ಚೆನ್ನೈನ ಚೆಪಾಕ್ ಮೈದಾನದಲ್ಲಿ ಐತಿಹಾಸಿಕ ಮೊದಲ ಟೆಸ್ಟ್ ಗೆಲುವಿನ ಬಳಿಕ ಟೀಮ್ ಇಂಡಿಯಾ ಕಾನ್ಪುರ ತಲುಪಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆಯೊಂದಿಗೆ ಮೇಲುಗೈ ಸಾಧಿಸಿದೆ. ಎರಡನೇ ಪಂದ್ಯ ಕಾನ್ಪುರದಲ್ಲಿ ಸೆಪ್ಟೆಂಬರ್ 27 ರಿಂದ ನಡೆಯಲಿದೆ.
ಒಂದೆಡೆ, ಭಾರತ ಈ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳಲು ಕಣ್ಣಿಟ್ಟಿದೆ. ಆದರೆ ಪ್ರವಾಸಿ ಬಾಂಗ್ಲಾದೇಶ ತಂಡವು ಕಾನ್ಪುರ ಟೆಸ್ಟ್ ಗೆದ್ದು ಸರಣಿಯನ್ನು ಸಮಬಲ ಮಾಡಲು ಭಾರೀ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಮಧ್ಯೆ ಚೆಪಾಕ್ ನಂತರ, ರೋಹಿತ್ ಪಡೆ ಕಾನ್ಪುರದಲ್ಲೂ ಹಲವು ದಾಖಲೆಗಳನ್ನು ಮಾಡುವ ಅವಕಾಶವನ್ನು ಹೊಂದಿದೆ.

ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಭಾರೀ ಯಶಸ್ಸು ಸಾಧಿಸಿದೆ. ಇತ್ತೀಚೆಗೆ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿದೆ. ಈಗ ಕಾನ್ಪುರ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದರೆ, ಟೆಸ್ಟ್ ಕ್ರಿಕೆಟ್‌ನ ನಾಲ್ಕನೇ ಯಶಸ್ವಿ ತಂಡವಾಗಲಿದೆ.
ಟೀಮ್ ಇಂಡಿಯಾ ಇದುವರೆಗೆ 580 ಪಂದ್ಯಗಳಲ್ಲಿ 179 ಪಂದ್ಯಗಳನ್ನು ಗೆದ್ದಿದೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಕೂಡ ಅಷ್ಟೇ ಸಂಖ್ಯೆಯ ಟೆಸ್ಟ್‌ಗಳಲ್ಲಿ ಗೆಲುವು ಕಂಡಿದೆ. ಕಾನ್ಪುರ ಟೆಸ್ಟ್ ಗೆಲ್ಲುವ ಮೂಲಕ ಭಾರತ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕುವ ಅವಕಾಶವನ್ನು ಹೊಂದಿದೆ.
ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಭರ್ಜರಿ ಆಲ್‌ರೌಂಡರ್ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಅಶ್ವಿನ್ ಚೆಪಾಕ್ ಮೈದಾನದಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಈಗ ಕಾನ್ಪುರದಲ್ಲಿ ಅವರು 9 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ ಅವರನ್ನು ಹಿಂದಿಕ್ಕಲಿದ್ದಾರೆ.
ಲಿಯಾನ್ 129 ಟೆಸ್ಟ್‌ಗಳಲ್ಲಿ 530 ವಿಕೆಟ್ ಪಡೆದಿದ್ದರೆ, ಅಶ್ವಿನ್ 101 ಟೆಸ್ಟ್‌ಗಳಲ್ಲಿ 522 ವಿಕೆಟ್ ಉರುಳಿಸಿದ್ದಾರೆ. ಇದಲ್ಲದೇ, ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ಹೆಚ್ಚು ಬಾರಿ 5 ವಿಕೆಟ್ ಪಡೆದ ದಾಖಲೆಯನ್ನು ಹೊಂದಿರುವ ಶೇನ್ ವಾರ್ನ್ (37 ಬಾರಿ) ಅವರನ್ನು ಅಶ್ವಿನ್ ಹಿಂದಿಕ್ಕುವ ಅವಕಾಶವಿದೆ. ಮತ್ತೊಂದೆಡೆ, ರವೀಂದ್ರ ಜಡೇಜಾ 300 ಟೆಸ್ಟ್ ವಿಕೆಟ್‌ಗಳ ಸಮೀಪದಲ್ಲಿದ್ದಾರೆ. ಕಾನ್ಪುರ ಟೆಸ್ಟ್‌ನಲ್ಲಿ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ ಅವರು ಟೆಸ್ಟ್‌ನಲ್ಲಿ 300 ವಿಕೆಟ್‌ಗಳನ್ನು ಪೂರೈಸಲಿದ್ದಾರೆ.
ಕಾನ್ಪುರ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತೊಂದು ದಾಖಲೆಯ ಸನಿಹವಿದ್ದಾರೆ. ಈ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಒಂದು ಶತಕ ಸಿಡಿಸಿದರೆ, ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿಯಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದ್ರಾವಿಡ್ ಅವರ ಹೆಸರಿನಲ್ಲಿ 48 ಅಂತಾರಾಷ್ಟ್ರೀಯ ಶತಕಗಳಿವೆ. ರೋಹಿತ್ ಕೂಡ ಒಟ್ಟು 48 ಶತಕಗಳನ್ನು ಬಾರಿಸಿದ್ದು, ದ್ರಾವಿಡ್ ದಾಖಲೆ ಬ್ರೇಕ್ ಮಾಡಲು ಕೇವಲ ಒಂದು ಶತಕದಿಂದ ಹಿಂದೆ ಉಳಿದಿದ್ದಾರೆ.
ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಈಗ ಕಾನ್ಪುರದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ವಿಶ್ವ ದಾಖಲೆ ಸೃಷ್ಟಿಲು ಸಜ್ಜಾಗಿದ್ದಾರೆ. ಈ ಪಂದ್ಯದಲ್ಲಿ ಅವರು ಕೇವಲ 35 ರನ್ ಗಳಿಸಿದರೆ 27 ಸಾವಿರ ಅಂತಾರಾಷ್ಟ್ರೀಯ ರನ್ ಗಳಿಸಿದ ನಾಲ್ಕನೇ ಆಟಗಾರನಾಗಲಿದ್ದಾರೆ. ಅವರ ಹೆಸರಿಗೆ ಇನ್ನೂ ಎರಡು ದಾಖಲೆಗಳನ್ನು ಸೇರುವ ಸಾಧ್ಯೆಗಳಿವೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 9000 ರನ್‌ಗಳ ಗಡಿ ಮುಟ್ಟುವ ಸಮೀಪದಲ್ಲಿದ್ದಾರೆ. ಆದರೆ, ಇದಕ್ಕಾಗಿ ಅವರು ಶತಕ ಬಾರಿಸಬೇಕಾಗಿದೆ. ಪ್ರಸ್ತುತ 114 ಟೆಸ್ಟ್‌ಗಳಲ್ಲಿ 8871 ರನ್‌ಗಳನ್ನು ಗಳಿಸಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 29 ಶತಕಗಳನ್ನು ಹೊಂದಿದ್ದಾರೆ. ಅವರು ಬಾಂಗ್ಲಾದೇಶ ವಿರುದ್ಧ ಒಂದು ಶತಕ ಗಳಿಸಿದರೆ, ಆಸ್ಟ್ರೇಲಿಯಾದ ಸರ್ ಬ್ರಾಡ್ಮನ್ (52 ಟೆಸ್ಟ್‌ಗಳಲ್ಲಿ 29 ಶತಕ) ಅವರನ್ನು ಹಿಂದಿಕ್ಕಲಿದ್ದಾರೆ.