ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. 17 ವರ್ಷಗಳಿಂದ ಆರ್‌ಸಿಬಿ ಪ್ರಶಸ್ತಿಯನ್ನು ಗೆಲ್ಲದೇ ನಿರಾಸೆಯನ್ನು ಅನುಭವಿಸಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿತು. ಅಲ್ಲದೆ ಚೊಚ್ಚಲ ಬಾರಿಗೆ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿತ್ತು. ವಿಶ್ವದಲ್ಲೆಡೆ ಅಭಿಮಾನಿಗಳು ಆರ್‌ಸಿಬಿ ಸಾಧನೆಯನ್ನು ಸಭ್ರಮಿಸಿತ್ತು.
ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಸ್ಥಿರ ಪ್ರದರ್ಶನ ನೀಡಿತು. ಅಲ್ಲದೆ ಮೊದಲು ಬ್ಯಾಟ್ ಮಾಡಿ ಪಂಜಾಬ್ ವಿರುದ್ಧ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 190 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 10 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಕಲೆ ಹಾಕಿ ಸೋಲು ಕಂಡಿತು. ಜೂನ್ 3ರ ಮಧ್ಯರಾತ್ರಿಯಿಂದ ದೇಶದಲ್ಲಿ ಸಂಭ್ರಮ ಮನೆ ಮಾಡಿತ್ತು. ಅಂತೆಯೇ ಆರ್‌ಸಿಬಿ ತವರು ಬೆಂಗಳೂರಿನಲ್ಲಿ ಅಭಿಮಾನಿಗಳು ರಸ್ತೆಗಿಳಿದು ಕುಣಿದು ಕುಪ್ಪಳಿಸಿದರು. ಇದೇ ವೇಳೆ ಆರ್‌ಸಿಬಿ ಜೂನ್ 4 ರಂದು ಬೆಂಗಳೂರಿನಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ನಡೆಸುವುದಾಗಿ ಮ್ಯಾನೇಜ್ಮೆಂಟ್ ತಿಳಿಸಿತ್ತು.

ಆರ್‌ಸಿಬಿ ಕಪ್ ಗೆದ್ದ 24 ಗಂಟೆಯೊಳಗೆ ವಿಜೇತ ತಂಡ ಬೆಂಗಳೂರಿಗೆ ಆಗಮಿಸಿತು. ವಿಜೇತ ತಂಡವನ್ನು ರಾಜ್ಯ ಸರ್ಕಾರ ಸಹ ವಿಧಾನಸೌಧದ ಮೇಲೆ ಗೌರವಿಸಿತು. ಆ ಬಳಿಕ ಆರ್‌ಸಿಬಿ ಆಟಗಾರರು ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮಾಚಣೆ ನಡೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು. ಆದರೆ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಜೂನ್ 4 ಇತಿಹಾಸದ ಪುಟದಲ್ಲಿ ಮುದ್ರಿಸಲಾಗುತಿತ್ತು. ಆದರೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರಿಂದ ಜನದಟ್ಟಣೆಯನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿತ್ತು.
ಚಿನ್ನಸ್ವಾಮಿ ಮೈದಾನದಲ್ಲಿ ಇದ್ದ ಆಸನಗಳಿಗಿಂತ ದುಪ್ಪಟ್ಟು ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ಕಣ್ಣು ತುಂಬಿಕೊಳ್ಳಲು ಮೈದಾನದತ್ತ ದೌಡಾಯಿಸಿದರು. ಪರಿಣಾಮ ಜನದಟ್ಟಣೆ ಉಂಟಾಗಿ ಕಾಲ್ತುಳಿತ ಸಂಭವಿಸಿತು. ಈ ವೇಳೆ 11 ಜನರು ಪ್ರಾಣವನ್ನು ಕಳೆದುಕೊಂಡರು. ಅಲ್ಲದೆ ಹಲವು ಜನರು ಗಾಯಕ್ಕೆ ತುತ್ತಾದರು. ಈ ಘಟನೆ ಆರ್‌ಸಿಬಿ ತಂಡ ಮರೆಯಲು ಪ್ರಯತ್ನಿಸಿದರೂ ಮರೆಯಲು ಸಾಧ್ಯವಾಗುತ್ತಿಲ್ಲ. ಆದರೆ ಕಪ್ ಗೆದ್ದ ಸಂಭ್ರಮ ಒಂದು ಕಡೆ ಆದರೆ, ಇನ್ನೊಂದೆಡೆ 11 ಜನರ ಸಾವು. ಹೀಗಾಗಿ ಈ ವರ್ಷ ಆರ್‌ಸಿಬಿ ಅಭಿಮಾನಿಗಳು ಹಾಗೂ ಮ್ಯಾನೇಜ್ಮೆಂಟ್‌ಗೆ ಈ ವರ್ಷ ಎರಡೂ ಕಾರಣಕ್ಕೆ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ.