2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿತು.
ಏಕದಿನ ವಿಶ್ವಕಪ್ ಭಾರತ ತಂಡವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು, ಪ್ರಮುಖ ಬೌಲರ್‌ಗಳನ್ನು ಹೊರಗಿಟ್ಟಿರುವುದಕ್ಕೆ ಕಿಡಿಕಾರಿದ್ದು, ಅವರು ಕೆಲವು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಹರ್ಭಜನ್ ಸಿಂಗ್, ವಿಶ್ವಕಪ್‌ಗಾಗಿ ಭಾರತ ತಂಡವನ್ನು ವಿಶ್ಲೇಷಿಸುವಾಗ ತಮ್ಮದೇ ಪಂಜಾಬ್ ರಾಜ್ಯದ ವೇಗಿಯ ಹೆಸರನ್ನು ತೆಗೆದುಕೊಂಡರು. ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರೀ ಪ್ರಭಾವ ಬೀರುತ್ತಿದ್ದರು ಎಂದಿದ್ದಾರೆ.

ಅರ್ಶ್‌ದೀಪ್ ಸಿಂಗ್ ಯಾಕೆ ಉತ್ತಮ ಆಯ್ಕೆಯಾಗಬಹುದು ಎಂದು ವಾದಿಸಿದ ಹರ್ಭಜನ್ ಸಿಂಗ್, ಪಂಜಾಬ್ ವೇಗಿ ವೇಗದ ದಾಳಿಯಲ್ಲಿ ವ್ಯತ್ಯಾಸ ತರಬಹುದು ಹೇಳಿದರು. ಅವರ ಇನ್‌ಸ್ವಿಂಗ್ ಎಸೆತಗಳು ಎದುರಾಳಿ ತಂಡದ ಬಲಗೈ ಬ್ಯಾಟರ್‌ಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದರು.
"ಎಡಗೈ ವೇಗಿಗಳು ಹೊಸ ಚೆಂಡಿನಲ್ಲಿ ಪ್ರಭಾವ ಬೀರುತ್ತಾರೆ. ಆರಂಭದಲ್ಲಿ ಎದುರಾಳಿಯ ಎರಡು ವಿಕೆಟ್‌ಗಳನ್ನು ಪಡೆದರೆ ಅದು ಆಟದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. ಬಲಗೈ ಆಟಗಾರರು ಅದನ್ನು ಮಾಡಲು ಸಾಧ್ಯವಿಲ್ಲ ಎಂದು ನಾನು ಹೇಳುತ್ತಿಲ್ಲ, ಆದರೆ ಎಡಗೈ ವೇಗಿ ವಿಕೆಟ್ ಪಡೆಯಲು ನಿಜವಾದ ಕೋನ ಹೊಂದಿರುತ್ತಾರೆ," ಎಂದು ಟರ್ಬನೇಟರ್ ಹರ್ಭಜನ್ ಸಿಂಗ್ ತಿಳಿಸಿದರು.
"ಶಾಹೀನ್ ಶಾ ಆಫ್ರಿದಿ ಮತ್ತು ಮಿಚೆಲ್ ಸ್ಟಾರ್ಕ್ ಪಂದ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತಾರೆ ಎಂಬುದನ್ನು ನೀವು ನೋಡಬಹುದು. 2015ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಾಗ, ಮಿಚೆಲ್ ಸ್ಟಾರ್ಕ್ ಪಂದ್ಯದ ಮೇಲೆ ಭಾರಿ ಪ್ರಭಾವ ಬೀರಿದರು. ಬ್ರೆಂಡನ್ ಮೆಕಲಮ್ ಅವರನ್ನು ಮೊದಲ ಎಸೆತದಲ್ಲಿ ಔಟ್ ಮಾಡಿದರು. ಬಲಗೈ ಬ್ಯಾಟರ್‌ಗಳಿಗೆ ಯಾವಾಗಲೂ ಸವಾಲಿನ ಸಂಗತಿಯಾಗಿದೆ," ಎಂದು ಹರ್ಭಜನ್ ಸಿಂಗ್ ಹೇಳಿದರು.

"15 ಸದಸ್ಯರ ತಂಡದಲ್ಲಿ ಭಾರತವು ಯುಜ್ವೇಂದ್ರ ಚಹಾಲ್ ಅವರನ್ನು ಆಯ್ಕೆ ಮಾಡಬೇಕಿತ್ತು ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟರು. ಚಹಾಲ್ ಒಬ್ಬ ಅತ್ಯುತ್ತಮ ಮ್ಯಾಚ್ ವಿನ್ನರ್, ಬೇರೆ ತಂಡದಲ್ಲಾಗಿದ್ದರೆ ಅವರು ಆಡುವ 11ರ ಬಳಗದಲ್ಲಿ ಸುಲಭವಾಗಿ ಸ್ಥಾನ ಪಡೆಯುತ್ತಿದ್ದರು," ಎಂದರು.
"ಯುಜ್ವೇಂದ್ರ ಚಹಾಲ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ನಂತರವೂ, ತಂಡದಲ್ಲಿ ಇರಬೇಕಿತ್ತು ಎಂದು ನಾನು ಭಾವಿಸುತ್ತೇನೆ. ನಾನು ಮ್ಯಾನೇಜ್‌ಮೆಂಟ್‌ನ ಭಾಗವಾಗಿದ್ದರೆ, ನಾನು ಖಂಡಿತವಾಗಿಯೂ ಚಹಾಲ್‌ರನ್ನು ತಂಡದಲ್ಲಿ ಆಡಿಸುತ್ತೇನೆ".
"ಏಕೆಂದರೆ ನಾವೆಲ್ಲರೂ ಭಾರತೀಯ ಕ್ರಿಕೆಟ್‌ನ ಪಾಲುದಾರರು ಮತ್ತು ನಾವು ಭಾರತೀಯ ಕ್ರಿಕೆಟ್ ತಂಡವನ್ನು ಬಯಸುತ್ತೇವೆ. ಆದ್ದರಿಂದ, ಅರ್ಶ್‌ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಹಾಲ್ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಬೇಕಿತ್ತು. ಅವರಿಗೆ ಏನು ಮಾಡಬೇಕು ಮತ್ತು ತಮಗೆ ತಿಳಿದಿರುವ ಪರಿಸ್ಥಿತಿಗಳಲ್ಲಿ ಹೇಗೆ ವಿಕೆಟ್‌ಗಳನ್ನು ತೆಗೆಯಬೇಕು ಎಂದು ತಿಳಿದಿದೆ," ಎಂದು ಹರ್ಭಜನ್ ಸಿಂಗ್ ಹೇಳಿದರು.

ವಿಶ್ವಕಪ್ ವೇಳೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ಭಾರತ ತಂಡ ಬಹಳಷ್ಟು ಅವಲಂಬಿತವಾಗಿರುತ್ತದೆ ಮತ್ತು ಅವರ ಬ್ಯಾಟಿಂಗ್‌ನಲ್ಲಿ ಕ್ಲಿಕ್ ಆಗಬೇಕು ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಲಹೆ ನೀಡಿದರು.
"ಶ್ರೇಯಸ್ ಅಯ್ಯರ್ ಗಾಯದ ನಂತರ ಹಿಂತಿರುಗಿದ್ದಾರೆ. ಇಶಾನ್ ಕಿಶನ್ ಉತ್ತಮವಾಗಿ ಆಡುತ್ತಿದ್ದಾರೆ ಮತ್ತು ಕೆಎಲ್ ರಾಹುಲ್ ಗಾಯದಿಂದ ಪುನರಾಗಮನ ಮಾಡಿದ ನಂತರ, ಅವರು ಆಡುತ್ತಾರೋ ಇಲ್ಲವೋ ನಮಗೆ ತಿಳಿದಿಲ್ಲ," ಎಂದರು.
"ರೋಹಿತ್ ಮತ್ತು ಕೊಹ್ಲಿಯಂತೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನವೂ ಪ್ರಮುಖವಾಗಿದೆ. ಅಗ್ರ ಕ್ರಮಾಂಕವನ್ನು ನೋಡಿದರೆ, ಬಲವಾಗಿ ಕಾಣಿಸುತ್ತದೆ. ಆದರೆ ಮಧ್ಯಮ ಕ್ರಮಾಂಕವು ಹಾರ್ದಿಕ್ ಪಾಂಡ್ಯ ಮತ್ತು ಇತರರ ಫಾರ್ಮ್ ಅನ್ನು ಅವಲಂಬಿಸಿರುತ್ತದೆ. ವಿಶ್ವಕಪ್ ಗೆಲ್ಲಲು ಕೆಲವು ಅದ್ಭುತ ರೀತಿಯ ಕ್ರಿಕೆಟ್ ಆಡಲು ಅವರೆಲ್ಲರೂ ಒಟ್ಟಾಗಿ ಬರಬೇಕು ಎಂದು ನಾನು ನಂಬುತ್ತೇನೆ," ಎಂದು ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತಿಳಿಸಿದರು.