆಲ್ಲುವ ನೆಚ್ಚಿನ ತಂಡವಾಗಿದೆ' ಎಂದು ಮೈಕೆಲ್ ವಾನ್ ಭವಿಷ್ಯ ನುಡಿದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಗೆಲುವು ಟೀಮ್ ಇಂಡಿಯಾಗೆ ವಿಶ್ವಾಸ ತಂದಿದೆ
ಇಂಗ್ಲೆಂಡ್ ತಂಡ ಕೂಡ ಅಸಾಧಾರಣ ತಂಡವಾಗಿದ್ದು, ಬಲಿಷ್ಠ ಇಂಗ್ಲೆಂಡ್ ವಿರುದ್ಧ ಟಿ ಟ್ವೆಂಟಿ ಸರಣಿ ಹಾಗೂ ಪ್ರಥಮ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾಗೆ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ ಎಂದು ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.

ಟೀಮ್ ಇಂಡಿಯಾ ಹಲವು ವರ್ಷಗಳಿಂದ ಯಾವುದೇ ಟ್ರೋಫಿ ಗೆದ್ದಿಲ್ಲ
ಇನ್ನೂ ಮುಂದುವರಿದು ಮಾತನಾಡಿರುವ ಮೈಕೆಲ್ ವಾನ್ ಸದ್ಯ ಸಂಗತಿಗಳು ಟೀಮ್ ಇಂಡಿಯಾ ಪರ ಇದ್ದು ಅದನ್ನು ತಂಡ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಟೀಮ್ ಇಂಡಿಯಾ ಹಲವು ವರ್ಷಗಳಿಂದ ಐಸಿಸಿ ಟ್ರೋಫಿಯನ್ನು ಗೆಲ್ಲುವ ಸನಿಹಕ್ಕೆ ಬಂದಿಲ್ಲ ಎಂದಿರುವ ಮೈಕೆಲ್ ವಾನ್ ಚಾಂಪಿಯನ್ಸ್ ಟ್ರೋಫಿ, ಟಿ ಟ್ವೆಂಟಿ ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಟ್ರೋಫಿಗಳನ್ನು ಟೀಮ್ ಇಂಡಿಯಾ ಗೆಲ್ಲಲಿ ಎಂದು ಆಶಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications