ಭಾರತದಲ್ಲೇ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಶುರುವಾಗಿದ್ದು, ಇದಕ್ಕಾಗಿ ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಕಾತರರಾಗಿದ್ದಾರೆ.
ವಿಶ್ವಕಪ್‌ಗಾಗಿ ಭಾಗವಹಿಸುವ ಎಲ್ಲಾ ಹತ್ತು ತಂಡಗಳು ತಮ್ಮ ಬಲಿಷ್ಠ ಪಡೆಯನ್ನು ನಿರ್ಮಿಸುತ್ತಿವೆ. ಈಗಾಗಲೇ, ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ನೆದರ್ಲ್ಯಾಂಡ್ಸ್, ಅಫ್ಘಾನಿಸ್ತಾನ ತಮ್ಮ 15 ಸದಸ್ಯರ ತಂಡವನ್ನು ಪ್ರಕಟಿಸಿವೆ.

ಇನ್ನು ತವರಿನಲ್ಲಿಯೇ ಐಸಿಸಿ ವಿಶ್ವಕಪ್ ಪಂದ್ಯಾವಳಿ ನಡೆಯುವ ಕಾರಣ, ಸಹಜವಾಗಿ ಭಾರತವೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. 2011ರ ನಂತರ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಅವಕಾಶ ರೋಹಿತ್ ಶರ್ಮಾ ಬಳಗಕ್ಕಿದೆ. ಅಲ್ಲದೆ, ದಶಕದ ಐಸಿಸಿ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳಲು ಎದುರು ನೋಡುತ್ತಿದೆ.
ಇದೇ ವೇಳೆ ವೆಸ್ಟ್ ಇಂಡೀಸ್‌ನ ಲೆಜೆಂಡರಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರು ಮುಂಬರುವ 2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ತಂಡವು ಉತ್ತಮ ಪ್ರದರ್ಶನ ನೀಡಲು ಬೆಂಬಲಿಸಿದ್ದಾರೆ. ದೊಡ್ಡ ಬೆಂಬಲವು ಭಾರತಕ್ಕೆ ಗಂಭೀರವಾದ ಉತ್ತೇಜನಕಾರಿಯಾಗಿದೆ ಎಂದು ಹೇಳಿದ್ದಾರೆ.

ಐಸಿಸಿಯೊಂದಿಗೆ ಮಾತನಾಡಿದ ಮಾಜಿ ಬ್ಯಾಟರ್ ವಿವಿಯನ್ ರಿಚರ್ಡ್ಸ್, ಮುಂಬರುವ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಇಷ್ಟಪಡುವುದಾಗಿ ಹೇಳಿದರು. ಭಾರತ ದೇಶದೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿರುವುದಾಗಿ ತಿಳಿಸಿದರು.
2023ರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯು ಅಕ್ಟೋಬರ್ 5ರಂದು ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಉದ್ಘಾಟನೆ ಪಂದ್ಯದೊಂದಿಗೆ ಚಾಲನೆ ಸಿಗಲಿದೆ.
"ನಾನು ಭಾರತ ತಂಡವನ್ನು ಇಷ್ಟಪಡುತ್ತೇನೆ. ಭಾರತದೊಂದಿಗೆ ನಾನು ಆಳವಾದ ಸಂಬಂಧವನ್ನು ಹೊಂದಿದ್ದೇನೆ. ಸ್ವತಃ ನಾನು ಭಾರತದಲ್ಲಿ ನನ್ನ ಕ್ರಿಕೆಟ್ ಪಾದಾರ್ಪಣೆ ಮಾಡಿದ್ದೇನೆ ಮತ್ತು ಪ್ರಪಂಚದಲ್ಲೇ ಆ ದೇಶದ ಬಗ್ಗೆ ನನಗೆ ಸಾಕಷ್ಟು ಭಾವನಾತ್ಮಕ ಕಾರಣಗಳಿವೆ," ಎಂದು ವೆಸ್ಟ್ ಇಂಡೀಸ್‌ನ ಮಾಜಿ ಲೆಜೆಂಡ್ ವಿವಿಯನ್ ರಿಚರ್ಡ್ಸ್ ಹೇಳಿದರು.
ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮವಾಗಿ ಆಡಲು ಬೆಂಬಲಿಸುತ್ತೇನೆ ಎಂದು ಹೇಳಿದ ಅವರು, ತವರಿನ ಬೆಂಬಲವು ಗಂಭೀರವಾಗಿ ಪ್ರೋತ್ಸಾಹಿಸಬಲ್ಲದು ಎಂದು ಒತ್ತಾಯಿಸಿದರು.
"ನಾನು ಉತ್ತಮವಾಗಿ ಪ್ರದರ್ಶನ ನೀಡಲು ಭಾರತವನ್ನು ಬೆಂಬಲಿಸುತ್ತೇನೆ. ಅಲ್ಲದೆ ತವರಿನ ಬೃಹತ್ ಬೆಂಬಲವನ್ನು ಹೊಂದಿದ್ದಾರೆ. ನೀವು ತವರಿನ ಅಭಿಮಾನಿಗಳ ಬೃಹತ್ ಬೆಂಬಲವನ್ನು ಹೊಂದಿರುವಾಗ ಅದು ಗಂಭೀರವಾಗಿ ಉತ್ತೇಜನಕಾರಿಯಾಗಿದೆ ಎಂಬುದನ್ನು ನೀವು ಎಂದಿಗೂ ಮರೆಯಲು ಸಾಧ್ಯವಿಲ್ಲ," ಎಂದು ವಿವಿಯನ್ ರಿಚರ್ಡ್ ಅಭಿಪ್ರಾಯಪಟ್ಟರು.
46 ದಿನಗಳ ನಡೆಯುವ 10 ತಂಡಗಳ ಏಕದಿನ ಕ್ರಿಕೆಟ್ ವಿಶ್ವಕಪ್ ಅಕ್ಟೋಬರ್ 5ರಂದು ಪ್ರಾರಂಭವಾಗಲಿದೆ. ಈ ಮೊದಲು ಎಂಟು ತಂಡಗಳು ನೇರ ಅರ್ಹತೆಯನ್ನು ಗಳಿಸಿದ್ದವು. ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್ ಕಳೆದ ತಿಂಗಳು ಜಿಂಬಾಬ್ವೆಯಲ್ಲಿ ನಡೆದ ಕ್ವಾಲಿಫೈಯರ್ ಸುತ್ತಿನ ಮೂಲಕ ಅಂತಿಮ ಎರಡು ಸ್ಥಾನಗಳಿಗೆ ಅರ್ಹತೆ ಗಿಟ್ಟಿಸಿಕೊಂಡವು.
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ಈ 10 ತಂಡಗಳು ಐಸಿಸಿ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಗುಂಪು ಹಂತವನ್ನು ರೌಂಡ್-ರಾಬಿನ್ ಮಾದರಿಯಲ್ಲಿ ಆಡಲಾಗುತ್ತದೆ ಮತ್ತು ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಹಂತಗಳಿಗೆ ಅರ್ಹತೆ ಪಡೆಯುತ್ತವೆ.
ಸೆಮಿಫೈನಲ್ ಪಂದ್ಯಗಳು ನವೆಂಬರ್ 15ರಂದು ಮುಂಬೈನಲ್ಲಿ ಮತ್ತು ನವೆಂಬರ್ 16ರಂದು ಕೋಲ್ಕತ್ತಾದಲ್ಲಿ ನಡೆಯಲಿದ್ದು, ನವೆಂಬರ್ 19ರಂದು ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.