
ಅಹಮದಾಬಾದ್‌ನಲ್ಲಿ ನಡೆಯಲಿರುವ 4ನೇ ಟೆಸ್ಟ್‌ಗೆ ಮುನ್ನ ವಿರಾಟ್ ಕೊಹ್ಲಿ ಆಧ್ಯಾತ್ಮಿಕತೆಯ ಮೊರೆಹೋಗಿದ್ದಾರೆ. ಪತ್ನಿ ಜೊತೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೊ ಹಂಚಿಕೊಂಡಿದ್ದಾರೆ.
ದೇವಸ್ಥಾನದ ಮೆಟ್ಟಿಲುಗಳ ಮುದ್ದಾದ ನಾಯಿಮರಿಯೊಂದಿಗೆ ವಿರಾಟ್ ಕೊಹ್ಲಿ ಫೋಸ್ ನೀಡಿರುವ ಫೋಟೊವನ್ನು ಟ್ವಿಟರ್, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಫೋಟೊ ವೈರಲ್ ಆಗಿದೆ. ಲಕ್ಷಾಂತರ ಮಂದಿ ಈ ಫೋಟೊವನ್ನು ವೀಕ್ಷಿಸಿದ್ದು, ಲೈಕ್ ಪಡೆದುಕೊಂಡಿದೆ.
ಫೋಟೊದಲ್ಲಿ ವಿರಾಟ್ ಕೊಹ್ಲಿ ನಾಯಿಮರಿಯನ್ನು ಹಿಡಿದುಕೊಂಡಿದ್ದು ನಗುತ್ತಿರುವುದನ್ನು ಕಾಣಬಹುದಾಗಿದೆ. ಇಂದೋರ್ ಟೆಸ್ಟ್‌ನಲ್ಲಿ ಭಾರತ ಸೋಲನುಭವಿಸಿದ ನಂತರ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿ ಜ್ಯೋತಿರ್ಲಿಂಗದ ದರ್ಶನ ಪಡೆದಿದ್ದರು.
ಉಜ್ಜೈನಿಯ ಮಹಾಕಾಳೇಶ್ವರನ ದರ್ಶನ ಮಾಡಲು ಮುಂಜಾನೆಯೇ ತೆರಳಿದ್ದ ಕೊಹ್ಲಿ-ಅನುಷ್ಕಾ ಶರ್ಮಾ ಬೆಳಗಿನ ಜಾವ 5 ಗಂಟೆಗೆ ಆರಂಭವಾಗುವ ಭಸ್ಮ ಆರತಿಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ, ದೇವರ ಮುಂದೆ ದಂಪತಿ ಕೂತು ಪ್ರಾರ್ಥನೆ ಮಾಡುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಆಧ್ಯಾತ್ಮದತ್ತ ವಿರಾಟ್ ಕೊಹ್ಲಿ ಒಲವು
ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಆಧ್ಯಾತ್ಮದತ್ತ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಈಗ ಕೊಹ್ಲಿಯನ್ನು ಗಮನಿಸಿದರೆ ಅವರು ಮೈದಾನದಲ್ಲಿ ಸಾಕಷ್ಟು ಶಾಂತವಾಗಿ ಇರುತ್ತಾರೆ. ಮೊದಲಾದರೆ ಕೊಹ್ಲಿ ಸಾಕಷ್ಟು ಆಕ್ರಮಣಕಾರಿ ಮನೋಭಾವವನ್ನು ಹೊಂದಿದ್ದರು.
ಆದರೆ ಈಗ ಕೊಹ್ಲಿ ಸಂಪೂರ್ಣವಾಗಿ ಬದಲಾಗಿದ್ದಾರೆ. ಸ್ವಲ್ಪ ಬಿಡುವು ಸಿಕ್ಕರೂ ಪತ್ನಿ ಮಗಳ ಸಮೇತ ಯಾವುದಾದರೂ ಪುಣ್ಯಕ್ಷೇತ್ರಕ್ಕೆ ತೆರಳಿ ಸಮಯ ಕಳೆಯುತ್ತಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಕೂಡ ಕೊಹ್ಲಿ ಹೃಷಿಕೇಶಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದರು. ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ್ದರು. ಋಷಿಕೇಶದ ಸ್ವಾಮಿ ದಯಾನಂದ ಆಶ್ರಮದಲ್ಲಿರುವ ಸ್ವಾಮಿ ದಯಾನಂದ ಜಿ ಮಹಾರಾಜ ಅವರ ಸಮಾಧಿಗೆ ಭೇಟಿ ನೀಡಿದರು.
4ನೇ ಟೆಸ್ಟ್‌ನಲ್ಲಿ ರನ್ ಗಳಿಸುತ್ತಾರಾ ಕೊಹ್ಲಿ?
2022ರಲ್ಲಿ ನಡೆದ ಏಷ್ಯಾಕಪ್ ನಂತರ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ್ದಾರೆ ಏಕದಿನ ಮತ್ತು ಟಿ20 ಮಾದರಿಯಲ್ಲಿ ಏಷ್ಯಾಕಪ್ ನಂತರ 4 ಶತಕಗಳನ್ನು ಸಿಡಿಸಿದ್ದಾರೆ. ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಕಳಪೆ ಫಾರ್ಮ್ ಮುಂದುವರೆಸಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಉತ್ತಮ ರನ್ ಗಳಿಸುವ ವಿಶ್ವಾಸವಿತ್ತಾದರೂ ಮೊದಲ ಮೂರು ಟೆಸ್ಟ್‌ಗಳಲ್ಲಿ ರನ್ ಗಳಿಸಲು ವಿಫಲರಾಗಿದ್ದಾರೆ.
ದೆಹಲಿ ಟೆಸ್ಟ್‌ನಲ್ಲಿ 44 ರನ್ ಗಳಿಸಿರುವುದು ಅವರು ಸರಣಿಯಲ್ಲಿ ಗಳಿಸಿದ ಅತ್ಯಧಿಕ ವೈಯಕ್ತಿಕ ರನ್ ಆಗಿದೆ. ಮಾರ್ಚ್ 9ರಿಂದ ಆರಂಭವಾಗಲಿರುವ ಸರಣಿಯ ಕೊನೆಯ ಟೆಸ್ಟ್‌ನಲ್ಲಿ ಕೊಹ್ಲಿ ರನ್ ಗಳಿಸಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.