ಜುಲೈ 9 ಮಂಗಳವಾರ, ಶುಭಮನ್ ಗಿಲ್ ಅವರ ನಾಯಕತ್ವದಲ್ಲಿ ವಿಶ್ವ ಚಾಂಪಿಯನ್ ಭಾರತ ತಂಡವು ಪ್ರಸ್ತುತ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ 1-1 ಅಂಕಗಳ ಮೂಲಕ ಸಮಬಲ ಸಾಧಿಸಿದೆ.
ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿದ್ದು, ಸರಣಿಯನ್ನು ಯಾರು ಪಾಲಾಗಲಿದೆ ಎಂದು ತಿಳಿಯಲು ಕಾದು ನೋಡಬೇಕಾಗಿದೆ. ಜಿಂಬಾಬ್ವೆ ವಿರುದ್ಧದ ಟಿ20 ಸರಣಿ ಬಳಿಕ ಭಾರತ ತಂಡವು ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಿದೆ. ಈ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸುವ ಕುರಿತು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ.

ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಜುಲೈ 27 ರಿಂದ ಆಗಸ್ಟ್ 7 ವರೆಗೆ 3 ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ. ಈ ಸರಣಿಗಳಿಗಾಗಿ ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ತಂಡವನ್ನು ಪ್ರಕಟಿಸಲು ಮಾಡಲು ಆಯ್ಕೆ ಸಮಿತಿಯು ಮುಂದಿನ ವಾರ ಸಭೆ ಸೇರಲಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇತ್ತೀಚೆಗೆ ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್ ಮಾದರಿಗೆ ವಿದಾಯ ಹೇಳಿದ್ದಾರೆ. ಜಿಂಬಾಬ್ವೆ ಪ್ರವಾಸದಿಂದ ಕೂಡ ಹಿರಿಯ ಅನುಭವಿ ಆಟಗಾರರು ದೂರ ಉಳಿದಿದ್ದಾರೆ.
ಹೀಗಾಗಿ ಶ್ರೀಲಂಕಾ ಪ್ರವಾಸದಿಂದಲ್ಲೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಔಟ್ ಆಗುವ ಸಾಧ್ಯತೆಗಳಿವೆ. ಈ ಇಬ್ಬರ ಸ್ಥಾನಕ್ಕೆ ಬಿಸಿಸಿಐ ಯಾವ ಆಟಗಾರರನ್ನು ಆಯ್ಕೆ ಮಾಡುವುದೋ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಇಂತಹ ಸಂದರ್ಭದಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧದ ಸರಣಿಗೆ ನಾಯಕನ ಪಟ್ಟಕ್ಕೆ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಮತ್ತು ಶುಭಮನ್ ಗಿಲ್ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ. ಮತ್ತೊಂದೆಡೆ ಶ್ರೀಲಂಕಾ ಪ್ರವಾಸದಲ್ಲಿ ಹಿರಿಯ ಆಟಗಾರರು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮುಂಬರುವ ಸಂಪೂರ್ಣ ಕ್ರಿಕೆಟ್ ಋತುವಿಗೆ ತಯಾರಿ ನಡೆಸಬಹುದು ಎಂದು ಬಿಸಿಸಿಐ ಮೂಲ ತಿಳಿಸಿದೆ.
ಆಗಸ್ಟ್‌ನಿಂದ ಟೀಮ್ ಇಂಡಿಯಾ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಲಿದೆ. ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶದ ನಂತರ ಭಾರತ ತಂಡವು ಅಕ್ಟೋಬರ್ 16 ರಿಂದ ನವೆಂಬರ್ 5 ರವರೆಗೆ ನ್ಯೂಜಿಲೆಂಡ್‌ಗೆ ಆತಿಥ್ಯ ವಹಿಸಲಿದ್ದು, ಅಲ್ಲಿ ಮೂರು ಟೆಸ್ಟ್‌ಗಳ ಸರಣಿಯನ್ನು ಆಡಬೇಕಾಗುತ್ತದೆ.
ಬಳಿಕ ಭಾರತವು ನವೆಂಬರ್ 8 ಮತ್ತು 15 ರ ನಡುವೆ 4 ಟಿ20 ಪಂದ್ಯಗಳನ್ನು ಆಡಲು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ. ನಂತರ ನವೆಂಬರ್ 22 ರಿಂದ ಆಸ್ಟ್ರೇಲಿಯಾದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಭಾರತ ತಂಡ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನೂ ಗಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ತಯಾರಿ ನಡೆಸಬೇಕಿದೆ.