ಇಂಗ್ಲೆಂಡ್ ಹಾಗೂ ಚಾಂಪಿಯನ್ಸ್ ಟ್ರೋಫಿಗೆ ಇನ್ನು ಭಾರತ ತಂಡವನ್ನು ಪ್ರಕಟಿಸಿಲ್ಲ. ಜನವರಿ 18 ರಂದು ಉಭಯ ಸರಣಿಗಳಿಗೆ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಬಿಸಿಸಿಐ ಈ ಬಗ್ಗೆ ಶುಕ್ರವಾರ ಮಹತ್ವದ ಮಾಹಿತಿಯನ್ನು ನೀಡಿದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ ಅಗರ್ಕರ್ ಶನಿವಾರ ಪತ್ರಿಕಾಗೋಷ್ಠಿಯನ್ನು ಮಧ್ಯಾಹ್ನ 12.30ರ ಬಳಿಕ ನಡೆಸುವ ಸಾಧ್ಯತೆ ಇದೆ.
ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಇದೇ ವೇಳೆ ಪ್ರಕಟಿಸಲಾಗುವುದು. ಇದಕ್ಕೂ ಮುನ್ನ ಆಯ್ಕೆ ಸಮಿತಿಯ ಸಭೆ ನಡೆಯಲಿದೆ. ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಲಾಗುವುದು ಎಂದು ತಿಳಿದು ಬಂದಿದೆ.

ಬಿಸಿಸಿಐ ತಂಡದಲ್ಲಿ ಹಾಗೂ ಆಟಗಾರರಲ್ಲಿ ಶಿಸ್ತನ್ನು ತರಲು 10 ಅಂಶಗಳನ್ನು ಪ್ರಕಟಿಸಿತ್ತು. ಬಿಸಿಸಿಐ ಪ್ರಕಟಣೆಯಲ್ಲಿ ಇನ್ನು ಆಟಗಾರರ ಕುಟುಂಬಸ್ಥರು ಅವರೊಂದಿಗೆ ಪ್ರವಾಸ ನಡೆಸುವುದಕ್ಕೆ ಬ್ರೇಕ್ ಹಾಕಲಾಗಿದ್ದು, ಆಟಗಾರರ ಸಹಾಯದ ಸಿಬ್ಬಂದಿಗಳಿಗೂ ತಡೆ ಒಡ್ಡಲಾಗಿದೆ.
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೂ ಮುನ್ನ ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಜನವರಿ 22 ರಿಂದ ಆಡಲಿದೆ. ಈ ಸರಣಿಯ ಮೊದಲ ಪಂದ್ಯ ಕೋಲ್ಕತ್ತಾದಲ್ಲಿ ನಡೆದರೆ, ಜ.25 ರಂದು ಚೆನ್ನೈನಲ್ಲಿ, ಜ.28ರಂದು ರಾಜ್‌ಕೋಟ್‌ನಲ್ಲಿ, ಜ.31 ರಂದು ಪುಣೆಯಲ್ಲಿ, ಫೆ.2 ರಂದು ಮುಂಬೈನಲ್ಲಿ ಟಿ20 ಸರಣಿ ನಡೆಯಲಿದೆ.

ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 6 ರಿಂದ ಆರಂಭವಾಗಲಿದೆ. ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಲಿದೆ. ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಲಿದ್ದು, ಭಾರತದ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ.
ಈ ಬಾರಿ ಚಾಂಪಿಯನ್ಸ್ ಟ್ರೋಫಿ ಏಕದಿನ ಫಾರ್ಮೆಟ್‌ನಲ್ಲಿ ನಡೆಯಲಿದ್ದು, ಪಾಕಿಸ್ತಾನ ಹಾಗೂ ದುಬೈನಲ್ಲಿ ಪಂದ್ಯಗಳು ನಡೆಯಲಿವೆ. 8 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ತನ್ನ ಅಭಿಯಾನವನ್ನು ಫೆ.20 ರಂದು ಆರಂಭಿಸಲಿದೆ. ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಮಾ.2 ರಂದು ಆಡಲಿದೆ.
ಎ ಗುಂಪಿನಲ್ಲಿ ಆತಿಥೇಯ ಪಾಕಿಸ್ತಾನ ಭಾರತ, ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ. ಇನ್ನು ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ.
ಟೀಮ್ ಇಂಡಿಯಾದಲ್ಲಿ ಯಾವೆಲ್ಲಾ ಆಟಗಾರರಿಗೆ ಸ್ಥಾನ ನೀಡುತ್ತಾರೆ ಎಂಬುದು ಕುತೂಹಲ ಹೆಚ್ಚಿಸಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಮನಮೋಹಕ ಪ್ರದರ್ಶನ ನೀಡುತ್ತಿರುವ ಕರುಣ್ ನಾಯರ್, ಮಯಾಂಕ್ ಅಗರ್‌ವಾಲ್ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯುತ್ತಾರಾ ಕಾದು ನೋಡಬೇಕಿದೆ.