
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯ ನಡೆಯುತ್ತಿರುವ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ಭಾರತ ತಂಡ ದೂರು ದಾಖಲಿಸಿದೆ. ಮೈದಾನದಲ್ಲಿದ್ದ ಪ್ರೇಕ್ಷಕರು ಭಾರತೀಯ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ ಮಾಡಿರುವ ಕುರಿತು ದೂರು ನೀಡಲಾಗಿದೆ.
ಶನಿವಾರ ನಡೆದ ತೃತೀಯ ಟೆಸ್ಟ್‌ನ ಮೂರನೇ ದಿನದಾಟದ ವೇಳೆ ಟೀಮ್ ಇಂಡಿಯಾ ಆಟಗಾರರಾದ ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ವಿರುದ್ಧ ಪ್ರೇಕ್ಷಕರ ಸಮೂಹದಿಂದ ಕೆಲವರು ಜನಾಂಗೀಯ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಕೂಡಲೇ ತಂಡ ನಿರ್ವಹಣಾ ಸಮಿತಿ, ಈ ಬಗ್ಗೆ ಅಧಿಕೃತ ದೂರು ನೀಡಿದೆ ಎಂದು ತಿಳಿದು ಬಂದಿದೆ.
ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಈ ಬಗ್ಗೆ ಈಗಾಗಲೇ ತನಿಖೆ ಶುರು ಮಾಡಿದೆ. ಸ್ಟೇಡಿಯಂನ ಅಧಿಕಾರಿಗಳು ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸಲಿದ್ದಾರೆ. ಮೈದಾನದ ಮೂಲೆ ಮೂಲೆಯಲ್ಲಿ ಕೂತ ವೀಕ್ಷಕರನ್ನೂ ದೂರಿಗೆ ಸಂಬಂಧಿಸಿ ಗಮನಿಸಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ಟೀಮ್ ಇಂಡಿಯಾ ದೂರಿತ್ತಿರುವ ದಿನ ಸಿಡ್ನಿ ಸ್ಟೇಡಿಯಂನಲ್ಲಿ ನಿಖರವಾಗಿ 10,075 ಮಂದಿ ಅಭಿಮಾನಿಗಳು ಇದ್ದರು. ಭಾರತ-ಆಸ್ಟ್ರೇಲಿಯಾ 4 ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಬಲಗೊಂಡಿದೆ. ತೃತೀಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡ ಆರಂಭಿಕ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.