
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆಶಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ನಡೆಯುತ್ತಿದ್ದು ಆಸ್ಟ್ರೇಲಿಯಾ ತಂಡ ಪಂದ್ಯದಲ್ಲಿ ಭಾರೀ ಹಿಡಿತವನ್ನು ಮುಂದುವರಿಸಿದೆ. ಮೂರನೇ ದಿನ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಆರಂಭದಲ್ಲಿಯೇ ಭಾರೀ ಕುಸಿತವನ್ನು ಕಂಡಿತು. ಆದರೆ ಜಾನಿ ಬೈರ್‌ಸ್ಟೀವ್ ಹಾಗೂ ಬೆನ್ ಸ್ಟೋಕ್ಸ್ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್ ತಂಡ ಹೋರಾಟದ ಪ್ರದರ್ಶನ ನೀಡುತ್ತಿದೆ. ಇದರಲ್ಲಿ ಬೈರ್‌ಸ್ಟೋವ್ ಅಜೇಯ ಶತಕ ಸಿಡಿಸಿ ನಾಲ್ಕನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದರೆ ಬೆನ್ ಸ್ಟೋಕ್ಸ್ ಅರ್ಧ ಶತಕದ ಕೊಡಿಗೆ ನೀಡಿ ತಂಡಕ್ಕೆ ನೆರವಾದರು.
ಇನ್ನು ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡದ ಆಲ್‌ರೌಂಡರ್‌ಗೆ ದೊರೆತ ಜೀವದಾನ ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೆ ದೂಡಿದೆ. ಆನ್‌ಫೀಲ್ಡ್ ಅಂಪಾಯರ್ ಔಟ್ ನೀಡಿದ ಕಾರಣ ಮೂರನೇ ಅಂಪಾಯರ್ ಮೊರೆ ಹೋದ ಬೆನ್ ಸ್ಟೋಕ್ಸ್ ತೀರ್ಪನ್ನು ಬದಲಾಯಿಸುಕೊಳ್ಲುವಲ್ಲಿ ಯಶಸ್ವಿಯಾದರು. ಈ ಮೂಲಕ ಬೆನ್ ಸ್ಟೋಕ್ಸ್ ಹಾಗೂ ಇಂಗ್ಲೆಂಡ್ ತಂಡ ಜೀವದಾನವನ್ನು ಪಡೆಯಿತು. ಆದರೆ ಮೂರನೇ ಅಂಪಾಯರ್ ದೊಡ್ಡ ಪರದೆಯಲ್ಲಿ ರಿಪ್ಲೇ ದೃಶ್ಯಗಳು ಬಿತ್ತರವಾದಾಗ ಸ್ವತಃ ಬೆನ್ ಸ್ಟೋಕ್ಸ್ ಅಚ್ಚರಿಗೆ ಒಳಗಾಗಿದ್ದರು.
ಆಸ್ಟ್ರೇಲಿಯಾ ತಂಡದ ವೇಗಿ ಕ್ಯಾಮರೂನ್ ಗ್ರೀನ್ ಎಸೆದ ಚೆಂಡು ಆಫ್ ಸ್ಟಂಪ್‌ಗೆ ಸವರಿಕೊಂಡು ಹೋಗಿದ್ದರೂ ಬೆನ್ ಸ್ಟೋಕ್ಸ್ ಜೀವದಾನ ಪಡೆದುಕೊಂಡಿದ್ದರು.ಅದಕ್ಕೆ ಕಾರಣ ವಿಕೆಟ್‌ಗೆ ಚೆಂಡು ಬಡಿದಿದ್ದರೂ ಬೆಲ್ಸ್ ನೆಲಕ್ಕೆ ಉರುಳಿರಲಿಲ್ಲ. ಹಾಗಿದ್ದರು ಕೂಡ ಆಸ್ಟ್ರೇಲಿಯಾ ಆಟಗಾರರು ವಿಕೆಟ್‌ಗಾಗಿ ಮನವಿ ಮಾಡಿದ್ದ ಕಾರಣ ಫಿಲ್ಡ್ ಅಂಪಾಯರ್ ಔಟ್ ನೀಡಿದ್ದರು. ಆಸ್ಟ್ರೇಲಿಯಾ ಆಟಗಾರರ ಎಲ್‌ಬಿ ಡಬ್ಲ್ಯುಗಾಗಿ ಮನವಿ ಮಾಡಿದ್ದರೂ ಅಥವಾ ವಿಕೆಟ್ ಹಿಂದೆ ಕ್ಯಾಚ್ ಪಡೆದರೆಂದು ಅಪೀಲ್ ಮಾಡಿದ್ದರೋ ಗೊತ್ತಿಲ್ಲ. ಆದರೆ ಬೆನ್ ಸ್ಟೋಕ್ಸ್ ಅವರ ಬ್ಯಾಟ್ ಮೇಲಕ್ಕೆತ್ತಿದ್ದು ಅವರ ಬ್ಯಾಟ್ ಹಾಗೂ ಪ್ಯಾಡ್‌ಗಿಂತ ಚೆಂಡು ದೂರದಲ್ಲಿ ಸಾಗಿದ್ದು ಸ್ಪಷ್ಟವಾಗಿತ್ತು.
ಫೀಲ್ಡ್ ಅಂಪಾಯರ್ ಬೆನ್ ಸ್ಟೋಕ್ಸ್ ಔಟ್ ಎಂದು ತೀರ್ಪು ನೀಡಿದ್ದ ಕಾರಣ ಸ್ಟೋಕ್ಸ್ ಡಿಆರ್‌ಎಸ್ ಮೊರೆ ಹೋದರು. ಈ ಸಂದರ್ಭದಲ್ಲಿ ದೃಶ್ಯಾವಳಿಯನ್ನು ಪರೀಕ್ಷಿಸಿದಾಗ ಚೆಂಡು ಬ್ಯಾಟ್ ಅಥವಾ ಪ್ಯಾಡ್‌ಅನ್ನು ಸ್ಪರ್ಶಿಸಿರಲಿಲ್ಲ. ಆದರೆ ಚೆಂಡು ವಿಕೆಟ್‌ಗೆ ಬಡಿದಿರುವುದು ಸ್ಪಷ್ಟವಾಗಿತ್ತು. ಕ್ಯಾನಮರೂನ್ ಗ್ರೀನ್ ಎಸೆದ ಚೆಂಡು ವಿಕೆಟ್‌ಗೆ ಮುತ್ತಕ್ಕಿಕೊಂಡು ವಿಕೆಟ್ ಕೀಪರ್ ಬೊಗಸೆಗೆ ಸೇರಿತ್ತು. ಆದರೆ ವಿಕೆಟ್ ಮೇಲಿದ್ದ ಬೆಲ್ಸ್ ನೆಲಕ್ಕೆ ಉರುಳಿರಲಿಲ್ಲ. ಹೀಗಾಗಿ ಬೆನ್ ಸ್ಟೋಕ್ಸ್ ಔಟಾಗದೆ ಕ್ರೀಸ್‌ನಲ್ಲಿ ಉಳಿದುಕೊಂಡರು.
ಇನ್ನು ಆಶಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಸುದೀರ್ಘ ಕಾಲದ ಬಳಿಕ ಆಸಿಸ್ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಉಸ್ಮಾನ್ ಖವಾಜ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಭರ್ಜರಿ 416 ರನ್‌ಗಳನ್ನು ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಪ್ರಿತಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ ಮತ್ತೊಮ್ಮೆ ಭಾರೀ ಕುಸಿತವನ್ನು ಕಂಡಿತು. ತಂಡ 36 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಸಂದರ್ಭದಲ್ಲಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೈರ್‌ಸ್ಟೋವ್ ತಂಡಕ್ಕೆ ಆಸರೆಯಾದರು. ಬೆನ್ ಸ್ಟೋಕ್ಸ್ 66 ರನ್‌ಗಳಿಸಿ ಔಟಾಗುವ ಮೂಲಕ ಶತಕದ ಜೊತೆಯಾಟ ನೀಡಿ ಈ ಜೋಡಿ ಬೇರ್ಪಟ್ಟಿತು. ಜಾನಿ ಬೈರ್‌ಸ್ಟೋವ್ 103 ರನ್‌ಗಳಿಸಿ ಕ್ರೀಸ್‌ನಲ್ಲಿ ಅಜೇಯವಾಗುಳಿದು ನಾಲ್ಕನೇ ದಿನಕ್ಕರ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅವರಿಗೆ ಜಾಕ್ ಲೀಚ್ ಸಾತ್ ನೀಡಿದ್ದಾರೆ. ಮೂರನೇ ದಿನದಾಟ ಮುಕ್ತಾಯವಾದಾಗ ಇಂಗ್ಲೆಂಡ್ ತಂಡ 7 ವಿಕೆಟ್ ಕಳೆದುಕೊಂಡು 258 ರನ್‌ಗಳಿಸಿದೆ. ಇಂಗ್ಲೆಂಡ್ ತಂಡ ಇನ್ನು ಕೂಡ 158 ರನ್‌ಗಳಷ್ಟು ಹಿಂದುಳಿದಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ XI: ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಉಸ್ಮಾನ್ ಖವಾಜಾ, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಝೈ ರಿಚರ್ಡ್ಸನ್, ಮಿಚೆಲ್ ಸ್ವೆಪ್ಸನ್, ಮೈಕೆಲ್ ನೆಸರ್
ಇಂಗ್ಲೆಂಡ್ ತಂಡ ಪ್ಲೇಯಿಂಗ್ XI: ಹಸೀಬ್ ಹಮೀದ್, ಝಾಕ್ ಕ್ರಾಲಿ, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮಾರ್ಕ್ ವುಡ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ಬೆಂಚ್: ರೋರಿ ಬರ್ನ್ಸ್, ಕ್ರಿಸ್ ವೋಕ್ಸ್, ಡೇನಿಯಲ್ ಲಾರೆನ್ಸ್