For Quick Alerts
ALLOW NOTIFICATIONS  
For Daily Alerts
 

WTC ಫೈನಲ್‌ನಲ್ಲಿ ಆಡಿದ್ದ ಈ ಮೂವರು ಮತ್ತೆ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ!!

2013ರ ಬಳಿಕ ಐಸಿಸಿ ಟ್ರೋಪಿ ಗೆಲ್ಲುವ ಟೀಮ್ ಇಂಡಿಯಾ ಕನಸು ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ಮತ್ತೊಮ್ಮೆ ಭಗ್ನವಾಗಿದೆ. ಆಸ್ಟ್ರೇಲಿಯಾ ನೀಡಿದ್ದ 444 ರನ್‌ಗಳ ಬೃಹತ್ ಗುರಿಯನ್ನು ಕೊನೆಯ ಇನ್ನಿಂಗ್ಸ್‌ನಲ್ಲಿ ಬೆನ್ನಟ್ಟಲು ವಿಫಲವಾದ ಟೀಮ್ ಇಂಡಿಯಾ 209 ರನ್‌ಗಳ ಅಂತರದಿಂದ ಸೋಲು ಅನುಭವಿಸುವ ಮೂಲಕ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಸೋಲು ಕಂಡಿತು.

ಟೀಮ್ ಇಂಡಿಯಾದ ಈ ಸೋಲಿನ ಬಳಿಕ ಭಾರತ ಟೆಸ್ಟ್ ತಂಡದ ಬಗ್ಗೆ ಸಾಕಷ್ಟು ವಿಮರ್ಶೆಗಳು ನಡೆಯುತ್ತಿದೆ. ತಂಡದ ನಾಯಕತ್ವದಿಂದ ಹಿಡಿದು ಹಲವು ಸ್ಥಾನಗಳ ಬಗ್ಗೆ ಪರಾಮರ್ಶೆಗಳು ನಡೆಯುತ್ತಿದ್ದು ಕೆಲ ಆಟಗಾರರನ್ನು ತಂಡದಿಂದ ಹೊರಗಿಡಬೇಕು ಎಂಬ ಅಭಿಪ್ರಾಯಗಳು ಜೋರಾಗಿದೆ. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡು ವೈಫಲ್ಯ ಕಂಡ ಕೆಲ ಆಟಗಾರರು ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿದೆ. ಟೀಮ್ ಇಂಡಿಯಾದ ಟೆಸ್ಟ್ ತಂಡದಿಂದ ಹೊರಬೀಳಬಹುದಾದ ಮೂವರು ಆಟಗಾರರ ಮಾಹಿತಿ ಇಲ್ಲಿದೆ.

These 3 Indian test players may lose their place in Team India for WTC Final defeat

ಅನುಭವಿ ಆಟಗಾರ ಚೇತೇಶ್ವರ್ ಪೂಜಾರ

ಸುದೀರ್ಘ ಕಾಲದಿಂದ ಟೀಮ್ ಇಂಡಿಯಾದ ಮೂರನೇ ಕ್ರಮಾಂಕದ ಆಟಗಾರನಾಗಿ ಕಣಕ್ಕಿಳಿಯುತ್ತಿರುವ ಅನುಭವಿ ಬ್ಯಾಟರ್ ಚೇತೇಶ್ವರ್ ಪೂಜಾರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನೀರಸ ಪ್ರದರ್ಶನ ನೀಡಿರುವ ಕಾರಣದಿಂದಾಗಿ ಮತ್ತೆ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ. ಟೆಸ್ಟ್‌ಮಲ್ಲಿ ಸತತ ವೈಫಲ್ಯ ಅನುಭವಿಸಿದ ಕಾರಣಕ್ಕೆ ಈಗಾಗಲೇ ಪೂಜಾರ ಒಂದು ಬಾರಿ ತಂಡದಿಂದ ಹೊರಬಿದ್ದಿದ್ದರು. ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಪೂಜಾರ ಭಾರತ ತಂಡದಿಂದ ಹೊರಬಿದ್ದಿದ್ದರು.

ಆದರೆ ಅದಾದ ಬಳಿಕ ಕೌಂಟಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು. ಆದರೆ ಅದಾದ ಬಳಿಕವೂ ಪೂಜಾರ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಅದರಲ್ಲೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಪೂಜಾರ ನೀಡಿದ ಪ್ರದರ್ಶನ ಕ್ರಿಕೆಟ್ ಪಂಡಿತರ ಗಮನಸೆಳೆದಿಲ್ಲ. ಹಾಗಾಗಿ ಪೂಜಾರ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ.

ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್

ರಿಷಭ್ ಪಂತ್ ಗಾಯಗೊಂಡಿದ್ದ ಕಾರಣ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡ ಕೆಎಸ್ ಭರತ್‌ಗೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಸಾಕಷ್ಟು ಅವಕಾಶ ದೊರೆತಿದೆ. ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರವಾಸ ಕೈಗೊಂಡಾಗಲೂ ಭರತ್‌ಗೆ ಅವಕಾಶ ದೊರೆತಿತ್ತು. ಆದರೆ ಆಸಿಸ್ ಸರಣಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಎರಡರಲ್ಲಿಯೂ ಕೆಎಸ್ ಭರತ್ ಗಮನಾರ್ಹ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಈವರೆಗೆ ಆಡಿರುವ 8 ಇನ್ನಿಂಗ್ಸ್‌ಗಳಲ್ಲಿ ಭರತ್ 129 ರನ್‌ಗಳನ್ನು ಮಾತ್ರವೇ ಗಳಿಸಿದ್ದು 18.4ರಷ್ಟು ಕನಿಷ್ಠ ಸರಾಸರಿ ಹೊಂದಿದ್ದಾರೆ. ಹೀಗಾಗಿ ಟೆಸ್ಟ್ ಮಾದರಿಯಲ್ಲಿ ಭರತ್ ಹೊರತುಪಡಿಸಿ ಬೇರೆ ಆಯ್ಕೆಯತ್ತ ಮುಖಮಾಡುವುದು ಬಿಸಿಸಿಐಗೆ ಅನಿವಾರ್ಯವಾಗಿದೆ.

ಅನುಭವಿ ವೇಗಿ ಉಮೇಶ್ ಯಾದವ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಫಂದ್ಯದಲ್ಲಿ ಆಡುವ ಮೂಲಕ ಉಮೇಶ್ ಯಾದವ್ 57ನೇ ಟೆಸ್ಟ್ ಪಂದ್ಯವನ್ನು ಆಡಿದ್ದರೆ. ಆದರೆ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಪಂದ್ಯದುದ್ದಕ್ಕೂ ಉಮೇಶ್ ಯಾದವ್ ನೀರಸ ಬೌಲಿಂಗ್ ಪ್ರದರ್ಶಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್ ಪಡೆದರಾದರೂ ಅದು ಬಹಳ ತಡವಾಗಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಉಮೇಶ್ ಯಾದವ್ ಪ್ರದರ್ಶನ ಸದ್ಯ ಸಾಕಷ್ಟು ಏರಿಳಿತ ಕಾಣುತ್ತಿದೆ. ಅದರಲ್ಲೂ ವಿದೇಶಿ ನೆಲದಲ್ಲಿ ಉಮೇಶ್ ಯಾದವ್ ಅತ್ಯಂತ ಕಳಪೆಯಾಗಿ ಕಾಣಿಸುತ್ತಿದ್ದಾರೆ. ಹೀಗಾಗಿ ಮುಂದಿನ ಟೆಸ್ಟ್ ಸರಣಿಯಿಂದ ಉಮೇಶ್ ಯಾದವ್ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವುದು ಅನುಮಾನ.

Story first published: Tuesday, June 13, 2023, 18:30 [IST]
Other articles published on Jun 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+