ಮುಂಬೈ: ನಾಯಕ ಸೂರ್ಯಕುಮಾರ್ ಯಾದವ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟರ್ ಅಭಿಷೇಕ್ ಶರ್ಮಾ ತಮ್ಮ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್‌ನಲ್ಲಿ ಸಂಜಯ್ ಕೃಷ್ಣಮೂರ್ತಿ ಅವರು ಹಿಡಿದ ಕ್ಯಾಚ್‌ಗೆ ಬಲಿಯಾದರು.

ಸಂಜು ಸ್ಯಾಮ್ಸನ್ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಇಶಾನ್ ಕಿಶನ್ ಸಹ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಇವರ ಆಟ 20 ರನ್‌ಗಳಿಗೆ ಕೊನೆಯಾಯಿತು. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅವರು ಜವಾಬ್ದಾರಿ ಮರೆತರು. ಇವರು 25 ರನ್ ಬಾರಿಸಿ ಔಟ್ ಆದರು. ಆಲ್‌ರೌಂಡರ್ ಶಿವಂ ದುಬೆ ಸೊನ್ನೆ ಸುತ್ತಿದರು. ಭಾರತ ಪವರ್ ಪ್ಲೇನಲ್ಲೇ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆಲ್‌ರೌಂಡರ್‌ಗಳಾದ ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ ಅವರು ಬ್ಯಾಟಿಂಗ್ ತಂಡಕ್ಕೆ ನೆರವಾಗಲಿಲ್ಲ. 7ನೇ ವಿಕೆಟ್‌ಗೆ ಅಕ್ಷರ್ ಪಟೇಲ್ ಹಾಗೂ ಸೂರ್ಯಕುಮಾರ್ ಯಾದವ್ ಅವರು ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಈ ಜೋಡಿಯು ನೆರೆದ ಅಭಿಮಾನಿಗಳಿಗೆ ಕೊಂಚ ರಂಜಿಸಿದರು. ಈ ಜೋಡಿ 24 ಎಸೆತಗಳಲ್ಲಿ 41 ರನ್‌ಗಳ ಜೊತೆಯಾಟ ನೀಡಿತು. ಈ ವೇಳೆ ಅಕ್ಷರ್ ಪಟೇಲ್ 14 ರನ್ ಬಾರಿಸಿ ಔಟ್ ಆದರು.
ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಅಮೋಘ ಬ್ಯಾಟಿಂಗ್ ನಡೆಸಿದರು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ಸೂರ್ಯ, ಆರ್ಭಟ ನಡೆಸಿದರು. ತವರು ಅಂಗಳದಲ್ಲಿ ಮನಮೋಹಕ ಬ್ಯಾಟ್ ಮಾಡಿದ ಸೂರ್ಯಕುಮಾರ್ ಯಾದವ್ ಅಭಿಮಾನಿಗಳನ್ನು ರಂಜಿಸಿದರು. ಯುಎಸ್‌ಎ ಬೌಲರ್‌ಗಳ ಸವಾಲನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ನಾಯಕ ಜವಾಬ್ದಾರಿಯುತ ಆಟವನ್ನು ಆಡಿದರು. ತಾವು ನೆಲಕಚ್ಚಿ ನಿಂತ ಬಳಿಕ ಬಿಗ್ ಹಿಟ್ ಬಾರಿಸಲು ಆರಂಭಿಸಿದರು. ಇವರ ಉತ್ತಮ ಆಟದ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 161 ರನ್ ಸೇರಿಸಿತು.
ನಾಯಕ ಸೂರ್ಯಕುಮಾರ್ ಯಾದವ್ ನ್ಯೂಜಿಲೆಂಡ್ ವಿರುದ್ಧ ಕಂಡುಕೊಂಡಿದ್ದ ಲಯವನ್ನು ಮುಂದುವರೆಸಿದರು. ಇವರು ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆರ್ಭಟಿಸಿದರು. ಇವರು ಆಡಿದ 49 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 84 ರನ್ ಬಾರಿಸಿ ಅಬ್ಬರಿಸಿದರು.