
ಜಿಂಬಾಬ್ವೆ ವಿರುದ್ಧದ ಭರ್ಜರಿ ಜಯದ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಿಗಳಾಗಿ ಸೆಮಿಫೈನಲ್ ತಲುಪಿರುವ ಟೀಂ ಇಂಡಿಯಾ, ಸೆಮಿಫೈನಲ್‌ನಲ್ಲಿ ಬಲಿಷ್ಠ ಇಂಗ್ಲೆಂಡ್ ಜೊತೆ ಸೆಣೆಸಲಿದೆ.
ಸೋಮವಾರ ಅಡಿಲೇಡ್ ತಲುಪಿರುವ ರೋಹಿತ್ ಶರ್ಮಾ ಪಡೆ, ವಿಶ್ರಾಂತಿ ಪಡೆಯಲಿದ್ದು, ಮಂಗಳವಾರದಿಂದ ಅಭ್ಯಾಸ ಆರಂಭಿಸಲಿದ್ದಾರೆ. ನವೆಂಬರ್ 10 ರಂದು ಅಡಿಲೇಡ್ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯ ನಡೆಯಲಿದೆ. ಮಂಗಳವಾರ ಬೆಳಿಗ್ಗೆ 10.30ರಿಂದ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಅಭ್ಯಾಸವನ್ನು ಆರಂಭಿಸಲಿದ್ದು, ಎರಡೂ ತಂಡಗಳ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಭಾನುವಾರ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಟೀಂ ಇಂಡಿಯಾ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್‌ರ ಭರ್ಜರಿ ಅರ್ಧಶತಕದ ನೆರವಿನೊಂದಿಗೆ ನಿಗದಿತ 20 ಓವರ್ ಗಳಲ್ಲಿ 186 ರನ್ ಗಳಿಸಿತು. ನಂತರ ಈ ಗುರಿಯನ್ನು ಬೆನ್ನತ್ತಿದ ಜಿಂಬಾಬ್ವೆ 115 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 71 ರನ್‌ಗಳ ಜಯ ಸಾಧಿಸಿತು.
ನೆದರ್ಲ್ಯಾಂಡ್ಸ್ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಆಘಾತ ನೀಡಿತು. ಸೋತ ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದರೆ, ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸಿದ ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ನವೆಂಬರ್ 9ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ-ನ್ಯೂಜಿಲೆಂಡ್ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ.

ಅಡಿಲೇಡ್ ತಲುಪಿದ ಟೀಂ ಇಂಡಿಯಾ
ಸೋಮವಾರ ಅಡಿಲೇಡ್‌ಗೆ ಆಗಮಿಸಿರುವ ರೋಹಿತ್ ಶರ್ಮಾ ಪಡೆ ಇಡೀ ದಿನ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಮಂಗಳವಾರದಿಂದ ತರಬೇತಿ ಆರಂಭಿಸಲಿದ್ದಾರೆ. 2007ರಲ್ಲಿ ಚೊಚ್ಚಲ ಆವೃತ್ತಿಯಲ್ಲಿ ಟಿ20 ವಿಶ್ವಕಪ್ ಗೆದ್ದ ನಂತರ ಟೀಂ ಇಂಡಿಯಾ ಇದುವರೆಗೂ ಟಿ20 ವಿಶ್ವಕಪ್ ಗೆದ್ದಿಲ್ಲ, ಈ ಬಾರಿ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಕಪ್ ಗೆಲ್ಲುವ ಉತ್ಸಾಹದಲ್ಲಿದೆ.
2016ರ ನಂತರ ಇಂಗ್ಲೆಂಡ್ ಪ್ರತಿಬಾರಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಇಂಗ್ಲೆಂಡ್ ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗವನ್ನು ಹೊಂದಿರುವುದರಿಂದ ಭಾರತಕ್ಕೆ ಕಠಿಣ ಸವಾಲು ಎದುರಾಗುವುದು ನಿಶ್ಚಿತವಾಗಿದ್ದು, ಫೈನಲ್ ತಲುಪಬೇಕಾದರೆ ಭಾರತ ಈ ಸವಾಲನ್ನು ಮೆಟ್ಟಿ ನಿಲ್ಲಬೇಕಾಗಿದೆ.
ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್ದೀಪ್ ಸಿಂಗ್ ಮೊಹಮ್ಮದ್ ಶಮಿ.
ಸ್ಟ್ಯಾಂಡ್‌ಬೈ ಆಟಗಾರರು: ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್