ಟಿ20 ವಿಶ್ವಕಪ್ ಲೀಗ್ ಹಂತದ ಪಂದ್ಯಗಳು ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಇನ್ನು ಮೇಲೆ 10ನೇ ಆವೃತ್ತಿಯ ಟಿ20 ವಿಶ್ವಕಪ್ ರೋಚಕತೆ ಹೆಚ್ಚಲಿದೆ. ಭಾರತ ಈಗಾಗಲೇ ಲೀಗ್ ಹಂತದಲ್ಲಿ ಆಡಿರುವ ಮೂರು ಪಂದ್ಯಗಳನ್ನು ಗೆದ್ದು ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದೆ. ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ ಬುಧವಾರ ತನ್ನ ಲೀಗ್ ಹಂತದ ಕೊನೆಯ ಪಂದ್ಯವನ್ನು ನೆದರ್‌ಲ್ಯಾಂಡ್ ವಿರುದ್ಧ ಆಡಲಿದೆ.
ಫೆಬ್ರವರಿ 7 ರಂದು ಟೀಮ್ ಇಂಡಿಯಾ ಉದ್ಘಾಟನಾ ದಿನದಂದು ತನ್ನ ಮೊದಲ ಪಂದ್ಯವನ್ನು ಯುಎಸ್‌ಎ ವಿರುದ್ಧ ಆಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೂರ್ಯಕುಮಾರ್ ಯಾದವ್ ಪಡೆ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 161 ರನ್ ಸೇರಿಸಿತು. ಈ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಮನಮೋಹಕ ಇನಿಂಗ್ಸ್ ಕಟ್ಟಿ ತಂಡಕ್ಕೆ ಆಧಾರವಾದರು. ಇವರು 49 ಎಸೆತಗಳಲ್ಲಿ 84 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಭಾರತ ಯುಎಸ್‌ಎ ತಂಡವನ್ನು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 132 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಸಫಲವಾಗಿ 29 ರನ್ ಜಯ ದಾಖಲಿಸಿತು.

ಲೀಗ್ ಹಂತದ ಎರಡನೇ ಪಂದ್ಯವನ್ನು ಭಾರತ ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಆಡಿತು. ಈ ಪಂದ್ಯದಲ್ಲೂ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 209 ರನ್ ಸೇರಿಸಿತು. ಈ ಪಂದ್ಯದಲ್ಲಿ ಇಶಾನ್ ಕಿಶನ್ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ವರುಣ್ ಚಕ್ರವರ್ತಿ ಬಿಗುವಿನ ದಾಳಿ ನಡೆಸಿ ನಮೀಬಿಯಾವನ್ನು 116 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಸಫಲರಾದರು. ಪರಿಣಾಮ ಭಾರತ ಟಿ20 ವಿಶ್ವಕಪ್‌ನಲ್ಲಿ ಅತಿ ದೊಡ್ಡ ಗೆಲುವು ದಾಖಲಿಸಿತು.
ಟಿ20 ವಿಶ್ವಕಪ್‌ನ ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ, ಫೆಬ್ರವರಿ 15 ರಂದು ಕೊಲಂಬೋದಲ್ಲಿ ನಡೆಯಿತು. ಈ ಪಂದ್ಯದ ಪವರ್ ಪ್ಲೇನಲ್ಲಿ ಇಶಾನ್ ಕಿಶನ್ ಪವರ್ ಫುಲ್ ಬ್ಯಾಟಿಂಗ್ ನಡೆಸಿ ಆರ್ಭಟಿಸಿದರು. ಇವರು 40 ಎಸೆತಗಳಲ್ಲಿ 77 ರನ್ ಸಿಡಿಸಿದ ಪರಿಣಾಮ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 175 ರನ್ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಪಾಕ್ ತಂಡ 114 ರನ್‌ಗಳಿಗೆ ಆಲೌಟ್ ಆಯಿತು. 61 ರನ್‌ಗಳ ಗೆಲುವು ದಾಖಲಿಸಿದ ಭಾರತ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದು, ಟಿ20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ 8ನೇ ಗೆಲುವು ದಾಖಲಿಸಿದ ಸಾಧನೆ ಮಾಡಿತು.
ಭಾರತ ಬುಧವಾರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನೆದರ್‌ಲ್ಯಾಂಡ್ ವಿರುದ್ಧ ಸೆಣಸಾಟ ನಡೆಸಲಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸಿ ಆತ್ಮವಿಶ್ವಾಸದಿಂದ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುವ ಕನಸು ಹೊಂದಿದೆ.

ಭಾರತ ಎ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಸೂಪರ್ 8 ಹಂತಕ್ಕೆ ಪ್ರವೇಶಿಸಿದೆ. ಸೂಪರ್ 8 ಹಂತದಲ್ಲೂ ಭಾರತ "ಎ" ಗುಂಪಿನಲ್ಲಿ ಸ್ಥಾನ ಪಡೆದಿವೆ. ಈ ಹಂತದಲ್ಲೂ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಕಾದಾಟ ನಡೆಸಲಿದೆ. ಈ ಹಂತದಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಸೆಮಿಫೈನಲ್ ಹಂತ ಪ್ರವೇಶಿಸಲಿವೆ.
ಸೂಪರ್ 8 ಹಂತದ "ಎ" ಗುಂಪಿನ ಭಾರತ, ವೆಸ್ಟ್ ಇಂಡೀಸ್, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ.
ಫೆ.22, ದಕ್ಷಿಣ ಆಫ್ರಿಕಾ, ಅಹಮದಾಬಾದ್
ಫೆ.26, ಜಿಂಬಾಬ್ವೆ, ಚೆನ್ನೈ
ಮಾ.1, ವೆಸ್ಟ್ ಇಂಡೀಸ್, ಕೋಲ್ಕತ್ತಾ