ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್ ಪಂದ್ಯ ಶುಕ್ರವಾರ ಆಡಿಲೇಡ್‌ನಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಲು ಟೀಮ್ ಇಂಡಿಯಾ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗಲೇ ಮೊದಲ ಟೆಸ್ಟ್‌ನಲ್ಲಿ ಜಯ ಸಾಧಿಸಿರುವ ಪ್ರವಾಸಿ ತಂಡ, ಮತ್ತೊಂದು ಪಂದ್ಯ ಗೆದ್ದು, ಅಂತರವನ್ನು ಹಿಗ್ಗಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಟೀಮ್ ಮ್ಯಾನೇಜ್ಮೆಂಟ್ ಸಹ ಚರ್ಚೆಗಳು ನಡೆಸುತ್ತಿದೆ. ಒಟ್ಟಿನಲ್ಲಿ ಆಡಿಲೇಡ್ ಟೆಸ್ಟ್ ಗೆಲುವಿನ ರಣ ತಂತ್ರವನ್ನು ಟೀಮ್ ಇಂಡಿಯಾ ಹೆಣೆದುಕೊಳ್ಳುತ್ತಿದೆ.
ಎರಡನೇ ಟೆಸ್ಟ್ ಹಗಲು ರಾತ್ರಿ ಆಗಿರಲಿದೆ. ಡೇ ಆಂಡ್ ನೈಟ್ ಟೆಸ್ಟ್ ಹಲವು ಯುವ ಆಟಗಾರರ ಪಾಲಿಗೆ ಮೊದಲ ಅನುಭವ ಆಗಿರಲಿದೆ. ಇನ್ನು ಅನುಭವಿ ಆಟಗಾರರು ಈಗಾಗಲೇ ನಾಲ್ಕು ಹಗಲು ರಾತ್ರಿ ಟೆಸ್ಟ್ ಆಡಿದ್ದಾರೆ. ಹೀಗಾಗಿ ಪಿಂಕ್ ಬೌಲ್ ಹೇಗೆ ವರ್ತನೆ ಮಾಡುತ್ತದೆ ಎಂಬುದನ್ನು ಅವರು ಬಲ್ಲರು. ಈಗ ಟೀಮ್ ಇಂಡಿಯಾದ ಮುಂದಿರುವ ಪ್ರಶ್ನೆ ಒಂದೇ. ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ರೋಹಿತ್ ಶರ್ಮಾ ಈಗ ತಂಡ ಸೇರಿಕೊಂಡಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ಯಾವ ಸ್ಥಾನದಲ್ಲಿ ಆಡಬೇಕು ಎಂಬ ಚರ್ಚೆ ಆರಂಭವಾಗಿದೆ.

ಅಸಲಿಗೆ ಈ ಚರ್ಚೆ ಆರಂಭವಾಗಲು ಕಾರಣ ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ತೋರಿಸಿರುವ ಕೆಚ್ಚೆದೆಯ ಆಟ. ರಾಹುಲ್ ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ನೆಲಕಚ್ಚಿ ಬ್ಯಾಟ್ ಮಾಡಿದ್ದರು. ಈ ಮೂಲಕ ಟೀಮ್ ಮ್ಯಾನೇಜ್ಮೆಂಟ್ ಗಮನ ಸೆಳೆದಿದ್ದರು. ಈಗ ಎರಡನೇ ಟೆಸ್ಟ್‌ನಲ್ಲಿ ರೋಹಿತ್ ಆಗಮನದಿಂದ ರಾಹುಲ್ ಅವರ ಸ್ಥಾನಕ್ಕೆ ತೊಂದರೆ ಇದೆಯಾ ಎಂಬ ಪ್ರಶ್ನೆಗಳು ಆರಂಭವಾಗುತ್ತವೆ. ಆದರೆ ರೋಹಿತ್ ಮಧ್ಯಮ ಕ್ರಮಾಂಕದಲ್ಲಿ ಆಡಲು ಸಹ ಸೈ ಎನ್ನುವ ಮಾಹಿತಿಗಳು ಬರುತ್ತಿವೆ. ಇದಕ್ಕೆ ಪಿಎಂ ಇಲೆವೆನ್ ವಿರುದ್ಧ ಆಡಿದ ಪಂದ್ಯವೇ ಸಾಕ್ಷಿ.
ರೋಹಿತ್ ಆರಂಭಿಕರಾಗಿ ಕಣಕ್ಕೆ ಇಳಿಯದಿದ್ದರೆ ಯಾವ ಕ್ರಮಾಂಕದಲ್ಲಿ ಆಡಬೇಕು ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಹಲವರು ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ರೋಹಿತ್ ಐದನೇ ಕ್ರಮಾಂಕದಲ್ಲಿ ಆಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅಂಕಿ ಅಂಶಗಳು ರೋಹಿತ್ ಆರನೇ ಕ್ರಮಾಂಕದಲ್ಲಿ ಆಡಿದರೆ ಬೆಸ್ಟ್ ಎಂಬುದನ್ನು ಹೇಳುತ್ತಿವೆ.
ರೋಹಿತ್ ಶರ್ಮಾ ಯಾವುದೇ ಕ್ರಮಾಂಕದಲ್ಲಾದ್ರೂ ಆಡಬಲ್ಲ ಪ್ಲೇಯರ್. ಆದರೆ ಅಂಕಿ ಅಂಶಗಳನ್ನು ನೋಡಿದಾಗ ಅವರು ಐದನೇ ಸ್ಥಾನಕ್ಕಿಂತ, ಆರನೇ ಸ್ಥಾನದಲ್ಲಿ ಆಡುವುದು ಸೂಕ್ತ ಎಂದು ತೋರಿಸುತ್ತಿವೆ. ಅಂದಹಾಗೆ ರೋಹಿತ್ ಐದನೇ ಸ್ಥಾನದಲ್ಲೂ 48.55ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಆದರೆ ಆರನೇ ಕ್ರಮಾಂಕದಲ್ಲಿ ಇದಕ್ಕಿಂತಲೂ ಉತ್ತಮವಾಗಿ ಅಂದರೆ 60.71ರ ಸರಾಸರಿಯಲ್ಲಿ ರನ್ ಸೇರಿಸಿದ್ದಾರೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಒಟ್ಟು 9 ಪಂದ್ಯಗಳಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 3 ಅರ್ಧಶತಕ ಸೇರಿದಂತೆ 437 ರನ್ ಸಿಡಿಸಿದ್ದಾರೆ. ಇನ್ನು ಆರನೇ ಕ್ರಮಾಂಕದಲ್ಲಿ ರೋಹಿತ್ 16 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, 1037 ರನ್ ಬಾರಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಆರು ಅರ್ಧಶತಕಗಳು ಸೇರಿವೆ. ತಂಡ ಗೆಲುವಿನ ಕನಸು ಕಾಣುತ್ತಿರುವಾಗ ಅಂಕಿ ಅಂಶಗಳು ಇವರು ಆರನೇ ಸ್ಥಾನದಲ್ಲಿ ಆಡುವುದು ಬೆಸ್ಟ್ ಎಂದು ಸೂಚಿಸುತ್ತವೆ. ಆದರೆ ಎರಡನೇ ಟೆಸ್ಟ್‌ನಲ್ಲಿ ರೋಹಿತ್ ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬ ಪ್ರಶ್ನೆಗೆ ಭಾರತದ ಮೊದಲ ಇನಿಂಗ್ಸ್‌ನಲ್ಲಿ ಉತ್ತರ ಸಿಗಲಿದೆ.