
ಅಡಿಲೇಡ್, ಡಿಸೆಂಬರ್ 8: ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯೊಂದನ್ನು ಯುವ ಆಟಗಾರ ರಿಷಬ್ ಪಂತ್ ಸರಿದೂಗಿಸಿಕೊಂಡಿದ್ದಾರೆ. ಅಡಿಲೇಡ್ ನಲ್ಲಿ ನಡೆಯುತ್ತಿರುವ ಭಾರತ vs ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಬ್ ಈ ಸಾಧನೆ ಮೆರೆದರು.
ವಿಕೆಟ್ ಕೀಪರ್ ಆಗಿದ್ದುಕೊಂಡು ಇನ್ನಿಂಗ್ಸ್ ಒಂದರಲ್ಲಿ 6 ಕ್ಯಾಚ್ ಪಡೆದ ದಾಖಲೆಯನ್ನು ಎಂಎಸ್ ಧೋನಿ ಹೊಂದಿದ್ದರು. ನ್ಯೂಜಿಲ್ಯಾಂಡ್‌ನ ವೆಲ್ಲಿಂಗ್ಟನ್ ನಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ಧೋನಿ ಈ ಮಾಡಿದ್ದರು. ಈಗ ಈ ದಾಖಲೆಯನ್ನು ರಿಷಬ್ ಪಂತ್ ಕೂಡ ಹಂಚಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್‌ಗೆ ಇಳಿದ ಆಸ್ಟ್ರೇಲಿಯಾದ 6 ಕ್ಯಾಚ್‌ಗಳನ್ನು ಪಂತ್ ಪಡೆದಿದ್ದಾರೆ.
ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್‌ಗೆ ಇಳಿದಿದ್ದಾಗ ಪಂತ್ ಅವರು ಉಸ್ಮಾನ್ ಖವಾಜಾ (28 ರನ್), ಪೀಟರ್ ಹ್ಯಾಂಡ್ಸ್ಕಾಂಬ್ (34), ಟ್ರಾವಿಸ್ ಹೆಡ್ (72), ಟಿಮ್ ಪೈನೆ (5), ಮಿಚೆಲ್ ಸ್ಟಾರ್ಕ್ (15), ಜೋಶ್ ಹ್ಯಾಝೆಲ್ವುಡ್ (0) ಅವರ ವಿಕೆಟ್ ಗಳನ್ನು ಬಲಿ ಪಡೆದರು.
ಆಸ್ಟ್ರೇಲಿಯಾ ತಂಡ 98.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 235 ರನ್ ಪೇರಿಸಿ ಮೊದಲ ಇನ್ನಿಂಗ್ಸ್ ಮುಗಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ 250 ರನ್ ಗಳಿಸಿದ್ದ ಭಾರತ, ಈಗ ದ್ವಿತೀಯ ಇನ್ನಿಂಗ್ಸ್ ಗೆ ಇಳಿದಿದೆ. ಶನಿವಾರ (ಡಿಸೆಂಬರ್ 8) ದಿನದಾಂತ್ಯಕ್ಕೆ 61 ಓವರ್‌ಗೆ 3 ವಿಕೆಟ್ ಕಳೆದು ಭಾರತ 151 ರನ್ ಪೇರಿಸಿತ್ತು. ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿದ್ದರು.