ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲದೇ ಇದ್ದರೆ ನಾಯಕತ್ವ ಕಳೆದುಕೊಳ್ಳಲಿದ್ದಾರೆ ಈ 3 ತಂಡಗಳ ನಾಯಕರು!

ಇತ್ತೀಚೆಗಷ್ಟೇ ಈ ವರ್ಷದ ಬಹುನಿರೀಕ್ಷಿತ ಟಿ ಟ್ವೆಂಟಿ ಕ್ರಿಕೆಟ್ ಟೂರ್ನಿಗಳಲ್ಲೊಂದಾದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯಗೊಂಡಿದ್ದು, ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಆರಂಭಗೊಂಡಿವೆ. ಹೌದು, ಐಪಿಎಲ್ ಟೂರ್ನಿಯಲ್ಲಿ ವಿವಿಧ ದೇಶಗಳ ಪ್ರಮುಖ ಕ್ರಿಕೆಟಿಗರು ಪಾಲ್ಗೊಂಡಿದ್ದ ಕಾರಣ ಐಪಿಎಲ್ ಟೂರ್ನಿ ನಡೆಯುವ ವೇಳೆ ಹೆಚ್ಚು ಅಂತರರಾಷ್ಟ್ರೀಯ ಸರಣಿಗಳು ಆಯೋಜನೆಯಾಗಿರಲಿಲ್ಲ. ಇದೀಗ ಐಪಿಎಲ್ ಮುಕ್ತಾಯವಾದ ಬೆನ್ನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಗರಿಗೆದರಿದ್ದು, ಹೆಚ್ಚು ಟಿಟ್ವೆಂಟಿ ಸರಣಿಗಳು ಆಯೋಜನೆಯಾಗಿವೆ.
ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಪ್ರತಿಷ್ಠಿತ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುತ್ತಿರುವ ಕಾರಣ ಟ್ರೋಫಿಯ ಮೇಲೆ ಹಲವಾರು ತಂಡಗಳು ಕಣ್ಣಿಟ್ಟಿದ್ದು, ಇದಕ್ಕೂ ಮುನ್ನ ಆಯೋಜನೆಯಾಗಿರುವ ಟಿ ಟ್ವೆಂಟಿ ಸರಣಿಗಳಲ್ಲಿ ಉತ್ತಮ ಆಟವನ್ನು ಆಡುವುದರ ಮೂಲಕ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸಿಕೊಳ್ಳುವ ಯೋಜನೆಯಲ್ಲಿವೆ. ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಈ ಬಾರಿಯೂ ಸಹ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವತ್ತ ಕಣ್ಣಿಟ್ಟಿದ್ದರೆ, ಇತರೆ ಬಲಿಷ್ಠ ತಂಡಗಳಾದ ಟೀಂ ಇಂಡಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳೂ ಸಹ ಟ್ರೋಫಿ ಎತ್ತಿ ಹಿಡಿಯುವತ್ತ ಚಿತ್ತ ನೆಟ್ಟಿವೆ.
ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮದಿದ್ದರೆ ಕೆಲ ತಂಡಗಳ ನಾಯಕರು ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು, ಈ ಕೆಳಕಂಡ 3 ತಂಡಗಳ ನಾಯಕರು ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.

1. ಇಂಗ್ಲೆಂಡ್
ಇಂಗ್ಲೆಂಡ್ ಬಲಿಷ್ಠ ಟಿ ಟ್ವೆಂಟಿ ತಂಡವನ್ನು ಹೊಂದಿದ್ದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಇಯಾನ್ ಮಾರ್ಗನ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಆದರೆ ಇಯಾನ್ ಮಾರ್ಗನ್ ಇತ್ತೀಚಿನ ಹಲವು ಪಂದ್ಯಗಳಲ್ಲಿ ವಿಫಲರಾಗಿದ್ದು, ಫಾರ್ಮ್ ಕಳೆದುಕೊಂಡಿದ್ದಾರೆ. ಅತ್ತ ಇದೇ ತಂಡದ ಜೋಸ್ ಬಟ್ಲರ್ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚುತ್ತಿದ್ದು ಮುಂದಿನ ನಾಯಕನಾಗುವ ಅರ್ಹತೆಗಳನ್ನು ಹೊಂದಿದ್ದಾರೆ. ಹೀಗಾಗಿ ಒಂದುವೇಳೆ ಇಯಾನ್ ಮಾರ್ಗನ್ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಚಾಂಪಿಯನ್ ಆಗಿ ಹೊರಹೊಮ್ಮುವಂತೆ ಮಾಡುವಲ್ಲಿ ವಿಫಲರಾದರೆ ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

2. ಆಸ್ಟ್ರೇಲಿಯಾ
2021ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯ ಚಾಂಪಿಯನ್ ಆಗಿ ಹೊರಹೊಮ್ಮದೇ ಇದ್ದಿದ್ದರೆ, ಇಷ್ಟೊತ್ತಿಗಾಗಲೇ ಆ್ಯರನ್ ಫಿಂಚ್ ನಾಯಕತ್ವವನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಆ್ಯರನ್ ಫಿಂಚ್ ನಾಯಕತ್ವ ಉತ್ತಮವಾಗಿದ್ದು, ಪ್ರದರ್ಶನದ ವಿಚಾರದಲ್ಲಿ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಿದೆ. ಒಂದುವೇಳೆ ಆ್ಯರನ್ ಫಿಂಚ್ ಕಳೆದ ಬಾರಿಯ ರೀತಿ ಈ ಬಾರಿ ತಂಡವನ್ನು ಟ್ರೋಫಿ ಗೆಲ್ಲಿಸುವಲ್ಲಿ ಸಫಲರಾಗದೇ ಇದ್ದರೆ ತಂಡದ ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಪ್ಯಾಟ್ ಕಮಿನ್ಸ್ ನೂತನ ನಾಯಕನಾಗುವ ಸಂಭವ ಇದೆ.

3. ಟೀಮ್ ಇಂಡಿಯಾ
ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಕ್ತಾಯವಾದ ನಂತರ ವಿರಾಟ್ ಕೊಹ್ಲಿ ನಾಯಕ ಸ್ಥಾನವನ್ನು ಕಳೆದುಕೊಂಡರು. ನಂತರ ಟೀಮ್ ಇಂಡಿಯಾದ ಸಾರಥ್ಯವನ್ನು ವಹಿಸಿಕೊಂಡಿರುವ ರೋಹಿತ್ ಶರ್ಮಾಗೆ ನೀಡಲಾಗಿರುವ ಸವಾಲುಗಳಲ್ಲಿ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲುವುದು ಕೂಡ ಒಂದು. ಒಂದುವೇಳೆ ರೋಹಿತ್ ಶರ್ಮಾ ಈ ಸವಾಲನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದರೆ ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು. ರೋಹಿತ್ ಶರ್ಮಾ ನಾಯಕತ್ವದಿಂದ ಕೆಳಗಿಳಿದ ನಂತರ ಕೆಎಲ್ ರಾಹುಲ್ ಅಥವಾ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಟಿ ಟ್ವೆಂಟಿ ನಾಯಕರಾಗುವ ಸಾಧ್ಯತೆಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications