ರೋಹಿತ್ ಜೊತೆಗಿನ ವೈಮನಸ್ಸು: ಮೌನ ಮುರಿದ ವಿರಾಟ್ ಕೊಹ್ಲಿ

ಮುಂಬೈ, ಜುಲೈ 29: ಉಪನಾಯಕ ರೋಹಿತ್ ಶರ್ಮಾ ಜೊತೆಗೆ ವೈಮನಸ್ಸು ಹೊಂದಿರುವ ಊಹಾಪೋಹಗಳಿಗೆ ಕೊನೆಗೂ ತೆರೆ ಎಳೆದಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಈ ರೀತಿಯ ವದಂತಿಗಳಿಂದ ತಮ್ಮ ಮನಸ್ಸಿಗೆ ಘಾಸಿಯುಂಟಾಗಿದೆ ಎಂದು ಹೇಳಿದ್ದಾರೆ.
ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಆಗಸ್ಟ್ 3ರಂದು ಮೊದಲ ಟಿ20 ಪಂದ್ಯ ನಡೆಯಲಿದೆ. ಭಾರತ ತಂಡ ವಿಂಡೀಸ್ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರಾಟ್, ತಮ್ಮ ಮತ್ತು ರೋಹಿತ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಲ್ಲವೂ ಸರಿಯಾಗೇ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
"ನನಗಂತೂ ಇದು ಅಚ್ಚರಿ ತಂದಿದೆ. ಈ ರೀತಿಯ ಸಂಗತಿಗಳನ್ನು ಹುಟ್ಟುಹಾಕುವುದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ. ಈ ರೀತಿಯ ಸಂಗತಿಗಳನ್ನು ಹಿಂದಿನಿಂದಲೂ ಕೇಳುತ್ತಾ ಬಂದಿದ್ದೇನೆ. ವೈಯಕ್ತಿಕ ಜೀವನವನ್ನು ಎಳೆದು ತರುವುದು ನಿಜಕ್ಕೂ ಅಗೌರವ ತರುವಂಥದ್ದು. ನನ್ನ ಮತ್ತು ರೋಹಿತ್ ನಡುವೆ ಯಾವುದೇ ರೀತಿಯ ವೈಮನಸ್ಸಿಲ್ಲ," ಎಂದು ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಮೌನ ಮುರಿದಿದ್ದಾರೆ.
"ನಮ್ಮಿಬ್ಬರ ಮಧ್ಯೆ ಯಾವುದೇ ಸಮಸ್ಯೆ ಇಲ್ಲ. ಒಂದುವೇಳೆ ನನಗೆ ಯಾರಾದರೂ ಹಿಡಿಸಿಲ್ಲವಾದರೆ, ಅದು ನನ್ನ ಮುಖಭಾವನೆಯಲ್ಲೇ ತಿಳಿದುಬಿಡುತ್ತದೆ. ಇನ್ನು ತಂಡದಲ್ಲಿನ ವಾತಾವರಣವೇ ಸರಿ ಇಲ್ಲವೆಂದಲ್ಲಾ ಸುದ್ದಿಯಾಗಿರುವುದನ್ನು ಕೇಳಿದ್ದೇನೆ. ಹೀಗಿದ್ದರೆ ನಮ್ಮ ತಂಡ ಅಷ್ಟು ಉತ್ತಮ ಆಟವಾಡಲು ಖಂಡಿತಾ ಸಾಧ್ಯವಾಗುತ್ತಿರಲಿಲ್ಲ. ಅವಾಕಶ ಸಿಕ್ಕ ಸಂದರ್ಭದಲ್ಲೆಲ್ಲಾ ರೋಹಿತ್ ಅವರನ್ನು ಕೊಂಡಾಡಿದ್ದೇನೆ. ನಮ್ಮಿಬ್ಬರ ಮಧ್ಯೆ ಏನೂ ಇಲ್ಲ," ಎಂದು ಕೊಹ್ಲಿ ವಿವರಿಸಿದ್ದಾರೆ.
ವಿಶ್ವಕಪ್ ಟೂರ್ನಿ ವೇಳೆ ಟೀಮ್ ಇಂಡಿಯಾ ಆಟಗಾರರು ಕೋಚ್ ಮತ್ತು ನಾಯಕನ ಅನುಮತಿ ಇಲ್ಲದೇ ತಮ್ಮ ಪತ್ನಿ ಹಾಗು ಕುಟುಂಬದವರೊಡನೆ ಹೆಚ್ಚು ಸಮಯ ಕಳೆದಿದ್ದಾರೆ ಎಂಬ ಸುದ್ದಿ ಸ್ಫೋಟವಾದ ಬಳಿಕ ವಿರಾಟ್ ಮತ್ತು ರೋಹಿತ್ ನಡುವೆ ಯಾವುದೂ ಸರಿಯಿಲ್ಲ ಎಂಬ ವದಂತಿಗಳು ಹಬ್ಬಿದವು.
ಇದೇ ವೇಳೆ ಸುಪ್ರೀಂ ನೇಮಿತ ಬಿಸಿಸಿಐ ಆಡಳಿತ ಸಮಿತಿ ಕೂಡ ಆಟಗಾರರ ಜೊತೆಗೆ ಪತ್ನಿ ಹಾಗೂ ಕುಟುಂಬ ಸದಸ್ಯರು ಕೂಡ ಪ್ರಯಾಣ ಬೆಳೆಸುವುದರ ಕುರಿತಾಗಿ ನಾಯಕ ಮತ್ತು ಕೋಚ್ ನಿರ್ಧಾರ ತೆಗೆದುಕೊಳ್ಳಲಿ ಎಂದು ಸೂಚಿಸಿರುವುದನ್ನು ಮಾಜಿ ಸಿಜೆಐ ಆರ್.ಎಂ ಲೋಧಾ ಮತ್ತು ಬಿಸಿಸಿಐನ ಅಧಿಕಾರಿಗಳು ಪ್ರಶ್ನಿಸಿದ್ದರು.
ಇದರ ಬೆನ್ನಲ್ಲೇ ಈರೀತಿಯ ಯಾವುದೇ ಆಟಗಾರರ ತಮ್ಮ ಗಮನಕ್ಕೆ ತರದೇ ಇರುವ ಸಂದರ್ಭದಲ್ಲಿ ಈ ರೀತಿಯ ಊಹಾಪೋಹಗಳಿಗೆ ಬಿಸಿಸಿಐನ ಆಡಳಿತ ಸಮಿತಿ (ಸಿಒಎ) ಉತ್ತರಿಸುವುದಿಲ್ಲ ಎಂದು ಸಿಒಎನ ಸದಸ್ಯರೊಬ್ಬರು ಹೇಳಿಕೆ ನೀಡಿದ್ದರು.
"ಮಾಧ್ಯಮಗಳಲ್ಲಿ ವರದಿಯಾಗುವು ಎಲ್ಲಾ ವಿಷಯಗಳಿಗೂ ಸಿಒಎ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಆಟಗಾರರು ಯಾವುದೇ ರೀತಿಯ ಗೊಂದಲ ಅಥವಾ ಸಮಸ್ಯೆ ಎದುರಿಸಿದರೆ ಅವರೇ ನಮ್ಮ ಗಮನಕ್ಕೆ ತರಬೇಕು. ಆಟಗಾರರು ನಮ್ಮೊಂದಿಗೆ ಏನನ್ನೂ ಹೇಳದೇ ಇರುವ ಸಂದರ್ಭದಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ," ಎಂದು ಸಿಒಎ ಸದಸ್ಯರೊಬ್ಬರು ಹೇಳಿಕೆ ನೀಡಿದ್ದರು.
ವಿಂಡೀಸ್ ವಿರುದ್ಧ ಟಿ20 ಸರಣಿಗೆ ಭಾರತದ ಸಂಭಾವ್ಯ 11
ರೋಹಿತ್ ಶರ್ಮಾ (ಓಪನರ್), ಶಿಖರ್ ಧವನ್ (ಓಪನರ್), ವಿರಾಟ್ ಕೊಹ್ಲಿ (ನಂ.3, ನಾಯಕ), ಕೆ.ಎಲ್ ರಾಹುಲ್ (ನಂ.4, ಬ್ಯಾಟ್ಸ್‌ಮನ್), ಶ್ರೇಯಸ್ ಅಯ್ಯರ್ ಅಥವಾ ಮನೀಶ್ ಪಾಂಡೆ (ನಂ.5, ಬ್ಯಾಟ್ಸ್‌ಮನ್), ರಿಷಭ್ ಪಂತ್ (ನಂ.6, ವಿಕೆಟ್‌ಕೀಪರ್), ಕೃಣಾಲ್ ಪಾಂಡ್ಯ (ನಂ.7, ಆಲ್‌ರೌಂಡರ್), ವಾಷಿಂಗ್ಟನ್ ಸುಂದರ್ (ನಂ.8, ಸ್ಪಿನ್ನಿಂಗ್ ಆಲ್‌ರೌಂಡರ್), ಭುವನೇಶ್ವರ್ ಕುಮಾರ್ (ನಂ.9, ವೇಗಿ), ದೀಪಕ್ ಚಹರ್ (ನಂ.10, ವೇಗಿ), ಖಲೀಲ್ ಅಹ್ಮದ್ ಅಥವಾ ನವದೀಪ್ ಸೈನಿ (ನಂ.11, ವೇಗಿ).
ಮನೀಶ್ ಪಂಡೆಗೆ ಸ್ಥಾನ
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಪ್ರಕಟಿಸಲಾದ ಟೀಮ್ ಇಂಡಿಯಾದಲ್ಲಿ ಕರ್ನಾಟಕದ ಮೂವರು ಬ್ಯಾಟ್ಸ್‌ಮನ್‌ಗಳು ಸ್ಥಾನ ಪಡೆದಿದ್ದಾರೆ. ಟೀಮ್ ಇಂಡಿಯಾದ ಖಾಯಂ ಸದಸ್ಯ ಆಗಿರುವ ಆರಂಭಕಾರ ಕೆ.ಎಲ್ ರಾಹುಲ್ ಅವರಿಗೆ ಟೆಸ್ಟ್, ಏಕದಿನ ಮತ್ತು ಟಿ20 ಮೂರರಲ್ಲೂ ಸ್ಥಾನ ಲಭ್ಯವಾಗಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್ ಅವರಿಗೂ ಟೆಸ್ಟ್ ತಂಡದಲ್ಲಿನ ಸ್ಥಾನ ಸದ್ಯಕ್ಕೆ ಭದ್ರವಾಗಿದೆ. ಇನ್ನು ಭಾರತ 'ಎ' ತಂಡದ ಪರ ರನ್ ಹೊಳೆಯನ್ನೇ ಹರಿಸುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮನೀಶ್ ಪಾಂಡೆಗೂ ಟೀಮ್ ಇಂಡಿಯಾದ ಬುಲಾವ್ ಮರಳಿ ಸಿಕ್ಕಿದ್ದು, ಏಕದಿನ ಮತ್ತು ಟಿ20 ತಂಡಗಳಲ್ಲಿ ಸ್ಥಾನ ಸಿಕ್ಕಿದೆ.
ಭಾರತ ಟೆಸ್ಟ್ ತಂಡ (2 ಪಂದ್ಯ, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್)
ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಮಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ರೋಹಿತ್ ಶರ್ಮಾ, ರಿಷಭ್ ಪಂತ್ (ವಿಕೆಟ್-ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಉಮೇಶ್ ಯಾದವ್.
ಏಕದಿನ ಸರಣಿಗೆ ಭಾರತ ತಂಡ (ಮೂರು ಪಂದ್ಯಗಳು)
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಯುಜ್ವೆಂದ್ರ ಚಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ನವದೀಪ್ ಸೈನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications