
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತನ್ನ ಬಿಗಿ ಹಿಡಿತವನ್ನು ಮುಂದುವರಿಸಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್‌ನ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಪ್ರತಿಕ್ರಿಯಿಸಿದ್ದು ಟೀಮ್ ಇಂಡಿಯಾ ಈ ಪಂದ್ಯವನ್ನು ಮೂರೇ ದಿನದಲ್ಲಿ ಗೆದ್ದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಟ್ವಿಟ್ಟರ್‌ನಲ್ಲಿ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. "ಇಂಗ್ಲೆಂಡ್ ಮೊದಲ ಟೆಸ್ಟ್‌ನಲ್ಲಿ ಗೆಲುವು ಕಾಣಲು ಐದು ದಿನಗಳನ್ನು ತೆಗೆದುಕೊಂಡಿತು. ಆದರೆ ನನಗನಿಸುತ್ತಿದೆ ಭಾರತ ಇದನ್ನು ಕೇವಲ ಮೂರೇ ದಿನದಲ್ಲಿ ಸಾಧಿಸಲಿದೆ" ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 227 ರನ್‌ಗಳ ಬೃಹತ್ ಅಂತರದ ಗೆಲುವನ್ನು ಸಾಧಿಸಿತ್ತು. ಟಾಸ್ ಗೆದ್ದಿದ್ದ ಇಂಗ್ಲೆಂಡ್ ಆ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕೂ ಅಧಿಕ ರನ್ ಗಳಿಸಿ ಭಾರತವನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಪಂದ್ಯವನ್ನು ಗೆದ್ದುಕೊಳ್ಳಲು ಸಫಲವಾಗಿತ್ತು.
ಆದರೆ ಎರಡನೇ ಟೆಸ್ಟ್‌ನಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 329 ರನ್‌ಗಳನ್ನು ಗಳಿಸಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಪಿಚ್ ಆರಂಭದ ದಿನದಿಂಲೂ ಸಾಕಷ್ಟು ತಿರುವು ಪಡೆಯುತ್ತಿರುವುದರಿಂದ ಬ್ಯಾಟ್ಸ್‌ಮನ್‌ಗಳಿಗೆ ಕ್ರೀಸ್‌ನಲ್ಲಿ ನೆಯೂರಲು ಸಾಧ್ಯವಾಗುತ್ತಿಲ್ಲ. ಆದರೆ ರೋಹಿತ್ ಶರ್ಮಾ 161, ಅಜಿಂಕ್ಯ ರಹಾನೆ 67 ಹಾಗೂ ರಿಷಭ್ ಪಂತ್ 58 ರನ್‌ಗಳ ಕೊಡುಗೆಯಿಂದ ಟೀಮ್ ಇಂಡಿಯಾ ಉತ್ತಮ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ.
ಇನ್ನು ಇಂಗ್ಲೆಂಡ್ ತಂಡದ ಪರವಾಗಿ ನಾಯಕ ಜೋ ರೂಟ್, ಬೆನ್ ಸ್ಟೋಕ್ಸ್ ಸಹಿತ ಎಲ್ಲಾ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದಾರೆ. ತಂಡ 100 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದೆ.