ಮಂಗಳವಾರ, ಡಿಸೆಂಬರ್ 19ರಂದು 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ದುಬೈನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಮಿನಿ ಹರಾಜಿನ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ.
ಒಟ್ಟು 333 ಆಟಗಾರರು ಹರಾಜು ಸುತ್ತಿಗೆಗೆ ಹೋಗಲಿದ್ದು, ದೇಶ-ವಿದೇಶದ ಸ್ಟಾರ್ ಆಟಗಾರರು ಕೋಟಿ ಕೋಟಿ ರೂಪಾಯಿ ಬಾಚಿಕೊಳ್ಳಲು ಎದುರು ನೋಡುತ್ತಿದ್ದಾರೆ ಮತ್ತು ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮ ಬಲಿಷ್ಠ ತಂಡವನ್ನು ಕಟ್ಟಿಕೊಳ್ಳುವ ಉನ್ಮಾದದಲ್ಲಿದ್ದಾರೆ.

ಇದೇ ವೇಳೆ ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 2024ರ ಐಪಿಎಲ್ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಖರೀದಿಯಾಗುವ ಆಟಗಾರರನ್ನು ಗುರುತಿಸಿದ್ದಾರೆ.
2024ರ ಐಪಿಎಲ್‌ಗಾಗಿ ನಡೆಯುವ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ವೇಗದ ಜೋಡಿಯಾದ ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ 14 ಕೋಟಿ ರೂಪಾಯಿಗಿಂತ ಹೆಚ್ಚಿನ ಬೆಲೆಯನ್ನು ಪಡೆಯಬಹುದು ಎಂದು ಟೀಮ್ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭವಿಷ್ಯ ನುಡಿದಿದ್ದಾರೆ.

ರಾಜಸ್ಥಾನ ರಾಯಲ್ಸ್ ಸ್ಪಿನ್ನರ್ ಆಗಿರುವ ಆರ್ ಅಶ್ವಿನ್ ಐಪಿಎಲ್ ಹರಾಜಿನ ಬಗ್ಗೆ ವಿವಿಧ ಮುನ್ಸೂಚನೆ ನೀಡಲು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ಬಳಸಿಕೊಂಡಿದ್ದಾರೆ. ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಗೆಲುವಿನ ಬಳಿಕ, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ಇಬ್ಬರೂ ದೊಡ್ಡ ಮೊತ್ತಕ್ಕೆ ಖರೀದಿಯಾಗಬಹುದು ಎಂದು ಅಶ್ವಿನ್ ಭವಿಷ್ಯ ನುಡಿದರು.
ಇದೇ ವೇಳೆ ಪಂಜಾಬ್ ಕಿಂಗ್ಸ್‌ನಿಂದ ಬಿಡುಗಡೆಯಾದ ಆಲ್‌ರೌಂಡರ್ ಶಾರುಖ್ ಖಾನ್‌ಗೆ ಈ ಬಾರಿಯ ಬಿಡ್ಡಿಂಗ್ ವಾರ್‌ನಲ್ಲಿ 10ರಿಂದ 14 ಕೋಟಿ ರೂಪಾಯಿಗಳ ನಡುವಿನ ಮೊತ್ತವನ್ನು ಪಡೆಯುವ ನಿರೀಕ್ಷೆಯನ್ನು ಆರ್ ಅಶ್ವಿನ್ ವ್ಯಕ್ತಪಡಿಸಿದರು.
ಇನ್ನು ನ್ಯೂಜಿಲೆಂಡ್ ಸ್ಟಾರ್ ಆಲ್‌ರೌಂಡರ್ ರಚಿನ್ ರವೀಂದ್ರ ಅವರು ಸುಮಾರು 4ರಿಂದ 7 ಕೋಟಿ ರೂಪಾಯಿ ಬಾಚಿಕೊಳ್ಳಬಹುದು ಎಂದ ಆರ್ ಅಶ್ವಿನ್, ಇದೇ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಮಾಜಿ ವೇಗಿ ಹರ್ಷಲ್ ಪಟೇಲ್ ಅವರು 7ರಿಂದ 10 ಕೋಟಿ ರೂಪಾಯಿಗಳನ್ನು ಪಡೆಯಬಹುದು ಎಂದು ಅಂದಾಜಿಸಿದ್ದಾರೆ.
ದಕ್ಷಿಣ ಅಫ್ರಿಕಾದ ಜೆರಾಲ್ಡ್ ಕೋಯಟ್ಜಿ ಕೂಡ ಹರ್ಷಲ್ ಪಟೇಲ್ ಅವರಂತೆಯೇ 4ರಿಂದ 7 ಕೋಟಿ ರೂಪಾಯಿಗೆ ಒಪ್ಪಂದವಾಗಬಹುದು, ಅಲ್ಲದೆ, ವೆಸ್ಟ್ ಇಂಡೀಸ್‌ನ ರೋವ್‌ಮನ್ ಪೊವೆಲ್ 4ರಿಂದ 7 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ ಎಂದು ಭಾರತೀಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಆಶಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ರವಿಚಂದ್ರನ್ ಅಶ್ವಿನ್ ಅವರ ಒಂದು ಅಚ್ಚರಿಯ ಭವಿಷ್ಯವಾಣಿಯಲ್ಲಿ, 2023ರ ವಿಶ್ವಕಪ್ ಹೀರೋ ಟ್ರಾವಿಸ್ ಹೆಡ್ 4 ಕೋಟಿ ರೂಪಾಯಿಗಿಂತ ಹೆಚ್ಚಿನ ಬೆಲೆಯನ್ನು ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಭಾರತದ ಅನುಭವಿ ವೇಗಿ ಉಮೇಶ್ ಯಾದವ್ ಅವರಿಗೆ ದೊಡ್ಡ ಮೊತ್ತವನ್ನು ನಿರೀಕ್ಷಿಸಲಾಗಿದ್ದು, 4ರಿಂದ 7 ಕೋಟಿ ರೂಪಾಯಿಗೆ ಬಿಡ್ ಆಗಬಹುದು ಎಂದಿದ್ದಾರೆ.
ಇನ್ನು 500 ಟೆಸ್ಟ್ ವಿಕೆಟ್‌ಗಳ ಮೈಲಿಗಲ್ಲು ಸಾಧಿಸಿದ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ನಾಥನ್ ಲಿಯಾನ್ ಅವರನ್ನು ಭಾರತದ ಸಪಿನ್ನರ್ ರವಿಚಂದ್ರನ್ ಅಶ್ವಿನ್ ಶ್ಲಾಘಿಸಿದ್ದಾರೆ.
ಭಾನುವಾರ ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಥನ್ ಲಿಯಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಮಹತ್ವದ ಮೈಲಿಗಲ್ಲನ್ನು ಸಾಧಿಸಿದರು.
ಈ ಮೂಲಕ ನಾಥನ್ ಲಿಯಾನ್ ಈ ಅಪರೂಪದ ಸಾಧನೆಯನ್ನು ತಲುಪಿದ ವಿಶ್ವದ ಎಂಟನೇ ಬೌಲರ್ ಆದರು. ಟೆಸ್ಟ್ ಸ್ವರೂಪದ ಕ್ರಿಕೆಟ್‌ನಲ್ಲಿ ಪ್ರಸಿದ್ಧ ಆಟಗಾರರ ಪಟ್ಟಿಯನ್ನು ಸೇರಿಕೊಂಡರು.
"500 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಇತಿಹಾಸದಲ್ಲಿ ವಿಶ್ವದ 8ನೇ ಬೌಲರ್ ಮತ್ತು 2ನೇ ಆಫ್ ಸ್ಪಿನ್ನರ್," ಎಂದು ನಾಥನ್ ಲಿಯಾನ್‌ನ ಸಾಧನೆಯನ್ನು ಅವರ ಪ್ರತಿಸ್ಪರ್ಧಿ ರವಿಚಂದ್ರನ್ ಅಶ್ವಿನ್ ಎಕ್ಸ್ (ಟ್ವಿಟ್ಟರ್) ನಲ್ಲಿ ಅಭಿನಂದಿಸಿದರು.
ಆರ್ ಅಶ್ವಿನ್ ಕೂಡ ಈ ಪಟ್ಟಿಯಿಂದ ಕೆಲವೇ ವಿಕೆಟ್‌ಗಳ ಅಂತರದಲ್ಲಿದ್ದಾರೆ. 2011ರಲ್ಲಿ ನಾಥನ್ ಲಿಯಾನ್ ಅವರಂತೆಯೇ ಅದೇ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತೀಯ ಸ್ಪಿನ್ನರ್, 94 ಪಂದ್ಯಗಳಲ್ಲಿ 489 ವಿಕೆಟ್‌ಗಳನ್ನು ಹೊಂದಿದ್ದಾರೆ.
ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂಬತ್ತನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರೆ, 36 ವರ್ಷದ ನಾಥನ್ ಲಿಯಾನ್ ಎಂಟನೇ ಸ್ಥಾನದಲ್ಲಿದ್ದಾರೆ.