Champions Trophy: 25 ವರ್ಷಗಳ ಹಿಂದೆ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀಗಿತ್ತು..!
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿದೆ. ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಅತ್ಯಂತ ಯಶಸ್ವಿ ತಂಡವಾಗಲು ಟೀಮ್ ಇಂಡಿಯಾ ಕೇವಲ ಒಂದು ಗೆಲುವಿನಿಂದ ದೂರದಲ್ಲಿದೆ. ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ಸೋಲಿಸುವಲ್ಲಿ ಯಶಸ್ವಿಯಾದರೆ, ಅತಿ ಹೆಚ್ಚು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡವಾಗಲಿದೆ. ಈಗಾಗಲೇ ಭಾರತ ಎರಡು ಬಾರಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಭಾರತ ತಂಡ ಸತತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯ ಫೈನಲ್ ತಲುಪಿದ್ದು, ಈ ಬಾರಿ ನ್ಯೂಜಿಲೆಂಡ್ ತಂಡವನ್ನು ಫೈನಲ್‌ನಲ್ಲಿ ಯಾವುದೇ ಬೆಲೆ ತೆತ್ತಾದರೂ ಸೋಲಿಸಿ 25 ವರ್ಷಗಳ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ಸಜ್ಜಾಗುತ್ತಿದೆ.

ಚಾಂಪಿಯನ್ಸ್ ಟ್ರೋಫಿ 2000ರ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಟೀಮ್ ಇಂಡಿಯಾ ಎದುರಿಸಿತ್ತು. ಈ ಹೈವೋಲ್ಟೇಜ್ ಪಂದ್ಯದಲ್ಲಿ ಕ್ರಿಸ್ ಕೈರ್ನ್ಸ್ ಅವರ ಭರ್ಜರಿ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಭಾರತವನ್ನು ಸೋಲಿಸಿತು. ಇದರೊಂದಿಗೆ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಕಿವೀಸ್ ಪಡೆ ಗೆದ್ದುಕೊಂಡಿತು. 2000ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೌರವ್ ಗಂಗೂಲಿ ನೇತೃತ್ವದ ಟೀಮ್ ಇಂಡಿಯಾ ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿಯಂತಹ ಸ್ಟಾರ್ ಆಟಗಾರರಿಂದ ತುಂಬಿತ್ತು. ಚಾಂಪಿಯನ್ಸ್ ಟ್ರೋಫಿ 2000ರ ಫೈನಲ್ ಆಡಿದ ಟೀಮ್ ಇಂಡಿಯಾ ಆಟಗಾರ ಬಗ್ಗೆ ಇಲ್ಲಿದೆ ಮಾಹಿತಿ.
ಸೌರವ್ ಗಂಗೂಲಿ
ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ 2000ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇದಾದ ಕೇವಲ 2 ವರ್ಷಗಳ ನಂತರ, ಟೀಮ್ ಇಂಡಿಯಾ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಫೈನಲ್ ಪಂದ್ಯ ಮಳೆಯಿಂದ ರದ್ದಾದ ಕಾರಣ, ಭಾರತ ತಂಡವನ್ನು ಶ್ರೀಲಂಕಾ ಜೊತೆ ಜಂಟಿ ವಿಜೇತರೆಂದು ಘೋಷಿಸಲಾಯಿತು. ಗಂಗೂಲಿ 2008 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ 2019 ರಿಂದ 2022 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಕೆಟ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಹುಲ್ ದ್ರಾವಿಡ್
ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ರಾಹುಲ್ ದ್ರಾವಿಡ್ ಕೇವಲ 22 ರನ್ ಗಳಿಸಿದ್ದರು. ಟೆಸ್ಟ್ ಮತ್ತು ಏಕದಿನ ಎರಡರಲ್ಲೂ 10000 ಕ್ಕೂ ಹೆಚ್ಚು ರನ್ ಗಳಿಸಿದ ನಂತರ ನಿವೃತ್ತರಾದ ದ್ರಾವಿಡ್ ಭಾರತ ತಂಡದ ಹೆಡ್‌ಕೋಚ್ ಆಗಿಯೂ ಸೇವೆ ಸಲ್ಲಿಸಿದರು. 2024ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಪ್ರಸ್ತುತ ಐಪಿಎಲ್ 2025ರಲ್ಲಿ ರಾಜಸ್ಥಾನ ರಾಯಲ್ಸ್ (ಆರ್‌ಆರ್)ನ ಹೆಡ್‌ಕೋಚ್ ಆಗಿದ್ದಾರೆ.
ರಾಬಿನ್ ಸಿಂಗ್
ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಮತ್ತು ಆಲ್‌ರೌಂಡರ್ ಆಗಿದ್ದ ರಾಬಿನ್ ಸಿಂಗ್, 25 ವರ್ಷಗಳ ಹಿಂದೆ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದ ಭಾಗವಾಗಿದ್ದರು. ಅವರು 136 ಏಕದಿನ ಪಂದ್ಯಗಳಲ್ಲಿ 2336 ರನ್ ಗಳಿಸಿದ್ದು, 69 ವಿಕೆಟ್ ಪಡೆದಿದ್ದಾರೆ.
ವಿಜಯ್ ದಹಿಯಾ
ನ್ಯೂಜಿಲೆಂಡ್ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ವಿಕೆಟ್ ಕೀಪರ್ ಆಗಿದ್ದ ವಿಜಯ್ ದಹಿಯಾ ಅಜೇಯ 1 ರನ್ ಗಳಿಸಿದ್ದರು. ಅವರು ಟೀಮ್ ಇಂಡಿಯಾ ಪರ 19 ಏಕದಿನ ಪಂದ್ಯಗಳನ್ನು ಆಡಿದ್ದು, 216 ರನ್ ಗಳಿಸಿದ್ದಾರೆ. ಅವರು ಐಪಿಎಲ್ 2022 ಮತ್ತು 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಹಾಯಕ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಅಜಿತ್ ಅಗರ್ಕರ್
ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಆಯ್ಕೆದಾರರಾಗಿ ಸೇವೆ ಸಲ್ಲಿಸುತ್ತಿರುವ ಅಜಿತ್ ಅಗರ್ಕರ್ ಟೀಮ್ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿದ್ದರು. ಅವರು ಭಾರತ ಪರ 26 ಟೆಸ್ಟ್ ಮತ್ತು 191 ಏಕದಿನ ಪಂದ್ಯಗಳಲ್ಲಿ ಒಟ್ಟು 346 ವಿಕೆಟ್ ಪಡೆದಿದ್ದಾರೆ.
ಯುವರಾಜ್ ಸಿಂಗ್
ಯುವರಾಜ್ ಸಿಂಗ್ 2000ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ನಂತರ, ಅವರು 2007 ರ ಟಿ20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು.
2019 ರಲ್ಲಿ ಕ್ರಿಕೆಟ್ ವೃತ್ತಿ ಬದುಕಿಗೆ ತೆರೆ ಎಳೆದರು. ಅವರು ಈಗ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್‌ನಲ್ಲಿ ಇಂಡಿಯಾ ಮಾಸ್ಟರ್ಸ್ ಪರ ಆಡುತ್ತಿದ್ದಾರೆ.
ಜಹೀರ್ ಖಾನ್
ಯುವರಾಜ್ ಅವರಂತೆಯೇ, ಜಹೀರ್ ಖಾನ್ ಕೂಡ ಪಾದಾರ್ಪಣೆ ಪಂದ್ಯವನ್ನಾಡಿದ್ದರು. ಇದಾದ ಬಳಿಕ ಟೀಮ್ ಇಂಡಿಯಾದ ಯಶಸ್ವಿ ವೇಗದ ಬೌಲರ್ ಆದರು. ಅವರು ಪ್ರಸ್ತುತ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅನಿಲ್ ಕುಂಬ್ಳೆ
ಚಾಂಪಿಯನ್ಸ್ ಟ್ರೋಫಿಯಲ್ಲಿ ಮಾಜಿ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಕೂಡ ಭಾರತ ತಂಡದ ಭಾಗವಾಗಿದ್ದರು. ಅವರು ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಕ್ರಿಕೆಟ್ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.
ಸಚಿನ್ ತೆಂಡೂಲ್ಕರ್
ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಸಚಿನ್ ತೆಂಡೂಲ್ಕರ್ 69 ರನ್ ಗಳಿಸಿ ಮಿಂಚಿದ್ದರು. 2013 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಸಚಿನ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಮಾರ್ಗದರ್ಶಕರಾಗಿದ್ದರು. ಪ್ರಸ್ತುತ ಯುವರಾಜ್ ಅವರೊಂದಿಗೆ ಅಂತರರಾಷ್ಟ್ರೀಯ ಮಾಸ್ಟರ್ಸ್ ಲೀಗ್‌ನಲ್ಲಿ ಆಡುತ್ತಿದ್ದಾರೆ.
ವೆಂಕಟೇಶ್ ಪ್ರಸಾದ್
ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ ಭಾರತ ಪರ ವೇಗಿ ವೆಂಕಟೇಶ್ ಪ್ರಸಾದ್ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ಏಳು ಓವರ್‌ಗಳಲ್ಲಿ 27 ರನ್ ನೀಡಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಪ್ರಸ್ತುತ ಟಿವಿ ಚಾನೆಲ್‌ಗಳಲ್ಲಿ ಕ್ರಿಕೆಟ್ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.
ವಿನೋದ್ ಕಾಂಬ್ಳಿ
ಟೀಮ್ ಇಂಡಿಯಾದ ಮಾಜಿ ಬ್ಯಾಟರ್ ವಿನೋದ್ ಕಾಂಬ್ಳಿ ಕೂಡ ಫೈನಲ್ ಆಡಿದ್ದರು. ನಿವೃತ್ತಿಯ ನಂತರ, ಅವರು ತರಬೇತುದಾರ ಮತ್ತು ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡಿದ್ದರು. ಆದರೆ ಅದೃಷ್ಟ ಅವರ ಕೈ ಹಿಡಿಯಲಿಲ್ಲ. ಸದ್ಯ ಕಾಂಬ್ಳಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಭಾರತ ಪ್ಲೇಯಿಂಗ್-11: ಸೌರವ್ ಗಂಗೂಲಿ (ನಾಯಕ), ರಾಹುಲ್ ದ್ರಾವಿಡ್, ರಾಬಿನ್ ಸಿಂಗ್, ವಿಜಯ್ ದಹಿಯಾ, ಅಜಿತ್ ಅಗರ್ಕರ್, ಯುವರಾಜ್ ಸಿಂಗ್, ಜಹೀರ್ ಖಾನ್, ಅನಿಲ್ ಕುಂಬ್ಳೆ, ಸಚಿನ್ ತೆಂಡೂಲ್ಕರ್, ವೆಂಕಟೇಶ್ ಪ್ರಸಾದ್ ಮತ್ತು ವಿನೋದ್ ಕಾಂಬ್ಳಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications