ಫಿನಿಷರ್, ಓಪನರ್ ಎಲ್ಲವೂ ಸುಳ್ಳು: ಕೊಹ್ಲಿ ಪರ ಮಾತನಾಡಿ ರೋಹಿತ್, ಧೋನಿಗೆ ಟಾಂಗ್ ಕೊಟ್ಟ ಗಂಭೀರ್!

ಕಳೆದ ವರ್ಷ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದದ್ದು ಭಾರತ ಕ್ರಿಕೆಟ್‍ನಲ್ಲಿ ಹಲವಾರು ಟೀಕೆ ಮತ್ತು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ. ಹೌದು, ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನ ತಾವು ಈ ರೀತಿಯ ನಿರ್ಧಾರವನ್ನು ಕೈಗೊಳ್ಳುತ್ತಿರುವುದಾಗಿ ಘೋಷಣೆಯನ್ನು ಮಾಡಿದ್ದ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿಗೆ ಆಶ್ಚರ್ಯವನ್ನು ಉಂಟು ಮಾಡಿದ್ದರು.
ಸಾಕಷ್ಟು ಯಶಸ್ಸುಗಳನ್ನು ಸಾಧಿಸಿರುವ ವಿರಾಟ್ ಕೊಹ್ಲಿ ಹೀಗೆ ದಿಢೀರನೆ ನಾಯಕತ್ವವನ್ನು ತ್ಯಜಿಸುವ ನಿರ್ಧಾರಕ್ಕೆ ಕೈ ಯಾಕೆ ಹಾಕುತ್ತಿದ್ದಾರೆ ಎಂಬ ಬೇಸರ ದೊಡ್ಡಮಟ್ಟದಲ್ಲಿಯೇ ವ್ಯಕ್ತವಾಗಿತ್ತು. ಹೀಗೆ ವಿರೋಧಗಳ ನಡುವೆಯೇ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ ವಿರಾಟ್ ಕೊಹ್ಲಿ ನಂತರ ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಕೂಡ ಕೆಳಗಿಳಿಸಲ್ಪಟ್ಟರು. ಇನ್ನು ವಿರಾಟ್ ಕೊಹ್ಲಿ ಸೀಮಿತ ಓವರ್ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ರೋಹಿತ್ ಶರ್ಮಾ ನೂತನ ನಾಯಕನಾಗಿ ಆಯ್ಕೆಗೊಂಡರು. ಇದಾದ ಕೆಲ ದಿನಗಳ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೂ ಸಹ ಕೊಹ್ಲಿ ರಾಜೀನಾಮೆಯನ್ನು ಸಲ್ಲಿಸಿದರು.
ಹೀಗೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಎಲ್ಲಾ ಮಾದರಿಯ ನಾಯಕತ್ವವನ್ನು ಕಳೆದುಕೊಂಡ ನಂತರ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ನಡುವಿನ ಮನಸ್ತಾಪವೇ ಇದಕ್ಕೆಲ್ಲಾ ಕಾರಣ ಎಂಬ ಆರೋಪಗಳು ದೊಡ್ಡಮಟ್ಟದಲ್ಲಿ ವ್ಯಕ್ತವಾದವು. ಬಿಸಿಸಿಐ ಬೇಕಂತಲೇ ವಿರಾಟ್ ಕೊಹ್ಲಿ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದೆ ಎಂಬ ಅಭಿಪ್ರಾಯಗಳನ್ನು ಕೆಲ ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವಾರು ಕ್ರಿಕೆಟ್ ಅಭಿಮಾನಿಗಳು ವ್ಯಕ್ತಪಡಿಸಿದರು. ಇನ್ನು ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಂಡಿರುವುದು ಟೀಮ್ ಇಂಡಿಯಾ ಮೇಲೆ ಪ್ರಭಾವ ಬೀರಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದ್ದು, ಈ ಕುರಿತಾಗಿ ಇದೀಗ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಾತನಾಡಿ ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ನಾಯಕತ್ವ ಕಳೆದುಕೊಂಡಿರುವುದು ಯಾವುದೇ ಬದಲಾವಣೆ ತರುವುದಿಲ್ಲ
ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಂಡಿರುವುದು ತಂಡದ ಮೇಲಾಗಲಿ ಅಥವಾ ಸ್ವತಃ ವಿರಾಟ್ ಕೊಹ್ಲಿ ಅವರ ಮೇಲಾಗಲಿ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಹಾಗೂ ಇದರಿಂದ ತಂಡದಲ್ಲಿ ಹಾಗೂ ವಿರಾಟ್ ಕೊಹ್ಲಿ ಆಟದಲ್ಲಿ ಹೆಚ್ಚೇನೂ ಬದಲಾವಣೆಗಳು ಕೂಡ ಕಂಡು ಬರುವುದಿಲ್ಲ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಬಾಲ್ಯದಿಂದಲೇ ನಾಯಕನಾಗುತ್ತೇನೆ ಎಂದು ಯಾರೂ ಕನಸು ಕಾಣುವುದಿಲ್ಲ
ಓರ್ವ ಕ್ರಿಕೆಟಿಗ ಚಿಕ್ಕ ವಯಸ್ಸಿನಿಂದ ತಾನು ಕ್ರಿಕೆಟಿಗ ಆಗಬೇಕು ಎಂಬ ಕನಸನ್ನು ಹೊತ್ತು ಅಭ್ಯಾಸವನ್ನು ಆರಂಭಿಸುತ್ತಾನೆಯೇ ಹೊರತು ತಂಡದ ನಾಯಕನಾಗಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುವುದಿಲ್ಲ ಎಂದಿರುವ ಗೌತಮ್ ಗಂಭೀರ್ ನಾಯಕತ್ವ ಒಂದು ಜವಾಬ್ದಾರಿಯೇ ವಿನಃ ಶಾಶ್ವತವಾದ ಪಟ್ಟವಲ್ಲ, ಇದೇ ಮಾದರಿಯಲ್ಲಿ ವಿರಾಟ್ ಕೊಹ್ಲಿ ಕೂಡ ಯೋಚಿಸಲಿದ್ದಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿರುವ ಗೌತಮ್ ಗಂಭೀರ್ ನಾಯಕತ್ವ ಕಳೆದುಕೊಂಡದ್ದು ವಿರಾಟ್ ಕೊಹ್ಲಿಯಲ್ಲಿ ಬದಲಾವಣೆಗಳನ್ನೇನಾದರೂ ತಂದರೆ ಅದು ಗಂಭೀರವಾದಂತಹ ತಪ್ಪು ಎಂದಿದ್ದಾರೆ.

ಫಿನಿಶರ್, ಓಪನರ್ ಎಂಬುದೆಲ್ಲಾ ಸುಳ್ಳು ಎಂದ ಗಂಭೀರ್
ಇನ್ನು ತಂಡದಲ್ಲಿನ ಒಬ್ಬ ಆಟಗಾರ ಒಂದೊಂದು ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬುದರ ಕುರಿತು ಮಾತನಾಡಿರುವ ಗೌತಮ್ ಗಂಭೀರ್ ತಂಡದಲ್ಲಿ ಈತ ಓಪನರ್, ಈತ ಫಿನಿಷರ್ ಎಂಬುದೆಲ್ಲ ಸುಳ್ಳು ಎಂದಿದ್ದಾರೆ. ನನ್ನ ಪ್ರಕಾರ ನಮ್ಮ ತಂಡ ಚೇಸಿಂಗ್ ಮಾಡಿದರೆ ತಂಡದ ಎಲ್ಲಾ ಆಟಗಾರರೂ ಸೇರಿ ಆ ಗುರಿಯನ್ನು ಬೆನ್ನತ್ತಲು ನೋಡುತ್ತೇವೆ ಹಾಗೂ ನಮ್ಮ ತಂಡ ಮೊದಲು ಬ್ಯಾಟಿಂಗ್ ಮಾಡಿದರೆ ಎದುರಾಳಿ ತಂಡಗಳ ಆಟಗಾರರು ಗುರಿ ಬೆನ್ನತ್ತದ ಹಾಗೆ ವಿಕೆಟ್ ಕಬಳಿಸಲು ಇಡೀ ತಂಡ ಶ್ರಮಿಸುತ್ತದೆಯೇ ಹೊರತು ಅದರಲ್ಲಿ ಈತ ಫಿನಿಷರ್, ಈತ ಓಪನರ್ ಹಾಗೂ ಈತ ಡೆತ್ ಬೌಲರ್ ಎಂಬ ನಿರ್ದಿಷ್ಟ ಜವಾಬ್ದಾರಿ ಇಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಈ ಮೂಲಕ ಫಿನಿಶರ್ ಎಂಎಸ್ ಧೋನಿ, ಓಪನರ್ ರೋಹಿತ್ ಶರ್ಮಾ ಹಾಗೂ ಡೆತ್ ಬೌಲರ್ ಜಸ್ಪ್ರೀತ್ ಬುಮ್ರಾ ಎಂಬ ಬಿರುದುಗಳೆಲ್ಲಾ ಸತ್ಯಕ್ಕೆ ದೂರವಾದದ್ದು ಎಂದು ಪರೋಕ್ಷವಾಗಿ ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ ಎಂದು ಆ ಕ್ರಿಕೆಟಿಗರ ಕೆಲ ಅಭಿಮಾನಿಗಳು ಗಂಭೀರ್ ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ ಮತ್ತು ಗೌತಮ್ ಗಂಭೀರ್ ಬೇಡವಾಗಿದ್ದ ವಿವಾದವೊಂದನ್ನು ಇದೀಗ ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications