ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಜೇಯ ತಂಡವಾಗಿ ಲೀಗ್ ಹಂತದ ಅಭಿಯಾನ ಮುಗಿಸಿದೆ. ಆಡಿದ ಎಲ್ಲಾ 9 ಪಂದ್ಯಗಳಲ್ಲಿ 9 ತಂಡಗಳನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ನೆದರ್ಲೆಂಡ್ಸ್ ವಿರುದ್ಧ ಭಾನುವಾರ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 410 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಬೌಲಿಂಗ್‌ನಲ್ಲಿ ಎದುರಾಳಿಯನ್ನು 250ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು.
ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಲೀಗ್ ಹಂತದಲ್ಲಿ ಭಾರತ ತಂಡದ ಅಜೇಯ ಗೆಲುವಿನ ಓಟದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸಂದರ್ಭದಲ್ಲಿ ಅವರು ಭಾರತ ತಂಡದ ಈ ಅಜೇಯ ಗೆಲುವಿನ ಓಟದ ಹಿಂದಿನ ರಹಸ್ಯವನ್ನು ಕೂಡ ಹೇಳಿಕೊಂಡಿದ್ದಾರೆ. ಟೂರ್ನಿಯಲ್ಲಿ ತಾವು ಒಂದು ಸಂದರ್ಭದಲ್ಲಿ ಒಂದು ಪಂದ್ಯದ ಮೇಲೆ ಮಾತ್ರವೇ ಗಮನ ಹರಿಸಿದ್ದು ಈ ಗೆಲುವಿಗೆ ಕಾರಣವಾಯಿತು ಎಂದಿದ್ದಾರೆ.

"ಟೂರ್ನಿಯನ್ನು ನಾವು ಆರಂಭಿಸಿದಾಗಿನಿಂದಲೂ ಒಂದು ಪಂದ್ಯದ ಮೇಲೆ ಮಾತ್ರವೇ ಗಮನಹರಿಸಿದ್ದೆವು. ನಾವು ಯಾವತ್ತೂ ಅದಕ್ಕೂ ಹೆಚ್ಚು ದೂರ ಯೋಚಿಸಲು ಮುಂದಾಗಲಿಲ್ಲ. ಇದು ಸುದೀರ್ಘವಾದ ಟೂರ್ನಮೆಂಟ್ ಆಗಿದ್ದು ಎಲ್ಲಾ ಪಂದ್ಯಗಳಲ್ಲಿ ಆಡಿದರೆ 11 ಪಂದ್ಯಗಳಲ್ಲಿ ಆಡದಂತಾಗುತ್ತದೆ. ಹಾಗಾಗಿ ಈ ಸುದೀರ್ಘ ಟೂರ್ನಿಯಲ್ಲಿ ಬೇರ್ಪಡಿಸಿ ಬೇರ್ಪಡಿಸಿ ಚಿತ್ತ ನೆಡುವುದು ನಮ್ಮ ಗುರಿಯಾಗಿತ್ತು" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
"ನಾವು ಒಮ್ಮೆ ಒಂದು ಪಂದ್ಯದ ಮೇಲೆ ಮಾತ್ರವೇ ಗಮನ ಹರಿಸಿದ್ದೆವು. ಪ್ರತಿ ಪಂದ್ಯವನ್ನೂ ನಾವು ವಿಭಿನ್ನ ತಾಣಗಳಲ್ಲಿ ಆಡಿದ್ದು ಆ ತಾಣದ ಪರಿಸ್ಥಿತಿಗೆ ತಕ್ಕನಾಗಿ ಆಡಬೇಕಾಗಿತ್ತು. ನಾವು ಅದನ್ನೇ ಮಾಡಿದ್ದೇವೆ. ಎಲ್ಲಾ 9 ಪಂದ್ಯಗಳಲ್ಲಿ ಆಡಿದ ರೀತಿಗೆ ಬಹಳ ಸಂತಸವಾಗುತ್ತದೆ" ಎಂದಿದ್ದಾರೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ.
"ಮೊದಲ ಪಂದ್ಯದಿಂದ 9ನೇ ಪಂದ್ಯದ ವರೆಗೂ ಬಹಳ ಸವಾಲುಗಳಿದ್ದವು. ಪ್ರತಿ ಸಂದರ್ಭದಲ್ಲಿಯೂ ವಿಭಿನ್ನ ಆಟಗಾರರು ಮುಂದೆ ಬಂದು ತಂಡಕ್ಕೆ ಕೊಡುಗೆ ನೀಡಿದ್ದಾರೆ. ಎಲ್ಲರೂ ಕೂಡ ಜವಾಬ್ಧಾರಿ ವಹಿಸಿಕೊಳ್ಳಲು ಸಿದ್ಧವಾಗಿದ್ದರು. ವಿಭಿನ್ನ ತಾಣಗಳಲ್ಲಿ ಆಡುವುದು ನಿಜಕ್ಕೂ ಸವಾಲು. ಅದನ್ನು ನಾವು ನಿಜಕ್ಕೂ ಬಹಳ ಅದ್ಭುತವಾಗಿ ನಿಭಾಯಿಸಿದೆವು" ಎಂದಿದ್ದಾರೆ ರೋಹಿತ್ ಶರ್ಮಾ.
ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್‌ಗಳ ಗೆಲುವಿನೊಂದಿಗೆ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಿತು. ನಂತರ 9 ವಿವಿಧ ಸ್ಥಳಗಳಲ್ಲಿ ಆಡಿ ಗೆಲುವು ಸಾಧಿಸಿದೆ. ಪ್ರತಿ ಪಂದ್ಯದಲ್ಲಿಯೂ ಭಾರತ ಎದುರಾಳಿ ತಂಡವನ್ನು ನಿರ್ದಯವಾಗಿ ಮಣಿಸುವಲ್ಲಿ ಯಶಸ್ವುಯಾಗಿದೆ. ಇನ್ನು ಈ ಸಂದರ್ಭದಲ್ಲಿ ತಂಡದ ಪ್ರಮುಖ ಆಟಗಾರ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಗಾಯದ ಕಾರಣದಿಂದಾಗಿ ಕಳೆದುಕೊಂಡಿದ್ದರೂ ತಂಡ ಏಕಾಗ್ರತೆ ಕಳೆದುಕೊಳ್ಳದೆ ಮುನ್ನುಗ್ಗಿದೆ.
ಇನ್ನು ಭಾನುವಾರ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಕಣಕ್ಕಿಳಿದಿತ್ತು. ಹಾಗಿದ್ದರೂ ಬೌಲಿಂಗ್‌ನಲ್ಲಿ 9 ಆಟಗಾರರು ಬೌಲಿಂಗ್ ನಡೆಸುವ ಮೂಲಕ ಪ್ರಯೋಗವನ್ನು ನಡೆಸಿದ್ದಾರೆ ನಾಯಕ ರೋಹಿತ್ ಶರ್ಮಾ. ಐವರು ಪ್ರಮುಖ ಬೌಲರ್‌ಗಳನ್ನು ಹೊರತುಪಡಿಸಿ ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್ ಹಾಗೂ ಸ್ವತಃ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಬೌಲಿಂಗ್ ನಡೆಸಿದ್ದಾರೆ. ಇವರ ಪೈಕಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಕಲಾ ಒಂದು ವಿಕೆಟ್ ಕೂಡ ಕಬಳಿಸಿ ಗಮನ ಸೆಳೆದಿದ್ದಾರೆ.