ಪ್ರಸ್ತುತ ಭಾರತ ಐಪಿಎಲ್ 2025 ರ ಹವಾ ಜೋರಾಗಿದೆ. ಐಪಿಎಲ್ ಮುಗಿದ ಬಳಿಕ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದರ ನಡುವೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಗ್ಲೆಂಡ್ ಪ್ರವಾಸಕ್ಕಾಗಿ ಮೆಗಾ ಯೋಜನೆಯನ್ನು ಸಿದ್ಧಪಡಿಸಲು ಪ್ರಾರಂಭಿಸಿದೆ. ವರದಿಗಳ ಪ್ರಕಾರ, ಇಂಗ್ಲೆಂಡ್ ಪ್ರವಾಸಕ್ಕಾಗಿ 35 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಐಪಿಎಲ್‌ನಲ್ಲಿ ಸದ್ದು ಮಾಡುತ್ತಿರುವ ಕೆಲವು ಆಟಗಾರರ ಹೆಸರುಗಳಿವೆ.
ಗುಜರಾತ್ ಟೈಟಾನ್ಸ್ ತಂಡದ ಯುವ ಬ್ಯಾಟರ್ ಸುದರ್ಶನ್ ಇಂಗ್ಲೆಂಡ್ ಪ್ರವಾಸದಲ್ಲೂ ಅವಕಾಶ ಪಡೆಯುವ ಸಾಧ್ಯತೆಗಳಿವೆ. ಅಲ್ಲದೆ, ಸತತ 8 ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಕನ್ನಡಿಗ ಕರುಣ್ ನಾಯರ್ ಮೇಲೆ ಬಿಸಿಸಿಐ ಕೂಡ ಕಣ್ಣಿಟ್ಟಿದೆ.

ಜೂನ್ ಅಂತ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಜೂನ್ 20 ರಿಂದ ಆರಂಭವಾಗಲಿದೆ. ಈ ಸರಣಿಗಾಗಿ ಬಿಸಿಸಿಐ ಮೇ ಎರಡನೇ ವಾರದಲ್ಲಿ ಟೀಮ್ ಇಂಡಿಯಾವನ್ನು ಘೋಷಿಸಬಹುದು. ವರದಿಯ ಪ್ರಕಾರ, ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಈ ಟೆಸ್ಟ್ ಸರಣಿ ಮೂಲಕ ಟೀಮ್ ಇಂಡಿಯಾಗೆ ಮರಳಬಹುದು. ಆದರೆ ಸಾಯಿ ಸುದರ್ಶನ್ ಅವರನ್ನು ಬ್ಯಾಕಪ್ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಬಹುದು.
ಭಾರತ ಪರ 2016 ರಲ್ಲಿ ಕರುಣ್ ನಾಯರ್ ತ್ರಿಶತಕ ಗಳಿಸಿದ್ದರು. ಇದಾದ 8 ವರ್ಷಗಳ ನಂತರ ಟೀಮ್ ಇಂಡಿಯಾ ಪರ ಕರುಣ್ ನಾಯರ್ ಆಡುವ ಸಾಧ್ಯತೆಯಿದೆ. ಭಾರತ ತಂಡದ ಆಯ್ಕೆಯಲ್ಲಿ ಮಧ್ಯಮ ಕ್ರಮಾಂಕದ ಸಮಸ್ಯೆ ಇರುವ ಬಗ್ಗೆ ವರದಿ ಆಗಿದೆ. 5 ಅಥವಾ 6 ನೇ ಕ್ರಮಾಂಕದಲ್ಲಿ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ರಜತ್ ಪಾಟಿದಾರ್ ಮತ್ತು ಕರುಣ್ ನಾಯರ್ ಅವರಿಗೆ ನೀಡಬಹುದು. ಈ ಇಬ್ಬರೂ ಆಟಗಾರರನ್ನು ಭಾರತ ಎ ತಂಡದಲ್ಲಿ ಪರೀಕ್ಷಿಸಬಹುದು. ಈ ಟೆಸ್ಟ್ ಪಂದ್ಯವೂ ಮೇ 25 ರ ಒಂದು ವಾರದ ನಂತರ ಪ್ರಾರಂಭವಾಗಲಿದೆ.
ವರದಿಯ ಪ್ರಕಾರ, ಭಾರತ ತಂಡದ ನಾಯಕತ್ವ ರೋಹಿತ್ ಶರ್ಮಾ ಅವರ ಕೈಯಲ್ಲಿರಲಿದೆ. ಇದಲ್ಲದೆ, ಸ್ಟಾರ್ ಬ್ಯಾಟರ್ಸ್ ಆದ ಶ್ರೇಯಸ್ ಅಯ್ಯರ್ ಮತ್ತು ಅಕ್ಸರ್ ಪಟೇಲ್ ಅವರ ಹೆಸರುಗಳು ಈ ಪಟ್ಟಿಯಲ್ಲಿಲ್ಲ. ಕಳೆದ ವರ್ಷ ತನ್ನ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸರ್ಫರಾಜ್ ಬಗ್ಗೆಯೂ ಆಯ್ಕೆದಾರರು ಆಸಕ್ತಿ ತೋರಿಸಿಲ್ಲ. ರಜತ್ ಪಾಟಿದಾರ್ ಅವರ ಐಪಿಎಲ್ ಫಾರ್ಮ್ ಅನ್ನು ಪರಿಗಣಿಸಿ, ಇದೀಗ ಅವರಿಗೆ ಆದ್ಯತೆ ನೀಡಲಾಗಿದೆ. ಬೌಲರ್ಸ್‌ನಲ್ಲಿ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ತಂಡದ ಭಾಗವಾಗಲಿದ್ದಾರೆ. ಮೊಹಮ್ಮದ್ ಸಿರಾಜ್ ಬಗ್ಗೆ ಆಯ್ಕೆದಾರರು ಚಿಂತಿಸುವಂತಾಗಿದೆ.