ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಮುಗಿದಿದೆ. ಈ ಮೆಗಾ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿದ್ದು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ (ಮಾರ್ಚ್ 28) ನಡೆದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 96 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ಟೀಮ್ ಇಂಡಿಯಾ ಹಾಗೂ ವಿದೇಶಿ ಆಟಗಾರರು ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಯಾವೆಲ್ಲಾ ತಂಡಗಳ ವಿರುದ್ಧ ಟೀಮ್ ಇಂಡಿಯಾ ಪಂದ್ಯಗಳನ್ನು ಆಡಲಿದೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಇದೆ. ಅದಕ್ಕೆ ಉತ್ತರ ಇಲ್ಲಿದೆ.
ಮುಂಬರುವ ತಿಂಗಳುಗಳಲ್ಲಿ ಟೀಮ್ ಇಂಡಿಯಾ ಯಾವೆಲ್ಲಾ ದೇಶಗಳ ವಿರುದ್ಧ ಟಿ20 ಸರಣಿ ಆಡಬಹುದು ಎಂಬ ಬಗ್ಗೆ ಲೆಕ್ಕಾಚಾರ ಆರಂಭವಾಗಿದೆ. ಭಾರತ ತಂಡ ಶ್ರೀಲಂಕಾ ಮತ್ತು ಐರ್ಲೆಂಡ್ ಪ್ರವಾಸ ಮಾಡಬಹುದು ವರದಿಗಳು ಬರುತ್ತಿವೆ. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಬಿಸಿಸಿಐ ಶ್ರೀಲಂಕಾ ವೇಳಾಪಟ್ಟಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲು ಮುಂದಾಗಲಿದೆ.

ಶ್ರೀಲಂಕಾ ಪ್ರವಾಸದಲ್ಲಿ ಉಭಯ ದೇಶಗಳ ನಡುವೆ ಟೆಸ್ಟ್ ಪಂದ್ಯಗಳು ನಡೆಯಲಿವೆ. ಈ ಟೆಸ್ಟ್ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾಗವಾಗಿರಲಿದೆ. ಈ ಟೆಸ್ಟ್ ಪಂದ್ಯಕ್ಕೂ ಮೊದಲು ಎರಡೂ ದೇಶಗಳ ನಡುವೆ ಟಿ20 ಪಂದ್ಯಗಳು ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಟಿ20 ಕ್ರಿಕೆಟ್ ಆಡಿಸುವ ಪ್ರಸ್ತಾಪನೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಬರುತ್ತಿದೆ ಎಂದು ನಂಬಲಾಗಿದೆ. ಕಳೆದ ವರ್ಷ ಶ್ರೀಲಂಕಾದಲ್ಲಿ ಸಂಭವಿಸಿದ ಪ್ರಮುಖ ಚಂಡಮಾರುತವು ಅನೇಕ ಪ್ರದೇಶಗಳಲ್ಲಿ ಹಾನಿ ಉಂಟು ಮಾಡಿತ್ತು. ಹೀಗಾಗಿ ಹೆಚ್ಚುವರಿ ಟಿ20 ಪಂದ್ಯಗಳನ್ನು ಆಯೋಜಿಸಿ ಪರಿಹಾರ ಕಾರ್ಯಗಳಿಗೆ ಹಣವನ್ನು ಸಂಗ್ರಹಿಸುವ ಯೋಜನೆ ಶ್ರೀಲಂಕಾ ಮಂಡಳಿಯದ್ದಾಗಿದೆ.
ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧವೂ ಸರಣಿಯನ್ನು ಆಡಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಎರಡೂ ಕ್ರಿಕೆಟ್ ಮಂಡಳಿಯ ನಡುವೆ ಚರ್ಚೆಗಳು ಆರಂಭವಾಗಿವೆ. ಈ ಮಾತುಕತೆ ಸಫಲವಾದರೆ, ಟೀಮ್ ಇಂಡಿಯಾ ಜೂನ್ ಕೊನೆಯ ವಾರದಲ್ಲಿ ಐರ್ಲೆಂಡ್ ವಿರುದ್ಧ ಪಂದ್ಯವನ್ನು ಆಡಬಹುದಾಗಿದೆ. ಈ ಹಿಂದೆಯೂ ಟೀಮ್ ಇಂಡಿಯಾ ಐರ್ಲೆಂಡ್ ಪ್ರವಾಸವನ್ನು ಬೆಳೆಸಿತ್ತು.

ಈ ಎರಡೂ ಸರಣಿಗಳು ಅಂದುಕೊಂಡಂತೆ ನಡೆದರೆ, ಆ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟಿ20 ಹಾಗೂ ಏಕದಿನ ಸರಣಿಯನ್ನು ಆಡಲಿದೆ. ಇದಕ್ಕೂ ಮೊದಲು ಭಾರತ ತಂಡ ತವರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನು ಆಡಲಿದೆ. ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡ ಸಾಲು ಸಾಲು ಸರಣಿಗಳನ್ನು ಆಡಲಿದ್ದು, ಈ ಸರಣಿಗಳಲ್ಲಿ ತನ್ನ ಬೆಸ್ಟ್ ಪ್ರದರ್ಶನ ನೀಡುವ ವಿಶ್ವಾಸವನ್ನು ಬ್ಲ್ಯೂ ಬಾಯ್ಸ್ ಹೊಂದಿದೆ.