ವೆಸ್ಟ್ ಇಂಡೀಸ್ ವಿರುದ್ಧದ ಟಿಟ್ವೆಂಟಿ ಸರಣಿಯನ್ನು ಭಾರತ ಗೆಲ್ಲಬೇಕೆಂದರೆ ಈ ಆಟಗಾರರು ತಂಡದಲ್ಲಿರಲೇಬೇಕು!

ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಹರಿಣಗಳ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಭಾಗವಹಿಸಿ ಎರಡೂ ಸರಣಿಗಳಲ್ಲಿಯೂ ಕೂಡ ಹೀನಾಯವಾಗಿ ಸೋತು ಮುಖಭಂಗಕ್ಕೆ ಒಳಗಾಗಿರುವ ಟೀಮ್ ಇಂಡಿಯಾ ಇದೀಗ ತನ್ನ ಮುಂದಿನ ಸೆಣಸಾಟವನ್ನು ವೆಸ್ಟ್ ಇಂಡೀಸ್ ವಿರುದ್ಧ ನಡೆಸಲಿದೆ. ಹೌದು, ಕೆರಿಬಿಯನ್ನರು ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಏಕದಿನ ಹಾಗೂ ಟಿ ಟ್ವೆಂಟಿ ಸರಣಿಗಳು ನಡೆಯಲಿವೆ. ಮೊದಲಿಗೆ ಫೆಬ್ರವರಿ 6ರಿಂದ ಇತ್ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ ಆರಂಭವಾದರೆ, ಫೆಬ್ರವರಿ 16ರಿಂದ ಟಿ ಟ್ವೆಂಟಿ ಸರಣಿ ಆರಂಭವಾಗಲಿದೆ.
ಇನ್ನು ಈಗಾಗಲೇ ಇತ್ತಂಡಗಳು ಕೂಡ ತಂಡಗಳನ್ನು ಪ್ರಕಟಿಸಿದ್ದು, ಗಾಯದ ಸಮಸ್ಯೆಗೊಳಗಾಗಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈ ತಪ್ಪಿಸಿಕೊಂಡಿದ್ದ ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ದು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ ಟ್ವೆಂಟಿ ಎರಡೂ ಸರಣಿಗಳಲ್ಲಿಯೂ ಕೂಡ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳಲ್ಲಿ ಜಯ ಸಾಧಿಸುವುದರ ಮೂಲಕ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದ ಕಮ್ ಬ್ಯಾಕ್ ಮಾಡಲೇಬೇಕಾಗಿದ್ದು, ಸರಿಯಾದ ತಂಡವನ್ನು ಈ ಬಾರಿ ಕಣಕ್ಕಿಳಿಸಬೇಕಾಗಿದೆ.
ಅದರಲ್ಲಿಯೂ ಇತ್ತೀಚಿಗಷ್ಟೆ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ಆಡಿರುವ ವೆಸ್ಟ್ ಇಂಡೀಸ್ 3-2 ಅಂತರದಿಂದ ಜಯ ಸಾಧಿಸುವುದರ ಮೂಲಕ ಟೀಂ ಇಂಡಿಯಾಗೆ ಎಚ್ಚರಿಕೆಯ ಮುನ್ಸೂಚನೆಯನ್ನು ನೀಡಿದೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಬಲಿಷ್ಠ ತಂಡವನ್ನೇ ಕಣಕ್ಕೆ ಇಳಿಸಬೇಕಾದ ಅನಿವಾರ್ಯತೆ ಇದ್ದು, ಈ ಕೆಳಕಂಡ ಆಟಗಾರರನ್ನು ಟಿ ಟ್ವೆಂಟಿ ತಂಡದ ಆಡುವ ಬಳಗದಲ್ಲಿ ಕಡ್ಡಾಯವಾಗಿ ಸೇರ್ಪಡೆ ಮಾಡಿಕೊಳ್ಳಬೇಕಿದೆ.

ಆರಂಭಿಕ ಆಟಗಾರರು ಮತ್ತು ಮೂರನೇ ಕ್ರಮಾಂಕ
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯದೇ ಇದ್ದದ್ದು ಕೂಡ ಟೀಂ ಇಂಡಿಯಾಗೆ ಹಿನ್ನಡೆಯಾಯಿತು ಎಂದರೆ ತಪ್ಪಾಗಲಾರದು. ಕಳೆದ ವರ್ಷ 11 ಪಂದ್ಯಗಳನ್ನಾಡಿ 424 ರನ್ ಗಳಿಸಿ ಉತ್ತಮ ಸ್ಥಾನದಲ್ಲಿರುವ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯಬೇಕಿದೆ. ಕಳೆದ ವರ್ಷ 11 ಪಂದ್ಯಗಳನ್ನಾಡಿರುವ ಕೆಎಲ್ ರಾಹುಲ್ 4 ಬಾರಿ ಅರ್ಧ ಶತಕಗಳನ್ನು ಸಿಡಿಸಿದ್ದು, ರೋಹಿತ್ ಶರ್ಮಾ ಜತೆಗೆ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಕಳೆದ ವರ್ಷ ತಾನಾಡಿರುವ 8 ಟಿ ಟ್ವೆಂಟಿ ಪಂದ್ಯಗಳಲ್ಲಿ 4 ಬಾರಿ ಅಜೇಯನಾಗಿ ಉಳಿದುಕೊಂಡಿರುವ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಒಂದರಲ್ಲಿ ಗರಿಷ್ಠ 80 ರನ್ ಕಲೆಹಾಕಿದ್ದಾರೆ. ಹೀಗೆ ಮೂರನೇ ಕ್ರಮಾಂಕದಲ್ಲಿ ಉತ್ತಮ ಅಂಕಿ ಅಂಶ ಹೊಂದಿರುವ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿಯೂ ಕೂಡ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಿದೆ.

ಸೂರ್ಯಕುಮಾರ್ ಯಾದವ್ ಮತ್ತು ರಿಷಭ್ ಪಂತ್
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ನಾಲ್ಕನೇ ಕ್ರಮಾಂಕದ ಆಟಗಾರನಾಗಿ ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯಬೇಕು ಹಾಗೂ ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಕಣಕ್ಕಿಳಿಯುವುದು ಉತ್ತಮ ಆಯ್ಕೆಯಾಗಿದೆ. ಕಳೆದ ವರ್ಷ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 9 ಪಂದ್ಯಗಳಲ್ಲಿ 244 ರನ್ ಗಳಿಸಿ 3 ಅರ್ಧಶತಕಗಳನ್ನು ಸೂರ್ಯಕುಮಾರ್ ಯಾದವ್ ಸಿಡಿಸಿದ್ದರೆ, ಅತ್ತ ರಿಷಭ್ ಪಂತ್ ಕಳೆದ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 421 ರನ್ ಮತ್ತು ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ 213 ರನ್ ಗಳಿಸಿದ್ದಾರೆ.

ಅಲ್‌ರೌಂಡರ್ಸ್
ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವೆಂಕಟೇಶ್ ಅಯ್ಯರ್ ನಂತರ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಹೀಗೆ ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ವೆಂಕಟೇಶ ಅಯ್ಯರ್ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಆರನೇ ಕ್ರಮಾಂಕದ ಆಟಗಾರನಾಗಿ ಕಣಕ್ಕಿಳಿಯುವುದು ಉತ್ತಮ ಆಯ್ಕೆಯಾಗಿದೆ. ಮತ್ತೋರ್ವ ಆಲ್ ರೌಂಡರ್ ಅಕ್ಷರ್ ಪಟೇಲ್ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಾದ ಅನಿವಾರ್ಯತೆಯಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಕೊಡುಗೆಗಳನ್ನು ನೀಡುತ್ತಿದ್ದ ರವೀಂದ್ರ ಜಡೇಜಾ ವೆಸ್ಟ್ ಇಂಡೀಸ್ ವಿರುದ್ಧದ ಈ ಸರಣಿಗೆ ಅಲಭ್ಯರಾಗಿರುವುದರಿಂದ ಆ ಸ್ಥಾನಕ್ಕೆ ಅಕ್ಷರ್ ಪಟೇಲ್ ಉತ್ತಮ ಆಯ್ಕೆ. ಕಳೆದ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯ ಪಂದ್ಯವೊಂದರಲ್ಲಿ ಅಜೇಯ 69 ರನ್ ಸಿಡಿಸಿದ್ದ ದೀಪಕ್ ಚಹರ್ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವೊಂದರಲ್ಲಿ ಕೂಡ 54 ರನ್ ಕಲೆಹಾಕಿ ಟೀಮ್ ಇಂಡಿಯಾವನ್ನು ಬಹುತೇಕ ಗೆಲುವಿನತ್ತ ಕೊಂಡೊಯ್ದಿದ್ದರು. ಹೀಗೆ ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್ ವಿಭಾಗದಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿರುವ ದೀಪಕ್ ಚಹರ್ ಎಂಟನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಉತ್ತಮ ಆಯ್ಕೆಯಾಗಿದೆ.

ಬೌಲರ್‌ಗಳು
ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯ ಪರ್ಪಲ್ ಕ್ಯಾಪ್ ವಿಜೇತ ಹರ್ಷಲ್ ಪಟೇಲ್ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಬೌಲಿಂಗ್ ವಿಭಾಗದಲ್ಲಿ ಇರಲೇಬೇಕಾದ ಆಟಗಾರನಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭುವನೇಶ್ವರ್ ಕುಮಾರ್ ವಿಫಲರಾಗಿದ್ದರೂ ಸಹ ತಂಡದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಈತನನ್ನು ಕಣಕ್ಕಿಳಿಸುವುದು ಉತ್ತಮ ಆಯ್ಕೆ. ಇನ್ನು ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ತಂಡಕ್ಕೆ ಆಯ್ಕೆಯಾಗದೇ ಹೊರಬಿದ್ದಿದ್ದ ಯುಜ್ವೇಂದ್ರ ಚಹಲ್ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು, ಉತ್ತಮ ಬೌಲಿಂಗ್ ಪ್ರದರ್ಶನ ನೀಡಬಲ್ಲ ಸಾಮರ್ಥ್ಯವಿರುವ ಈತನಿಗೆ ಕಣಕ್ಕಿಳಿಯುವ ಅವಕಾಶವನ್ನು ನೀಡುವುದು ಅನಿವಾರ್ಯವೆಂದೇ ಹೇಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications