ಟೀಮ್ ಇಂಡಿಯಾದಲ್ಲಿ ಆಡುವ ಆಸೆ, ಬ್ಲ್ಯೂ ಜೆರ್ಸಿ ಹಾಕಿ ಮೆರೆಯಬೇಕು ಎಂಬ ಕನಸು, ಹೊತ್ತು ಜಮ್ಮು ಕಾಶ್ಮಿರದಿಂದ ಐಪಿಎಲ್‌ನಲ್ಲಿ ಆಡಲು ಬಂದಿದ್ದ ಪ್ರತಿಭೆ.. ಈ ಆಟಗಾರನ ಆಟಕ್ಕೆ ಮಾಜಿ ಆಟಗಾರರು ಫುಲ್ ಮಾರ್ಕ್ಸ್ ನೀಡಿದ್ದರು. ಅಲ್ಲದೆ ನೀರು ಹಾಕಿ ಪೋಷಿಸುವ ಭರವಸೆ ನೀಡಿದ್ದರು. ಆದರೆ, ಸುಮಾರು ಆರು ತಿಂಗಳಿನಿಂದಲೂ ಈ ಆಟಗಾರನ ಬಗ್ಗೆ ಯಾರು ಮಾತನ್ನು ಆಡುತ್ತಿಲ್ಲ.
ವಿಶ್ವ ಕ್ರಿಕೆಟ್‌ನ ಸ್ಟಾರ್ ಆಟಗಾರರು ಸಹ ಈ ವೇಗಿ ಬೌಲಿಂಗ್ ದಾಳಿಯನ್ನು ಕಂಡು ಬೆರಗಾಗಿದ್ದರು. ಪಾಕ್ ತಂಡದ ವೇಗಿ ಶೋಯಿಬ್ ಅಕ್ತರ್ ಸಹ ಇವರು ಭವಿಷ್ಯದ ಸ್ಟಾರ್ ಬೌಲರ್ ಎಂದು ಬೆನ್ನು ತಟ್ಟಿದ್ದರು. ಆದರೆ ಬೆಳೆಯುವ ಮೊದಲೇ ಸಸಿ ಬಾಡಿದಂತೆ ಭಾಸವಾಗುತ್ತಿದೆ.

ಜಮ್ಮುವಿನ ವೇಗದ ಬೌಲರ್ ಉಮ್ರಾನ್ ಮಲಿಕ್ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿಲ್ಲ. 164 ದಿನಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಅದೇ ಸಮಯದಲ್ಲಿ, ಅವರು ಕೆಲವು ದಿನಗಳಿಂದ ದೇಶೀಯ ಟೂರ್ನಿಯಲ್ಲೂ ಸದ್ದು ಮಾಡುತ್ತಿಲ್ಲ. ಹೀಗಿರುವಾಗ ಉಮ್ರಾನ್ ಎಲ್ಲಿ ಕಾಣೆಯಾಗಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಭಾರತದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಅವರು ಉಮ್ರಾನ್ ಬಗ್ಗೆ ಪ್ರಶ್ನೆಯನ್ನು ಎತ್ತಿದ್ದಾರೆ.
ಆಕಾಶ್ ಚೋಪ್ರಾ ಭಾರತ ತಂಡದ ಆಟಗಾರನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಅವರು ವೇಗದ ಬೌಲಿಂಗ್ ರುವಾರಿ ಎಂದು ಕರೆಯಲ್ಪಟ್ಟರು. ಅವರನ್ನು ರೆಡ್ ಬಾಲ್ ಕ್ರಿಕೆಟ್‌ಗೆ ಕರೆತರುವ ಮತ್ತು ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಚರ್ಚೆ ನಡೆದಿತ್ತು, ಆದರೆ ಈಗ ಅವರು ಮೂರು ತಿಂಗಳಿನಿಂದ ಸಂಪೂರ್ಣವಾಗಿ ಕಾಣೆಯಾಗಿದ್ದಾರೆ. ಭಾರತ ಎ ತಂಡಕ್ಕೂ ಅವರು ಆಯ್ಕೆಯಾಗುತ್ತಿಲ್ಲ. ಉಮ್ರಾನ್ ಮಲಿಕ್ ಎಲ್ಲಿದ್ದಾರೆ ಮತ್ತು ಏನು ನಡೆಯುತ್ತಿದೆ? ಎಂದು ಪ್ರಶ್ನೆ ಎತ್ತಿದ್ದಾರೆ.
ಉಮ್ರಾನ್ ಮಲಿಕ್ ಕೊನೆಯ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜುಲೈ 2023 ರಲ್ಲಿ ಕಾಣಿಸಿಕೊಂಡರು. ಅವರು ವೆಸ್ಟ್ ಇಂಡೀಸ್ ವಿರುದ್ಧ ODI ಪಂದ್ಯವನ್ನು ಆಡಿದ್ದರು. ಅಂದಿನಿಂದ ಅವರು ಕೆಲವು ದೇಶೀಯ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅವರು ರಣಜಿ ಟ್ರೋಫಿ 2024 ರಲ್ಲಿ ಜಮ್ಮು ಕಾಶ್ಮೀರ ತಂಡದ ಭಾಗವಾಗಿದ್ದಾರೆ. ಹಿಮಾಚಲ ಪ್ರದೇಶದ ವಿರುದ್ಧ ನೀರಸ ಪ್ರದರ್ಶನ ನೀಡಿದ್ದಾರೆ. ಈ ಹಿಂದೆ, ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆಯವರಲ್ಲೂ ಅವರು ಹೆಚ್ಚು ಪ್ರಭಾವ ಬೀರಲಿಲ್ಲ.

ಉಮ್ರಾನ್ ಮಲಿಕ್ ತಮ್ಮ ವೇಗಕ್ಕೆ ಹೆಸರುವಾಸಿ. ಅವರ ಎಕನಾಮಿಯಿಂದಲೂ ಟೀಕೆಗೆ ಆಹಾರವಾಗುತ್ತಾರೆ. ಅವರು 10 ODI ಅಂತರಾಷ್ಟ್ರೀಯ ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಮತ್ತು 8 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಎಕಾನಮಿ ಏಕದಿನದಲ್ಲಿ 6.54 ಮತ್ತು ಟಿ20ಯಲ್ಲಿ 10.4 ಆಗಿದೆ.
ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಬಾರಿಗೆ ODI ಆಡಿದ್ದರು. ಆದರೆ ಅವರು ಫೆಬ್ರವರಿ 2023 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ T20 ಆಡಿದ್ದರು. ಈಗ ಅವರು ಯಾವಾಗ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಅವರು ಐಪಿಎಲ್‌ನಲ್ಲಿ ತಮ್ಮ ತಂಡ ಸನ್‌ರೈಸರ್ಸ್ ಹೈದರಾಬಾದ್ ಪರ ಕಣಕ್ಕೆ ಇಳಿಯಲಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಕನಸು ಹೊಂದಿರುವ ವೇಗಿ, ಐಪಿಎಲ್‌ನಲ್ಲಿ ಅಬ್ಬರಿಸುವ ಅವಶ್ಯಕತೆ ಇದೆ.