ಗುವಾಹಟಿ: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಸೂರ್ಯ ಪಡೆ ಗೆದ್ದು, 5 ಪಂದ್ಯಗಳ ಟಿ20 ಸರಣಿಯನ್ನು 3-0ಯಿಂದ ಗೆದ್ದು ಕೊಂಡಿದೆ.
ಮೂರನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 153 ರನ್ ಸೇರಿಸಿತು. ಕಿವೀಸ್ ಪರ ಗ್ಲೆನ್ ಫಿಲಿಪ್ಸ್ (48) ಅವರನ್ನು ಬಿಟ್ಟರೆ ಬೇರೆ ಯಾವ ಬ್ಯಾಟರ್ ಸಹ ಸ್ಥಿರ ಪ್ರದರ್ಶನ ನೀಡಲಿಲ್ಲ. ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಈ ಗುರಿಯನ್ನು 2 ವಿಕೆಟ್ ಕಳೆದುಕೊಂಡು 10 ಓವರ್‌ಗಳಲ್ಲಿ ಮುಟ್ಟಿ ಬೀಗಿತು.

ಭಾರತದ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ ಅರ್ಧಶತಕ ಬಾರಿಸಿದ ಬ್ಯಾಟರ್ ಎನಿಸಿಕೊಂಡರು. ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಕ್ ಟು ಬ್ಯಾಕ್ ಎರಡನೇ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಭಾರತ ಹಲವು ದಾಖಲೆಗಳನ್ನು ನಿರ್ಮಿಸಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಪವರ್ ಪ್ಲೇನಲ್ಲಿ ಅಬ್ಬರಿಸಿತು. ಈ ಮೂಲಕ ಪವರ್ ಪ್ಲೇನಲ್ಲಿ 19 ಎಸೆತಗಳಲ್ಲಿ 50 ರನ್ ಬಾರಿಸಿದ ದೊಡ್ಡ ದಾಖಲೆ ನಿರ್ಮಿಸಿತು. ಇದಕ್ಕೂ ಮೊದಲು ಭಾರತ 2023ರಲ್ಲಿ ಬಾಂಗ್ಲಾದೇಶ ವಿರುದ್ಧ 22 ಎಸೆತಗಳಲ್ಲಿ 50 ರನ್ ಬಾರಿಸಿತ್ತು.
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಪವರ್ ಪ್ಲೇನಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಗಳಿಸಿದ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ. ಗುವಾಹಟಿಯಲ್ಲಿ ಭಾರತ 6 ಓವರ್‌ಗಳಲ್ಲಿ 94 ರನ್ ಬಾರಿಸಿದೆ. ಪವರ್ ಪ್ಲೇನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ವಿಶ್ವ ದಾಖಲೆ ಇಂಗ್ಲೆಂಡ್ ತಂಡದ್ದಾಗಿದೆ. ಇಂಗ್ಲೆಂಡ್ ಪವರ್ ಪ್ಲೇನಲ್ಲಿ 95 ರನ್ ಸಿಡಿಸಿದೆ.

ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದ್ದು, ಸರಣಿ ವಶಕ್ಕೆ ಪಡೆದಿದೆ. ಈ ಮೂಲಕ ಸತತ 11ನೇ ಟಿ20 ಸರಣಿ ಗೆದ್ದ ದಾಖಲೆ ನಿರ್ಮಿಸಿದೆ. ಈ ಮೂಲಕ ಭಾರತ, 2016 ಹಾಗೂ 2018ರಲ್ಲಿ ಪಾಕ್ ದಾಖಲೆಯ ಸಮಗಟ್ಟಿದೆ.
ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 150ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಅತಿ ಹೆಚ್ಚು ಎಸೆತಗಳು ಬಾಕಿ ಉಳಿದಂತೆ ಬೆನ್ನಟ್ಟಿದ ವಿಶ್ವ ದಾಖಲೆ ನಿರ್ಮಿಸಿದೆ. ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 154 ರನ್‌ಗಳ ಗುರಿಯನ್ನು 60 ಎಸೆತಗಳು ಬಾಕಿ ಇರುವಾಗ ಮುಟ್ಟಿ ಸಂಭ್ರಮಿಸಿದೆ. ಈ ಮೊದಲು ಈ ದಾಖಲೆ ವೆಸ್ಟ್ ಇಂಡೀಸ್ ಹೆಸರಿನಲ್ಲಿತ್ತು.
ಗುವಾಹಟಿಯಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪವರ್ ಪ್ಲೇನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಕಲೆ ಹಾಕಿದೆ. ಇದಕ್ಕೂ ಮೊದಲು 2018ರಲ್ಲಿ ಭಾರತ ಕಿವೀಸ್ ವಿರುದ್ಧ ಪವರ್ ಪ್ಲೇನಲ್ಲಿ 91 ರನ್ ಸಿಡಿಸಿತ್ತು.