ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯ ಗಬ್ಬಾದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಬಿಗ ಹಿಡಿತ ಸಾಧಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಎರಡನೇ ಇನಿಂಗ್ಸ್ ಆರಂಭಿಸಿದ್ದು, 6 ವಿಕೆಟ್ ನಷ್ಟಕ್ಕೆ 43 ರನ್‌ಗಳ ಹಿನ್ನಡೆಯನ್ನು ಅನುಭವಿಸುತ್ತಿದೆ. ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಗಮನಾರ್ಹ ಸಾಧನೆ ಮಾಡಿದ್ದಾರೆ.
ಭಾನುವಾರ 6 ವಿಕೆಟ್‌ಗೆ 378 ರನ್‌ಗಳಿಂದ ಮೊದಲ ಇನಿಂಗ್ಸ್‌ನಲ್ಲಿ ಆಟ ಮುಂದುವರಿಸಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 511 ರನ್‌ಗಳಿಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಪರ ಅಲೆಕ್ಸ್ ಕ್ಯಾರಿ 128 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 63 ರನ್ ಬಾರಿಸಿ ಔಟ್ ಆದರು. ಮಿಚೆಲ್ ಸ್ಟಾರ್ಕ್ 141 ಎಸೆತಗಳಲ್ಲಿ 13 ಬೌಂಡರಿ ಸಹಾಯದಿಂದ 77 ರನ್ ಸಿಡಿಸಿ ಮಿಂಚಿದರು. ಇಂಗ್ಲೆಂಡ್ ಪರ ಬ್ರೆಂಡನ್ ಕ್ರೇಸ್ 4, ಬೆನ್ ಸ್ಟೋಕ್ಸ್ 3 ವಿಕೆಟ್ ಕಬಳಿಸಿದರು.

ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡದ ಆರಂಭ ಸಾಧಾರಣವಾಗಿತ್ತು. ಜಾಕ್ ಕ್ರಾಲಿ 6 ಬೌಂಡರಿ ಸಹಾಯದಿಂದ 44 ರನ್ ಬಾರಿಸಿದರು. ಆರಂಭಿಕ ಬೆನ್ ಡಕೆಟ್ 15 ರನ್‌ಗಳಿಗೆ ಆಟ ಮುಗಿಸಿದರು. ಓಲಿ ಪೋಪ್ (26) ರನ್ ಕಲೆ ಹಾಕುವಲ್ಲಿ ಎಡವಿದರು. ಜೋ ರೂಟ್ ಅವರಿಗೆ ಮಿಚೆಲ್ ಸ್ಟಾರ್ಕ್ ಖೆಡ್ಡಾ ತೋಡಿದರು. ಇದರೊಂದಿಗೆ, ಮಿಚೆಲ್ ಸ್ಟಾರ್ಕ್ ಟೆಸ್ಟ್‌ನಲ್ಲಿ ಜೋ ರೂಟ್ ಅವರನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಆಸೀಸ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರ ದಾಖಲೆಯನ್ನು ಸರಿಗಟ್ಟಿದರು. ಸ್ಟಾರ್ಕ್ ಟೆಸ್ಟ್‌ನಲ್ಲಿ 11 ನೇ ಬಾರಿಗೆ ಜೋ ರೂಟ್ ಅವರನ್ನು ಔಟ್ ಮಾಡಿದ್ದಾರೆ.
ಜಸ್ಪ್ರಿತ್ ಬುಮ್ರಾ, ಭಾರತ, 11 ಬಾರಿ
ಮಿಚೆಲ್ ಸ್ಟಾರ್ಕ್, ಆಸ್ಟ್ರೇಲಿಯಾ, 11 ಬಾರಿ
ಪ್ಯಾಟ್ ಕಮ್ಮಿನ್ಸ್, ಆಸ್ಟ್ರೇಲಿಯಾ, 11 ಬಾರಿ
ಜೋಶ್ ಹ್ಯಾಜಲ್‌ವುಡ್, ಆಸ್ಟ್ರೇಲಿಯಾ, 10 ಬಾರಿ
ರವೀಂದ್ರ ಜಡೇಜಾ, ಭಾರತ, 9 ಬಾರಿ
ಮೂರನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 134 ರನ್ ಸೇರಿಸಿತು. ನಾಲ್ಕನೇ ದಿನದಾಟಕ್ಕೆ ಬೆನ್ ಸ್ಟೋಕ್ಸ್, ವಿಲ್ ಜಾಕ್ಸ್ ಜೋಡಿ ಬ್ಯಾಟಿಂಗ್ ಕಾಯ್ದುಕೊಂಡಿದೆ. ಆಸೀಸ್ ತಂಡದ ಪರ ಮಿಚೆಲ್ ಸ್ಟಾರ್ಕ್, ಮೈಕೆಲ್ ನೆಸರ್, ಸ್ಕಾಟ್ ಬೋಲ್ಯಾಂಡ್ ತಲಾ 2 ವಿಕೆಟ್ ಕಬಳಿಸಿದರು.