ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿ ಮುಗಿದಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲನ್ನು ಕಂಡಿದೆ. ದಕ್ಷಿಣ ಆಫ್ರಿಕಾ 2-0ಯಿಂದ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಈಗ ಉಭಯ ತಂಡಗಳು ಏಕದಿನ ಸರಣಿಯಲ್ಲಿ ಕಾದಾಟ ನಡೆಸಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯ ರಾಂಚಿಯಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾದ ಆಟಗಾರರು ರಾಂಚಿ ತಲುಪಿದ್ದಾರೆ.
ಟೀಮ್ ಇಂಡಿಯಾದ ಆಟಗಾರರು ರಾಂಚಿ ತಲುಪುತ್ತಿದ್ದಂತೆ ಅಭ್ಯಾಸವನ್ನು ನಡೆಸಿದರು. ಇದೇ ವೇಳೆ ಭಾರತ ತಂಡದ ಆಟಗಾರರು ಎಂಎಸ್ ಧೋನಿ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಧೋನಿ ಅವರ ಮನೆಯಲ್ಲಿ ಭೋಜನಕೂಟವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ರಿಷಭ್ ಪಂತ್ ಸೇರಿದಂತೆ ಹಲವು ಆಟಗಾರರು ಧೋನಿ ಮನೆಗೆ ಭೇಟಿ ನೀಡಿದರು. ಟೀಮ್ ಇಂಡಿಯಾ ರಾಂಚಿಯಲ್ಲಿ ಪಂದ್ಯಗಳನ್ನು ಆಡಲು ಬಂದಾಗ ಧೋನಿ ಅವರ ಮನೆಯಲ್ಲಿ ಆಟಗಾರರು ಸೇರುತ್ತಾರೆ.

ಧೋನಿ ಅವರನ್ನು ಭೇಟಿ ಮಾಡಲು ವಿರಾಟ್, ಧೋನಿ ಅವರ ಮನೆಗೆ ತೆರಳಿದರು. ಈ ವೇಳೆ ವಿರಾಟ್ ಕೊಹ್ಲಿ ಧೋನಿ ಅವರ ಮನೆಗೆ ಹೋಗುವ ಮುನ್ನ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡರು. ಧೋನಿ ಹಾಗೂ ವಿರಾಟ್ ಅವರ ಭೇಟಿ ಅಭಿಮಾನಿಗಳಿಗೆ ಖುಷಿ ನೀಡಿದೆ. ವಿರಾಟ್, ಧೋನಿ ಮನೆಗೆ ಭೇಟಿ ನೀಡಲಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ಜನರು ಧೋನಿಯ ಮನೆಯ ಮುಂದೆ ಜಮಾಯಿಸಿದರು. ಇದೇ ವೇಳೆ ಅಭಿಮಾನಿಗಳು ತೆಗೆದ ವಿಡಿಯೋಗಳು ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿವೆ. ಇದಕ್ಕೂ ಮೊದಲು ಸಹ ವಿರಾಟ್ ಕೊಹ್ಲಿ ಸಾಕಷ್ಟು ಬಾರಿ ಧೋನಿ ಅವರ ಮನೆಗೆ ಭೇಟಿ ನೀಡಿದ್ದರು.
ವಿರಾಟ್ ಅವರನ್ನು ಬಿಟ್ಟರೆ, ಧೋನಿ ಅವರ ಶಿಷ್ಯ ರಿಷಭ್ ಪಂತ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಧೋನಿ ಅವರ ಮನೆಗೆ ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ರುತುರಾಜ್ ಗಾಯಕ್ವಾಡ್ ಮತ್ತೆ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಇವರು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ತಂಡದ ಭಾಗವಾಗಿದ್ದಾರೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡವುಣ ಮೊದಲ ಏಕದಿನ ಪಂದ್ಯ ನವೆಂಬರ್ 30 ರಂದು ರಾಂಚಿಯಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್‌ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತೆ ತಂಡಕ್ಕೆ ಮರಳಿದ್ದಾರೆ. ಈ ಸ್ಟಾರ್ ಆಟಗಾರರು ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ನಿಂದ ವಿದಾಯ ಹೇಳಿದ್ದರಿಂದ ಭಾರತದ ಪರ ಸ್ಟಾರ್ ಆಟಗಾರರು ಬರೀ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಅಭಿಮಾನಿಗಳ ಕಣ್ಣು ಈ ಸರಣಿಯ ಮೇಲೆ ನೆಟ್ಟಿರಲಿದೆ.