ಅಜೇಯ ಓಟ ಮುಂದುವರೆಸಿದ ಟೀಮ್ ಇಂಡಿಯಾ: ಪಾಕ್ ವಿರುದ್ಧದ ಫೈಟ್‌ಗೆ ರೆಡಿ
ನವದೆಹಲಿ: ಬ್ಯಾಟರ್‌ಗಳು ಡೆತ್ ಓವರ್‌ಗಳಲ್ಲಿ ಸ್ಥಿರ ಪ್ರದರ್ಶನ ನೀಡದೇ ಇದ್ದರೂ, ಭಾರತದ ಸ್ಪಿನ್ ಬೌಲರ್ಸ್ ನೀಡಿದ ಭರ್ಜರಿ ಪ್ರದರ್ಶನದ ಬಲದಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನ "ಎ" ಗುಂಪಿನ ಪಂದ್ಯದಲ್ಲಿ ನಮೀಬಿಯಾ ವಿರುದ್ಧ 93 ರನ್ ಜಯ ದಾಖಲಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಸೂರ್ಯ ಪಡೆ ಭಾನುವಾರ ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ನಾವು ಸಕಲ ರೀತಿಯಲ್ಲೂ ಸಿದ್ಧ ಎಂಬುದನ್ನು ಸಾರಿ ಹೇಳಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭಿಕ ಆಟಗಾರರು ಸ್ಥಿರ ಪ್ರದರ್ಶನ ನೀಡಿದರು. ಸಂಜು ಸ್ಯಾಮ್ಸನ್ ಕೇವಲ 8 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ನೆರವಿನಿಂದ 22 ರನ್ ಬಾರಿಸಿ ಮಿಂಚಿದರು. ಆದರೆ ಈ ಸ್ಕೋರ್‌ನ್ನು ದೊಡ್ಡದಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿಫಲರಾದರು.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ತಿಲಕ್ ವರ್ಮಾ, ಇಶಾನ್ ಕಿಶನ್‌ಗೆ ಉತ್ತಮ ಸಾಥ್ ನೀಡಿದರು. ಸಂಜು ಬ್ಯಾಟಿಂಗ್ ಮಾಡುವಾಗ ಇನ್ನೊಂದು ತುದಿಯಲ್ಲಿ ನಿಂತು ನೋಡುತ್ತಿದ್ದ ಇಶಾನ್, ಸಂಜು ಔಟ್ ಆಗುತ್ತಿದ್ದಂತೆ ಗೇರ್ ಶಿಫ್ಟ್ ಮಾಡಿದರು. ಇವರು ರನ್ ವೇಗ ಕುಗ್ಗದಂತೆ ಬ್ಯಾಟಿಂಗ್ ನಡೆಸಿದರು. ಇವರು ಪವರ್ ಪ್ಲೇನಲ್ಲಿ ಅರ್ಧಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು.
ಇಶಾನ್, ಹಾರ್ದಿಕ್ ಅರ್ಧಶತಕ
ಇಶಾನ್ ಕಿಶನ್ ಸ್ಫೋಟಕ ಆಟದ ಫಲವಾಗಿ ಭಾರತ 200ಕ್ಕೂ ಅಧಿಕ ಮೊತ್ತ ಕಲೆ ಹಾಕುವಲ್ಲಿ ಸಫಲವಾಯಿತು. ಇವರು ನಮೀಬಿಯಾ ವಿರುದ್ಧ 254ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದರು. ಇಶಾನ್ 24 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ 61 ರನ್ ಬಾರಿಸಿದರು.
ನಾಯಕ ಸೂರ್ಯಕುಮಾರ್ ಯಾದವ್ 12, ತಿಲಕ್ ವರ್ಮಾ 25 ರನ್ ಸಿಡಿಸಿದರು. 5ನೇ ವಿಕೆಟ್‌ಗೆ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಜೋಡಿ 39 ಎಸೆತಗಳಲ್ಲಿ 81 ರನ್ ಕಲೆ ಹಾಕಿತು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿದರು. ಶಿವಂ ದುಬೆ 23 ರನ್ ಚಚ್ಚಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 209 ರನ್ ಸಿಡಿಸಿತು. ನಮೀಬಿಯಾ ಪರ ಸ್ಪಿನ್ ಬೌಲರ್ಸ್ ಗೆರ್ಹಾರ್ಡ್ ಎರಾಸ್ಮಸ್ ತಲಾ 4 ವಿಕೆಟ್ ಪಡೆದರು.
ಸ್ಪಿನ್ ಬಲೆಗೆ ಬಿದ್ದ ನಮೀಬಿಯಾ
210 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನಮೀಬಿಯಾ ತಂಡದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ನಮೀಬಿಯಾ ತಂಡದ ಪರ ಲೌರೆನ್ ಸ್ಟೀನ್‌ಕ್ಯಾಂಪ್ (29), ಜಾನ್ ಫ್ರೈಲಿಂಕ್ (22), ಜಾನ್ ನಿಕೋಲ್ ಲೋಫ್ಟಿ-ಈಟನ್ (13), ನಾಯಕ ಗೆರ್ಹಾರ್ಡ್ ಎರಾಸ್ಮಸ್ (18), ಜೇನ್ ಗ್ರೀನ್ (11) ಮಾತ್ರ ಎರಡಂಕಿ ಮುಟ್ಟಿದರು. ಉಳಿದ ಬ್ಯಾಟರ್‌ಗಳು ಭಾರತದ ಸ್ಪಿನ್ ಬೌಲರ್‌ಗಳನ್ನು ಎದುರಿಸುವಲ್ಲಿ ವಿಫಲರಾದರು. ಅಂತಿಮವಾಗಿ ನಮೀಬಿಯಾ 18.2 ಓವರ್‌ಗಳಲ್ಲಿ 116 ರನ್ ಸಿಡಿಸಿ ಸೋಲು ಕಂಡಿತು.

ಟೀಮ್ ಇಂಡಿಯಾದ ಪರ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಕಮಾಲ್ ಪ್ರದರ್ಶನ ನೀಡಿದರು. ಇವರು ಕೇವಲ 2 ಓವರ್ ಬೌಲಿಂಗ್ ಮಾಡಿ 7 ರನ್ ನೀಡಿ ಮೂರು ವಿಕೆಟ್ ಪಡೆದರು. ಉಳಿದಂತೆ ಅಕ್ಷರ್ ಪಟೇಲ್ 2, ಹಾರ್ದಿಕ್ ಪಾಂಡ್ಯ 2 ವಿಕೆಟ್ ಕಬಳಿಸಿ ಮಿಂಚಿದರು.
ಅಂಕಪಟ್ಟಿ
ಎ ಗುಂಪಿನಲ್ಲಿ ಟೀಮ್ ಇಂಡಿಯಾದ ಆಡಿದ ಎರಡೂ ಪಂದ್ಯ ಗೆದ್ದಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಪಾಕಿಸ್ತಾನ ಸಹ ಇಷ್ಟೇ ಅಂಕಗಳನ್ನು ಕಲೆ ಹಾಕಿದ್ದು ರನ್ ರೇಟ್ ಸರಾಸರಿಯಲ್ಲಿ ಹಿಂದಿರುವುದರಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications