ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಫೆಬ್ರವರಿ 19 ರಿಂದ ಪ್ರಾರಂಭವಾಗಲಿದೆ. ಭಾರತ ತಂಡ ಫೆಬ್ರವರಿ 20 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಆದರೆ ಅದಕ್ಕೂ ಮುನ್ನ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದುಬೈಗೆ ಹೋಗಲು ಸಜ್ಜಾಗುತ್ತಿದ್ದ ಟೀಮ್ ಇಂಡಿಯಾ ಆಟಗಾರರಿಗೆ ಶಾಕ್ ಕೊಟ್ಟಿದೆ. ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ಆಟಗಾರರು ತಮ್ಮ ಕುಟುಂಬಗಳನ್ನು ಕರೆದುಕೊಂಡು ಹೋಗಲು ಅವಕಾಶವನ್ನು ಬಿಸಿಸಿಐ ನೀಡಿಲ್ಲ. ಈ ಮೆಗಾ ಟೂರ್ನಿಯ ಮೂಲಕ ಮೊದಲ ಬಾರಿಗೆ ಬಿಸಿಸಿಐ ತನ್ನ ಹೊಸ ನಿಯಮವನ್ನು ಜಾರಿಗೆ ತಂದಿದೆ.
ವರದಿಗಳ ಪ್ರಕಾರ, ಟೀಮ್ ಇಂಡಿಯಾ ಆಟಗಾರರ ಜೊತೆ ಪತ್ನಿಯರು, ಗೆಳತಿಯರು ಮತ್ತು ಕುಟುಂಬದ ಸದಸ್ಯರು ಪ್ರಯಾಣ ಮಾಡುವಂತಿಲ್ಲ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಫೆಬ್ರವರಿ 15ರಂದು ದುಬೈಗೆ ಹೊರಡಲಿದೆ. ಟೀಮ್ ಇಂಡಿಯಾ ಆಟಗಾರರ ಮೇಲೆ ಬಿಸಿಸಿಐ ಕಠಿಣ ನಿಯಮ ಹೇರಲು ಮುಂದಾದ ಬಳಿಕ ಈ ನಿರ್ಧಾರ ಮಾಡಿರುವುದು ಭಾರೀ ಚರ್ಚೆ ಆಗುತ್ತಿದೆ.

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲಿನ ನಂತರ ಈ ನಿಯಮದ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಈಗ ಬಿಸಿಸಿಐನ ಹೊಸ ನಿಯಮವನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಜಾರಿಗೆ ತರಲು ಮುಂದಾಗಿದೆ. ಟೀಮ್ ಇಂಡಿಯಾ ಫೆಬ್ರವರಿ 20 ರಂದು ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ನಂತರ ಫೆಬ್ರವರಿ 23 ರಂದು ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಭಾರತ ಮುಖಾಮುಖಿಯಾಗಲಿವೆ. ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ಭಾರತ ಕೊನೆಯ ಗುಂಪು ಹಂತದ ಪಂದ್ಯವನ್ನು ಆಡಲಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ತನ್ನ ಎಲ್ಲಾ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಉಳಿದ ಪಂದ್ಯಗಳು ಫೆಬ್ರವರಿ 19 ರಿಂದ ಪಾಕಿಸ್ತಾನದ ಮೂರು ನಗರಗಳಲ್ಲಿ ನಡೆಯಲಿವೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಮಾರ್ಚ್ 9 ರಂದು ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ಪ್ರವಾಸವು ಮೂರು ವಾರಗಳಿಗಿಂತ ಕಡಿಮೆ ಅವಧಿಯದ್ದಾಗಿರುವುದರಿಂದ ಆಟಗಾರರ ಕುಟುಂಬಗಳು ಅವರೊಂದಿಗೆ ಪ್ರಯಾಣಿಸಲು ಬಿಸಿಸಿಐ ಅವಕಾಶ ನೀಡಿಲ್ಲ. ಹೊಸ ನಿಯಮದ ಪ್ರಕಾರ, 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಪ್ರವಾಸಗಳಲ್ಲಿ ಮಾತ್ರ ಕುಟುಂಬಗಳು ಆಟಗಾರರೊಂದಿಗೆ ಗರಿಷ್ಠ ಎರಡು ವಾರಗಳವರೆಗೆ ಹೋಗಬಹುದು.
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜ, ವರುಣ್ ಚಕ್ರವರ್ತಿ.