ಇಂದಿನಿಂದ ಯುಎಇನಲ್ಲಿ ಮಹಿಳಾ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತ ಸಹ ಭಾಗವಹಿಸುತ್ತಿದ್ದು, ಕಪ್ ಗೆಲ್ಲುವ ಫೆವರೀಟ್ ತಂಡಗಳಲ್ಲಿ ಒಂದಾಗಿದೆ. ಈ ಮೆಗಾ ಟೂರ್ನಿಯನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇವರೆಗೆ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮಾತ್ರ ಮಹಿಳಾ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿವೆ. ಈ ಬಾರಿಯ ಚಾಂಪಿಯನ್‌ರಿಗೆ ಹುಡುಕಾಟ ನಡೆದಿದೆ.
ಬಾಂಗ್ಲಾದೇಶದಲ್ಲಿ ನಡೆಯಬೇಕಿದ್ದ ಮಹಿಳೆಯ ಟಿ20 ವಿಶ್ವಕಪ್ ಯುಎಇಗೆ ಶಿಫ್ಟ್ ಆಗಿದೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ಗಮನದಲ್ಲಿಟ್ಟುಕೊಂಡು, ಐಸಿಸಿ ಈ ಟೂರ್ನಿಯನ್ನು ಶಿಫ್ಟ್ ಮಾಡಿದೆ. ಈಗ ಮರಳು ನಾಡಿನಲ್ಲಿ ಕ್ರಿಕೆಟ್ ಕ್ರೇಜ್ ಹೆಚ್ಚಾಗಿದೆ. ಅಕ್ಟೋಬರ್ 3 ರಿಂದ 20ರವರೆಗೆ ಮಹಿಳಾ ವಿಶ್ವಕಪ್ ನಡೆಯಲಿದ್ದು, ಒಟ್ಟು 10 ತಂಡಗಳು ಭಾಗವಹಿಸುತ್ತಿವೆ.

ಭಾರತ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಬಲಿಷ್ಠ ತಂಡಗಳು ಇವೆ. ಒಟ್ಟು 10 ತಂಡಗಳನ್ನು ಎರಡು ಗುಂಪಿನಲ್ಲಿ ವಿಂಗಡಿಸಲಾಗಿದೆ. ಭಾರತವು ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಎ ಗುಂಪಿನಲ್ಲಿ ಕಾಣಿಸಿಕೊಂಡೆ, ಬಾಂಗ್ಲಾದೇಶ, ಸ್ಕಾಟ್ಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಭಾರತ ತನ್ನ ಅಭಿಯಾನವನ್ನು ಅಕ್ಟೋಬರ್ 4ರಿಂದ ಆರಂಭಿಸಲಿದೆ. ಹರ್ಮನ್ ಪ್ರೀತ್ ಪಡೆ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಾದಾಟ ನಡೆಸಲಿದೆ. ಅಕ್ಟೋಬರ್ 6 ರಂದು ಭಾರತದ ಎರಡನೇ ಪಂದ್ಯ ನಡೆಯಲಿದ್ದು, ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಅಕ್ಟೋಬರ್ 9 ರಂದು ಶ್ರೀಲಂಕಾ ವಿರುದ್ಧ, ಅಕ್ಟೋಬರ್ 13 ರಂದು ಆಸ್ಟ್ರೇಲಿಯಾ ವಿರುದ್ಧ ಪಂದ್ಯವನ್ನು ಆಡಲಿದೆ.

ಭಾರತ ಮಹಿಳಾ ತಂಡ ಒಮ್ಮೆಯೂ ಕಪ್‌ಗೆ ಮುತ್ತಿಟ್ಟಿಲ್ಲ. ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ ಪುರುಷರ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಭಾರತ ತಂಡದ ಪ್ರೇರಣೆ, ಹರ್ಮನ್ ಪ್ರಿತ್ ಬಳಗಕ್ಕೆ ಇರಲಿದೆ. ಭಾರತ ಪುರುಷರ ತಂಡ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿದೆ. ಮಹಿಳಾ ಟಿ20 ವಿಶ್ವಕಪ್ ಒಟ್ಟು 8 ಆವೃತ್ತಿಗಳನ್ನು ಕಂಡಿದೆ. ಆದರೆ ಟೀಂ ಇಂಡಿಯಾ ಇಲ್ಲಿಯವರೆಗೆ ಒಂದು ಬಾರಿಯೂ ಟ್ರೋಫಿ ಎತ್ತಿ ಹಿಡಿದಿಲ್ಲ. ಭಾರತ ಒಮ್ಮೆ ಫೈನಲ್ ತಲುಪಿತ್ತು.
ಈ ಮೆಗಾ ಟೂರ್ನಿಯನ್ನು ಕವರ್ ಮಾಡಲು 28 ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಡಿಸಿಷನ್ ರಿವ್ಯೂ ಸಿಸ್ಟಂ ಎಲ್ಲಾ ಪಂದ್ಯಗಳಲ್ಲಿಯೂ ಲಭ್ಯವಿರಲಿದೆ. ಇನ್ನು ಇದೇ ಮೊದಲ ಬಾರಿಗೆ ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಸ್ಮಾರ್ಟ್ ರಿಪ್ಲೇ ಸಿಸ್ಟಮ್ ಅನ್ನು ಬಳಸಲಾಗುವುದು. ಈ ಹಿಂದೆ ಸ್ಮಾರ್ಟ್ ರಿಪ್ಲೇ ಸಿಸ್ಟಮ್ ಅನ್ನು ದಿ ಹಂಡ್ರೆಡ್ ಮತ್ತು ಐಪಿಎಲ್ 2024 ರಲ್ಲಿ ಬಳಸಲಾಗಿತ್ತು. ಸ್ಮಾರ್ಟ್ ರಿಪ್ಲೇ ಸಿಸ್ಟಮ್‌ನಲ್ಲಿ, ಮೂರನೇ ಅಂಪೈರ್ ಈಗ ಹಾಕ್-ಐ ಆಪರೇಟರ್‌ಗಳಿಂದ ನೇರ ಇನ್‌ಪುಟ್‌ಗಳನ್ನು ಸ್ವೀಕರಿಸುತ್ತಾರೆ. ಹಾಕ್ ಐ ಆಪರೇಟರ್ ಮೂರನೇ ಅಂಪಾಯರ್ ಇರುವ ಕೋಣೆಯಲ್ಲಿ ಇರುತ್ತಾರೆ. ಇದರಿಂದ ಅಂಪೈರ್‌ಗಳಿಗೆ ತಮ್ಮ ನಿರ್ಧಾರವನ್ನು ಪ್ರಕಟಿಸಲು ಸಹಾಯವಾಗುತ್ತದೆ.