ಐಪಿಎಲ್‌ನಲ್ಲಿ ಟ್ರೇಡ್ ಆದ ಬಳಿಕ ಪಾತಾಳ ಕಂಡ ಆಟಗಾರರಿವರು!

ಐಪಿಎಲ್ ಟೂರ್ನಿಯ 16ನೇ ಆವೃತ್ತಿಗೂ ಮುನ್ನ ಹರಾಜು ಪ್ರಕ್ರಿಯೆ ನಡೆಯಲಿದ್ದು ಅದಕ್ಕೂ ಮುನ್ನ ಆಟಗಾರರ ರೀಟೈನ್, ಬಿಡುಗಡೆ ಹಾಗೂ ಟ್ರೇಡ್ ಪ್ರಕ್ರಿಯೆಗಳು ನಡೆಯುತ್ತಿದೆ. ಟ್ರೇಡ್ ಮಾಡುವ ಮೂಲಕ ಆಟಗಾರರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲಿಷ್ಠಗೊಳಿಸುತ್ತಿದೆ.
ಐಪಿಎಲ್ ಇತಿಹಾಸದಲ್ಲಿ ಟ್ರೇಡ್ ಮಾಡಿಕೊಳ್ಳುವ ಮೂಲಕ ಅತಿ ಹೆಚ್ಚು ಯಶಸ್ಸು ಸಾಧಿಸಿದ ತಂಡ ಎಂದರೆ ಮುಂಬೈ ಇಂಡಿಯನ್ಸ್. ಕೆಲ ಅತ್ಯುತ್ತಮ ಆಟಗಾರರನ್ನು ಮುಂಬೈ ಇಂಡಿಯನ್ಸ್ ತಂಡ ಟ್ರೇಡ್ ಮೂಲಕ ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಈ ಹಿಂದೆ ಯಶಸ್ವಿಯಾಗಿದ್ದು ಹರಾಜು ಪ್ರಕ್ರಿಯೆಗೂ ಮುನ್ನವೇ ಇತರ ತಂಡಗಳ ಪೈಪೋಟಿಯನ್ನು ಎದುರಿಸದೆ ತಂಡವನ್ನು ಬಲಿಷ್ಠಗೊಳಿಸುವ ಪ್ರಯತ್ನದಲ್ಲಿ ಉತ್ತಮ ಯಶಸ್ಸು ಕಂಡಿದೆ.
ಐಪಿಎಲ್‌ನಲ್ಲಿ ಹರಾಜಿಗೆ ಮುನ್ನ ಹಾಗೂ ಹರಾಜಿನ ಬಳಿಕವೂ ಟ್ರೇಡಿಂಗ್ ಪ್ರಕ್ರಿಯೆಗೆ ಅವಕಾಶವಿದೆ. ತಂಡದ ಸಂಯೋಜನೆಯನ್ನು ಉತ್ತಮಗೊಳಿಸಲು ತಂಡಗಳು ಆಟಗಾರರನ್ನು ಒಂದು ತಂಡದಿಂದ ಟ್ರೇಡ್ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಕೆಲ ಆಟಗಾರರು ಹೆಚ್ಚಿನ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆಯುವ ಮೂಲಕ ಅದೃಷ್ಟವನ್ನು ಗಳಿಸಿದರೆ ಕೆಲ ಆಟಗಾರರಿಗೆ ಈ ಟ್ರೇಡ್ ಪ್ರಕ್ರಿಯೆ ದುರದೃಷ್ಟವಾಗಿ ಪರಿಣಮಿಸಿದ ಉದಾಹರಣೆಗಳಿದೆ.
ಈ ವರದಿಯಲ್ಲಿ ಟ್ರೇಡ್ ಆದ ಬಳಿಕ ದುರದೃಷ್ಟದಿಂದ ಹಿನ್ನಡೆ ಅನುಭವಿಸಿದ ನಾಲ್ವರು ಆಟಗಾರರ ಬಗ್ಗೆ ಕುತೂಹಲಕಾರಿ ಮಾಹಿತಿಯಿದೆ. ಮುಂದೆ ಓದಿ..

ಅಲಿ ಮುರ್ತಾಜಾ, ಐಪಿಎಲ್ 2012
ಅಲಿ ಮುರ್ತಾಜಾ ಮುಂಬೈ ಇಂಡಿಯನ್ಸ್ ತಂಡದಲ್ಲಿ ಎಡಗೈ ಸ್ಪಿನ್ನರ್ ಆಗಿ ಆರಂಭದಲ್ಲಿಯೇ ಮಿಂಚಿದ್ದ ಆಟಗಾರ. ಆದರೆ 2012 ಐಪಿಎಲ್ ಆವೃತ್ತಿಗೂ ಮುನ್ನ ಪುಣೆ ವಾರಿಯರ್ಸ್ ತಂಡಕ್ಕೆ ಟ್ರೇಡ್ ಆಗಿದ್ದರು. ಆದರೆ ಪುಣೆ ವಾರಿಯರ್ಸ್ ತಂಡದಲ್ಲಿ ಮಿಂಚಲು ವಿಫಲವಾದ ಅಲಿ ಮುರ್ತಾಜ ಬಳಿಕ ಅವಕಾಶ ಗಿಟ್ಟಿಸಿಕೊಳ್ಳಲು ವಿಫಲವಾದರು.

ಮನ್ವಿಂದರ್ ಬಿಸ್ಲಾ, 2015
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಮಿಂಚಿದ್ದ ಮನ್ವಿಂದರ್ ಬಿಸ್ಲಾ ಮ್ಯಾಚ್ ವಿನ್ನರ್ ಆಗಿಯೂ ಖ್ಯಾತಿಗಳಿಸಿದ್ದರು. ಆದರೆ 2015ರ ಐಪಿಎಲ್ ಆವೃತ್ತಿಗೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮನ್ವಿಂದರ್ ಬಿಸ್ಲಾ ಅವರನ್ನು ಟ್ರೇಡ್ ಮಾಡಿಕೊಳ್ಳುವ ಮೂಲಕ ವಶಕ್ಕೆ ಪಡೆಯಿತು. ಆದರೆ ಆರ್‌ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರ ಪಡೆಯೇ ಇದ್ದ ಕಾರಣ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಮನ್ವಿಂದರ್ ಬಿಸ್ಲಾ ಕಷ್ಟಪಡಬೇಕಾಯಿತು.

ಮಯಾಂಕ್ ಮಾರ್ಕಾಂಡೆ, 2020
ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಯಾಂಕ್ ಮಾರ್ಕಾಂಡೆ ಮ್ಯಾಚ್ ವಿನ್ನರ್ ಆಗಿ ಬೆಳೆಯುತ್ತಿದ್ದ ಪ್ರತಿಭಾವಂತ ಆಟಗಾರ. ಆದರೆ ರಾಹುಲ್ ಚಾಹರ್‌ಗೆ ಸ್ಥಾನ ಬಿಟ್ಟುಕೊಡಬೇಕಾದ ಕಾರಣ ಆಡುವ ಬಳಗದಲ್ಲಿ ಮಯಾಂಕ್‌ಗೆ ಹೆಚ್ಚಿನ ಅವಕಾಶಗಳು ದೊರೆಯಲಿಲ್ಲ. ಬಳಿಕ ಮುಂಬೈ ಇಂಡಿಯನ್ಸ್ ತಂಡ ಮಯಾಂಕ್ ಮಾರ್ಕಂಡೆ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಟ್ರೇಡ್ ಮಾಡಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಮಯಾಂಕ್ ಮಾರ್ಕಂಡೆ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಟ್ರೇಡ್ ಮಾಡಿಬಿಟ್ಟಿತ್ತು. ಈ ಬೆಳವಣಿಗೆ ಮಯಾಂಕ್ ಮಾರ್ಕಂಡೆ ಮೇಲೆ ದೊಡ್ಡ ಪರಿಣಾಮ ಬೀರಿತ್ತು.

ಅಜಿಂಕ್ಯಾ ರಹಾನೆ, 2022
ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಟಗಾರನಾಗಿದ್ದ ಅಜಿಂಕ್ಯಾ ರಹಾನೆ 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಟ್ರೇಡ್ ಆದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಟ್ರೇಡ್ ಆದ ಬಳಿಕ ಅಜಿಂಕ್ಯಾ ರಹಾನೆಗೆ ಹೆಚ್ಚಿನ ಅವಕಾಶಗಳು ದೊರೆಯಲಿಲ್ಲ. ಬಹುತೇಕ ಪಂದ್ಯಗಳಲ್ಲಿ ಅವರು ಬೆಂಚ್ ಕಾಯುವಂತಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications