ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಹಿನ್ನಡೆ ಅನುಭವಿಸಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಮುಗ್ಗರಿಸಿದೆ.
ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಅದ್ಭುತ ಸಂಘಟಿತ ಪ್ರದರ್ಶನ ನೀಡಿ ಭಾರತವನ್ನು ಕಟ್ಟಿ ಹಾಕಿದೆ. 36 ವರ್ಷಗಳ ನಂತರ ಭಾರತದಲ್ಲಿ ನ್ಯೂಜಿಲೆಂಡ್ ತಂಡ ಅಮೋಘ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ಪಡೆ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿದೆ.

ನ್ಯೂಜಿಲೆಂಡ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಭಾರತ 46 ರನ್ ಗಳಿಸಿತ್ತು. ಇದಾದ ಬಳಿಕ ನ್ಯೂಜಿಲೆಂಡ್ 402 ರನ್ ಗಳಿಸಿ ಮೊದಲ ಇನಿಂಗ್ಸ್ ನಲ್ಲಿ 356 ರನ್ ಗಳ ಮುನ್ನಡೆ ಸಾಧಿಸಿತ್ತು. ಇದರ ನಡುವೆಯೂ ಧೈರ್ಯ ಕಳೆದುಕೊಳ್ಳದ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 460 ರನ್ ಗಳಿಸಿ, ಕಿವೀಸ್ ಪಡೆಗೆ 106 ರನ್ ಗಳ ಗುರಿಯನ್ನು ನೀಡಿತ್ತು. ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಭಾರತದ ನೆಲದಲ್ಲಿ 36 ವರ್ಷಗಳ ಬಳಿಕ ನ್ಯೂಜಿಲೆಂಡ್ ತಂಡ ಮೊದಲ ಬಾರಿಗೆ ಟೆಸ್ಟ್
ಗೆದ್ದು ಇತಿಹಾಸ ನಿರ್ಮಿಸಿದೆ. ಕಿವೀಸ್ ಪಡೆ ಕೊನೆ ಬಾರಿಗೆ 1988 ಟೆಸ್ಟ್ ಭಾರತದಲ್ಲಿ ಗೆಲುವು ಸಾಧಿಸಿತ್ತು. ಇದಲ್ಲದೇ 1969ರಲ್ಲಿ ನ್ಯೂಜಿಲೆಂಡ್ ಮತ್ತೊಂದು ಜಯ ದಾಖಲಿಸಿತ್ತು.
ನ್ಯೂಜಿಲೆಂಡ್ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ಗೆಲ್ಲಲು 107 ರನ್ ಗಳಿಸಬೇಕಿತ್ತು. ಐದನೇ ದಿನ ಬೆಂಗಳೂರಿನಲ್ಲಿ ಪವಾಡ ನಡೆಯುವ ನಿರೀಕ್ಷೆ ಇತ್ತು. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಬೆಂಗಳೂರಿನಲ್ಲಿ ಮೊದಲ ದಿನದ ಪಂದ್ಯ ಮಳೆಯಿಂದಾಗಿ ಸಂಪೂರ್ಣ ಹಾಳಾಗಿತ್ತು. ಇದಾದ ನಂತರವೂ ಮಳೆ ಹಲವು ಬಾರಿ ಪಂದ್ಯಕ್ಕೆ ಅಡ್ಡಿಪಡಿಸಿತು.
ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾ ಕೂಡ ಸಂಕಷ್ಟ ಪರಿಸ್ಥಿತಿಯಲ್ಲಿತ್ತು. ಹೀಗಾಗಿ ಕೊನೆಯ ದಿನ ಭಾರೀ ಮಳೆ ಸುರಿದು ಪಂದ್ಯ ಡ್ರಾ ಆಗಬೇಕು ಎಂದು ಅಭಿಮಾನಿಗಳು ಬೇಡಿಕೊಳ್ಳುತ್ತಿದ್ದರು. ಪಂದ್ಯದ ಐದನೇ ದಿನ ಬೆಳಗ್ಗೆ ಮಳೆ ಸುರಿದಿದ್ದರಿಂದ ಆಟ ತಡವಾಗಿ ಆರಂಭವಾಯಿತು. ಮೋಡ ಕವಿದ ವಾತಾವರಣದಲ್ಲಿ ನ್ಯೂಜಿಲೆಂಡ್‌ನ ಬ್ಯಾಟರ್‌ಗಳು ತಾಳ್ಮೆಯುವ ಬ್ಯಾಟಿಂಗ್ ಪ್ರದರ್ಶಿಸಿ ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸಿದರು.
ಟಾಸ್ ಗೆದ್ದ ರೋಹಿತ್ ಶರ್ಮಾ ಅವರ ತಪ್ಪಾದ ನಿರ್ಧಾರದಿಂದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಕಿವೀಸ್ ವೇಗದ ಬೌಲರ್‌ಗಳ ಉರಿ ಬೌಲಿಂಗ್ ದಾಳಿಯನ್ನು ಎದುರಿಸಲು ಭಾರತದ ಬ್ಯಾಟರ್‌ಗಳು ಹಿಂದೇಟು ಹಾಕಿದರು. ಪರಿಣಾಮ ಮ್ಯಾಟ್ ಹೆನ್ರಿ 5 ಮತ್ತು ವಿಲಿಯಂ ಒ'ರೂರ್ಕ್ 4 ವಿಕೆಟ್ ಪಡೆದು ಭಾರತವನ್ನು 46 ರನ್‌ಗಳಿಗೆ ಆಲೌಟ್ ಮಾಡಿದರು. ಇದಕ್ಕೆ ಪ್ರತ್ಯುತ್ತರವಾಗಿ ರಚಿನ್ ರವೀಂದ್ರ ಅವರ 134 ರನ್‌ಗಳ ಅದ್ಭುತ ಇನ್ನಿಂಗ್ಸ್ ನೆರವಿನಿಂದ ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 402 ರನ್ ಗಳಿಸಿ 356 ರನ್‌ಗಳ ಭಾರೀ ಮುನ್ನಡೆ ಸಾಧಿಸಿತು.
ಮೊದಲ ಇನ್ನಿಂಗ್ಸ್‌ನಲ್ಲಿ 356 ರನ್‌ಗಳ ಹಿನ್ನಡೆ ಅನುಭವಿಸಿದ್ದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಪುನರಾಗಮನವನ್ನು ಮಾಡಿತು. ಭಾರತದ ಪರ ರೋಹಿತ್ ಶರ್ಮಾ (52), ವಿರಾಟ್ ಕೊಹ್ಲಿ (70) ಅಡಿಪಾಯ ಹಾಕಿ ಔಟ್ ಆದರು. ಬಳಿಕ ಸರ್ಫರಾಜ್ ಖಾನ್ (150) ತಮ್ಮ ಟೆಸ್ಟ್ ವೃತ್ತಿಜೀವನದ ಚೊಚ್ಚಲ ಶತಕ ಸಿಡಿಸಿದರು. ಮತ್ತೊಂದೆಡೆ ರಿಷಭ್ ಪಂತ್ 99 ರನ್ ಗಳಿಸಿ ಶತಕ ವಂಚಿತರಾದರು.
ನಾಲ್ಕನೇ ದಿನದಾಟದಂದು ನ್ಯೂಜಿಲೆಂಡ್ ಹೊಸ ಚೆಂಡಿನೊಂದಿಗೆ ಪ್ರಾಬಲ್ಯ ಮುಂದುವರೆಸಿತು. ಟೀಮ್ ಇಂಡಿಯಾ ಒಂದು ಸಂದರ್ಭದಲ್ಲಿ 4 ವಿಕೆಟ್ ನಷ್ಟಕ್ಕೆ 408 ರನ್ ಕಲೆ ಹಾಕಿತ್ತು. ಆದರೆ, ಭಾರತ 54 ರನ್‌ಗಳ ಅಂತರದಲ್ಲಿ ತನ್ನ ಕೊನೆಯ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಅಂತಿಮವಾಗಿ ಭಾರತ ತಂಡ ಕಿವೀಸ್‌ಗೆ ಕೇವಲ 107 ರನ್‌ಗಳ ಗುರಿಯನ್ನು ನೀಡಿತು. ಸುಲಭವಾಗಿ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಕೇವಲ 2 ವಿಕೆಟ್ ಕಳೆದುಕೊಂಡು ಸುಲಭ ಜಯ ದಾಖಲಿಸಿತು. ಈ ಐತಿಹಾಸಿಕ ಗೆಲುವಿನ ಬಳಿಕ ಕಿವೀಸ್ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಅಕ್ಟೋಬರ್ 24 ರಿಂದ 28 ರವರೆಗೆ ಪುಣೆಯಲ್ಲಿ ನಡೆಯಲಿದೆ.