ಅಭ್ಯಾಸ ಪಂದ್ಯ ಆಡಿದ್ದರೂ ವಿಶ್ವಕಪ್‌ನಲ್ಲಿ ಆಡದ 3 ಭಾರತೀಯರು!: ದುರದೃಷ್ಟವಂತರ ಪಟ್ಟಿಯಲ್ಲಿ ಓರ್ವ ಕನ್ನಡಿಗ

ಟಿ20 ವಿಶ್ವಕಪ್‌ನ ಆಸ್ಟ್ರೇಲಿಯಾದಲ್ಲಿ ಈಗಾಗಲೇ ಆರಂಭವಾಗಿದೆ. ಸದ್ಯ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು ಸೂಪರ್ 12 ಹಂತಕ್ಕೇರಲು ಪೈಪೋಟಿ ನಡೆಸುತ್ತಿದೆ. ಈ ಸಂದರ್ಭದಲ್ಲಿ ಈಗಾಗಲೇ ಸೂಪರ್ 12 ಹಂತದಲ್ಲಿ ಸ್ಥಾನ ಪಡೆದುಕೊಂಡಿರುವ ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದು ಮುಖ್ಯ ಟೂರ್ನಿಗೆ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಮವಾರ ಮೊದಲ ಅಭ್ಯಾಸ ಪಂದ್ಯವನ್ನು ಆಡಿದ್ದು ಇದರಲ್ಲಿ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನ ಈ ಅಭ್ಯಾಸ ಪಂದ್ಯಗಳು ಐಸಿಸಿಯೇ ಆಯೋಜನೆ ಮಾಡುವುದು ಸಾಮಾನ್ಯ. ಟೂರ್ನಿಗೆ ಮುನ್ನ ಪೂರ್ವತಯಾರಿಯ ದೃಷ್ಟಿಯಿಂದ ಈ ಪಂದ್ಯಗಳನ್ನು ಆಯೋಜನೆ ಮಾಡಲಾಗುತ್ತದೆ. ಆದರೆ ಈ ವಿಚಾರವಾಗಿ ಕುತೂಹಲಕಾರಿ ಮಾಹಿತಿಯನ್ನು ಈ ವರದಿಯಲ್ಲಿ ನಿಮ್ಮ ಮುಂದಿಡುತ್ತಿದ್ದೇವೆ. ವಿಶ್ವಕಪ್ ಟೂರ್ನಿಗೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ಆಡಿದ್ದರೂ ವಿಶ್ವಕಪ್ ವೇದಿಕೆಯಲ್ಲಿ ಭಾರತ ತಂಡದ ಪರವಾಗಿ ಆಡುವ ಅವಕಾಶವನ್ನೇ ಪಡೆಯದ ಮೂವರು ಕ್ರಿಕೆಟಿಗರು ಇದ್ದಾರೆ. ಆ ಮೂವರು ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಕನ್ನಡಿಗ ಸ್ಟುವರ್ಟ್ ಬಿನ್ನಿ- 2015ರ ವಿಶ್ವಕಪ್
2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ವಿಶ್ವಕಪ್‌ನ ಆರಂಭಕ್ಕೆ ಮುನ್ನ ಭಾರತ ಆಸ್ಟ್ರೇಲಿಯಾ ವಿರುದ್ಧವೇ ಅಭ್ಯಾಸ ಪಂದ್ಯವನ್ನು ಆಡಿತ್ತು. ಈ ಅಭ್ಯಾಸ ಪಂದ್ಯದ ಮೊದಲ ಓವರ್ ಎಸೆದಿದ್ದು ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ. ಈ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಆದರೆ ಈ ಪಂದ್ಯದಲ್ಲಿ 6 ಓವರ್ ಬೌಲಿಂಗ್ ನಡೆಸಿ 41 ರನ್‌ಗಳಿಗೆ ಒಂದು ವಿಕೆಟ್ ಪಡೆದಿದ್ದ ಸ್ಟುವರ್ಟ್ ಬಿನ್ನಿ ವಿಶ್ವಕಪ್‌ನ ಮುಖ್ಯ ಪಂದ್ಯದಲ್ಲಿ ಆಡುವ ಒಂದೇ ಒಂದು ಅವಕಾಶ ಪಡೆದುಕೊಳ್ಳಲು ಸಾಧ್ಯವಾಗಲೇ ಇಲ್ಲ.

ಅಂಬಾಟಿ ರಾಯುಡು- 2015ರ ವಿಶ್ವಕಪ್
2015ರ ವಿಶ್ವಕಪ್‌ನಲ್ಲಿ ಮತ್ತೋರ್ವ ಟೀಮ್ ಇಂಡಿಯಾದ ಆಟಗಾರ ಅಂಬಾಟಿ ರಾಯುಡು ಕೂಡ ಭಾರತದ ಪರವಾಗಿ ಅಭ್ಯಾಸ ಪಂದ್ಯದಲ್ಲಿ ಮಾತ್ರವೇ ಕಾಣಿಸಿಕೊಂಡ ಆಟಗಾರನಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡಿದ್ದ ಅಂಬಾಟಿ ರಾಯುಡು 42 ಎಸೆತಗಳಲ್ಲಿ 53 ರನ್‌ಗಳನ್ನು ಸಿಡಿಸಿದ್ದರು. ಈ ಪಂದ್ಯದಲ್ಲಿ ನಾಲ್ಕು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸಿದ್ದರು ಅಂಬಾಟಿ ರಾಯುಡು. ಹಾಗಿದ್ದರೂ ವಿಶ್ವಕಪ್ನ ಮುಖ್ಯ ಪಂದ್ಯಾವಳಿಯಲ್ಲಿ ಅಂಬಾಟಿ ರಾಯುಡುಗೆ ಆಡುವ ಅವಕಾಶವೇ ದೊರೆಯಲಿಲ್ಲ.

ಪವನ್ ನೇಗಿ- 2016 ಟಿ20 ವಿಶ್ವಕಪ್
2016ರ ಟಿ20 ವಿಶ್ವಕಪ್‌ಗೆ ಆಯ್ಕೆಯಾದ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡ ಆಟಗಾರರ ಪೈಕಿ ಆಲ್‌ರೌಂಡರ್ ಪವನ್ ನೇಗಿ ಕೂಡ ಒಬ್ಬರು. ಆ ಟೂರ್ನಿಗೂ ಮುನ್ನ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪವನ್ ನೇಗಿ ಆಡುವ ಅವಕಾಶ ಪಡೆದುಕೊಂಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಅಭ್ಯಾಸದ ಪಂದ್ಯದಲ್ಲಿ 15 ರನ್‌ಗಳನ್ನು ನೀಡಿ 2 ವಿಕೆಟ್ ಪಡೆದುಕೊಂಡಿದ್ದರಾದರೂ ಟೂರ್ನಿಯ ಮುಖ್ಯ ಪಂದ್ಯಗಳಲ್ಲಿ ಆಡುವ ಒಂದೇ ಒಂದು ಅವಕಾಶ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications