
ಲಂಡನ್ ಆಗಸ್ಟ್ 18: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಲಾರ್ಡ್ಸ್ ಅಂಗಳದಲ್ಲಿ ಇಂಗ್ಲೆಂಡ್ ತಂಡದ ಕೆಲ ಆಟಗಾರರ ಪ್ರದರ್ಶನದ ಹಿನ್ನೆಲೆಯಲ್ಲಿ ಕೆಲ ಪ್ರಮುಖ ಬದಲಾವಣೆಯಾಗಿದೆ. ಈ ಮೂಲಕ ಮೂರನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಭರ್ಜರಿಯಾಗಿ ಸಜ್ಜಾಗಿದೆ.
ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ನೀಡಿದ ಡಾಮ್ ಸಿಬ್ಲಿ ಹಾಗೂ ಜಾಕ್ ಕ್ರಾವ್ಲೆಗೆ ತಂಡದಿಂದ ಕೊಕ್ ಕೊಡಲಾಗಿದೆ. ಯಾರ್ಕ್‌ಶೈರ್‌ನ ಬ್ಯಾಟ್ಸ್‌ಮನ್ ಟಿ20 ಮಾದರಿಯ ಅಗ್ರ ಶ್ರೇಯಾಂಕದ ಆಟಗಾರ ಡೇವಿಡ್ ಮೆಲನ್‌ಗೆ ಟೆಸ್ಟ್ ತಂಡದ ಕರೆ ಬಂದಿದೆ. ಮೂರು ವರ್ಷಗಳ ನಂತರ ಡೇವಿಡ್ ಮಲನ್ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಮತ್ತೆ ಗಳಿಸಿಕೊಂಡಿದ್ದಾರೆ. ಮಲನ್ ಈ ಹಿಂದೆ 2018ರಲ್ಲಿ ಭಾರತದ ವಿರುದ್ಧದ ಸರಣಿಯಲ್ಲಿಯೇ ತಮ್ಮ ಕೊನೆಯ ಪಂದ್ಯವನ್ನಾಡಿದ್ದರು. ಅಂದಿನ ಸರಣಿಯಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಡಿದ ಬಳಿಕ ಡೇವಿಡ್ ಮಲನ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಆ ಪಂದ್ಯವನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿತ್ತು.
ಇನ್ನು ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಲಂಕಾಶೈರ್‌ನ ವೇಗಿ ಸಕೀಬ್ ಮಹಮೂದ್ ಅವಕಾಶ ಪಡೆದುಕೊಂಡಿದ್ದಾರೆ. ಸಿಕ್ಕ ಎಲ್ಲಾ ಅವಕಾಶದಲ್ಲಿ ಮಿಂಚುತ್ತಿರುವ ಸಕೀಬ್ ಮೊದಲ ಬಾರಿಗೆ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಈಗಾಗಲೇ ಟಿ20 ಹಾಗೂ ಏಕದಿನ ತಂಡದಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಆಡಿರುವ ಅನುಭವ ಹೊಂದಿರುವ ಸಕೀಬ್ ಮಹಮೂದ್ ಜೋ ರೂಟ್ ಬಳಗಕ್ಕೆ ಮತ್ತಷ್ಟು ಬಲ ತುಂಬುವ ಉತ್ಸಾಹದಲ್ಲಿದ್ದಾರೆ.
ಬ್ಯಾಟ್ಸ್‌ಮನ್‌ಗಳಾದ ಜಾಕ್ ಕ್ರಾವ್ಲಿ ಹಾಗೂ ಡಾಮ್ ಸಿಬ್ಲಿ ಭಾರತ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ವಿಫಲವಾಗಿರುವ ಕಾರಣದಿಂದಾಗಿ ಸರಣಿಯ ಮೂರನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಇವರಿಬ್ಬರು ಕೂಡ ಕ್ರಮವಾಗಿ ಕೆಂಟ್ ಹಾಗೂ ವಾರ್ವಿಕ್‌ಶೈರ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಮೂಲಕ ಮತ್ತೆ ಫಾರ್ಮ್ ಕಂಡುಕೊಂಡು ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಇನ್ನು ಜಾಕ್ ಲೀಚ್ ಕೂಡ ತಂಡದಿಂದ ಹೊರಗುಳಿದಿದ್ದು ಟೌಂಟನ್ ತಂಡಕ್ಕೆ ಮರಳಲಿದ್ದಾರೆ. ಆದರೆ ಅವರನ್ನು ಮೊಯೀನ್ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಉಳಿಸಿಕೊಳ್ಳಲಾಗಿದೆ.
ಇನ್ನು ಇಂಗ್ಲೆಂಡ್ ತಂಡದ ವೇಗಿ ಮಾರ್ಕ್ ವುಡ್ ಲಾರ್ಡ್ಸ್ ಟೆಸ್ಟ್‌ನ ನಾಲ್ಕನೇ ದಿನದಾಟದಲ್ಲಿ ಭುಜದ ನೋವಿಗೆ ತುತ್ತಾಗಿದ್ದರು. ಅವರನ್ನು ಈ ತಂಡದಲ್ಲಿ ಉಳಿಸಿಕೊಳ್ಳಲಾಗಿದ್ದು ಹೆಡಿಂಗ್ಲೇಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದ ವೇಲೆಗೆ ಸಂಪೂರ್ಣ ಚೇತರಿಕೆ ಕಾಣುವ ವಿಶ್ವಾಸದಲ್ಲಿ ತಂಡ ಇದೆ.
ಇನ್ನು ಈ ಮೂರನೇ ಟೆಸ್ಟ್ ತಂಡದ ಆಯ್ಕೆಯ ಬಳಿಕ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸರಣಿ ಅತ್ಯಂತ ಸುಂದರವಾಗಿ ಆಯೋಜನೆ ಮಾಡಲಾಗಿದೆ. ಹೆಡಿಂಗ್ಲೆಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ನಾವು ಪ್ರವಾಸಿ ಭಾರತ ತಂಡದ ವಿರುದ್ಧ ತಿರುಗಿ ಬೀಳುವ ವಿಶ್ವಾಸದಲ್ಲಿದ್ದೇವೆ ಎಂದು ಸಿಲ್ವರ್‌ವುಡ್ ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಡ್ರಾ ಫಲಿತಾಂಶವನ್ನು ಪಡೆದುಕೊಂಡಿತ್ತು. ಬಳಿಕ ಲಾರ್ಡ್ಸ್ ಅಂಗಳದಲ್ಲಿ ನಡೆದ ಸರಣಿಯ ಎರಡನೇ ಪಂದ್ಯ ಸಾಕಷ್ಟು ತಿರುವುದಗಳ ಬಳಿಕ ಅಂತಿಮ ದಿನದಾಟದಲ್ಲಿ ಭಾರತೀಯ ಆಟಗಾರರು ಸಂಪೂರ್ಣ ಮೇಲುಗೈ ಸಾಧಿಸಿದ ಪರಿಣಾಮವಾಗಿ ಭರ್ಜರಿಯಾಗಿ ಗೆದ್ದು ಬೀಗಿದೆ. ಈಗ ಮೂರನೇ ಟೆಸ್ಟ್ ಪಂದ್ಯಕ್ಕೆ ಎರಡು ತಂಡಗಳು ಕೂಡ ಸಜ್ಜಾಗಿದೆ. ಆದರೆ
3ನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ಇಂಗ್ಲೆಂಡ್ ತಂಡ: ಜೋ ರೂಟ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೊವ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಸ್ಯಾಮ್ ಕುರನ್, ಹಸೀಬ್ ಹಮೀದ್, ಡಾನ್ ಲಾರೆನ್ಸ್, ಸಾಕಿಬ್ ಮಹಮೂದ್, ಡೇವಿಡ್ ಮಲನ್, ಕ್ರೇಗ್ ಓವರ್‌ಟನ್, ಓಲ್ಲಿ ಪೋಪ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್