ರಣಜಿ ಟ್ರೋಫಿಯಲ್ಲಿ ಆರ್ಭಟ: ಮತ್ತೆ ಭಾರತ ತಂಡದ ಕದತಟ್ಟುತ್ತಿದ್ದಾರೆ ಸ್ಥಾನ ಕಳೆದುಕೊಂಡ 5 ಆಟಗಾರರು!

2023ನೇ ಸಾಲಿನ ರಣಜಿ ಟೂರ್ನಿ ಮುಕ್ತಾಯವಾಗಿದ್ದು ಸೌರಾಷ್ಟ್ರ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಬಂಗಾಳ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಸೌರಾಷ್ಟ್ರ 9 ವಿಕೆಟ್‌ಗಳ ಅಂತರದ ಅಮೋಘ ಗೆಲುವು ಸಾಧಿಸಿದೆ. ನಾಯಕ ಜಯ್‌ದೇವ್ ಉನಾದ್ಕಟ್ ಮುಂದೆ ನಿಂತು ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.
ಈ ಬಾರಿಯ ಆವೃತ್ತಿಯಲ್ಲಿ 900ಕ್ಕೂ ಅಧಿಕ ರನ್‌ಗಳಿಸಿದ ಅರ್ಪಿತ್ ವಾಸುದೇವ ಸೌರಾಷ್ಟ್ರ ತಂಡದ ಯಶಸ್ಸಿಗೆ ಪ್ರಮುಖ ಕಾರಣವಾದ ಆಟಗಾರನಾಗಿದ್ದು ಸರಣಿ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಆದರೆ ಈ ಬಾರಿಯ ರಣಜಿ ಟೂರ್ನಿಯಲ್ಲಿ ಟೀಮ್ ಇಂಡಿಯಾದಿಂದ ಹೊರಬಿದ್ದ ಕೆಲ ಪ್ರಮುಖ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದು ಮತ್ತೆ ಭಾರತ ತಂಡದ ಕದತಟ್ಟುತ್ತಿದ್ದಾರೆ. ಅಂಥಾ ಐವರು ಆಟಗಾರರ ಮಾಹಿತಿ ಇಲ್ಲಿದೆ. ಈ ಐವರು ಆಟಗಾರರ ಪೈಕಿ ಓರ್ವ ಕನ್ನಡಿಗ ಕೂಡ ಇದ್ದಾರೆ ಎಂಬುದು ಗಮನಾರ್ಹ.

ಕನ್ನಡಿಗ ಮಯಾಂಕ್ ಅಗರ್ವಾಲ್
ಕನ್ನಡಿಗ ಮಯಾಂಕ್ ಅಗರ್ವಾಲ್ 2023ರ ರಣಜಿ ಆವೃತ್ತಿಯಲ್ಲಿ ಅತೀ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಕರ್ನಾಟಕ ತಂಡವನ್ನು ನಾಯಕನಾಗಿ ಸೆಮಿಫೈನಲ್ ವರೆಗೆ ಮುನ್ನಡೆಸಿದ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್‌ನಲ್ಲಿಯೂ ರನ್ ಮಳೆ ಹರಿಸಿದ್ದಾರೆ. ಮಯಾಂಕ್ ಅಗರ್ವಾಲ್ ಆಡಿದ 9 ಪಂದ್ಯಗಳಲ್ಲಿ 82.5ರ ಸರಾಸರಿಯಲ್ಲಿ 990 ರನ್‌ಗಳಿಸಿದ್ದಾರೆ. ಈ ಮೂಲಕ ಬಹಳ ಕಾಲದಿಂದ ಭಾರತ ತಂಡದಿಂದ ಹೊರಗುಳಿದಿರುವ ಮಯಾಂಕ್ ಮತ್ತೆ ಭಾರತ ಟೆಸ್ಟ್ ತಂಡದ ಕದತಟ್ಟಲು ಆರಂಭಿಸಿದ್ದಾರೆ.

ಅನುಭವಿ ಅಜಿಂಕ್ಯಾ ರಹಾನೆ
ಭಾರತದ ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಈ ಬಾರಿ ರಣಜಿಯಲ್ಲಿ ಮುಂಬೈ ಪರವಾಗಿ ಅದ್ಭುತ ಪ್ರದರ್ಶನ ನಿಡಿದ್ದು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆಡಿದ 7 ಪಂದ್ಯಗಳಲ್ಲಿ ರಹಾನೆ 634 ರನ್‌ಗಳಿಸಿ ಮಿಂಚಿದ್ದಾರೆ. ಸದ್ಯ ಭಾರತ ತಂಡ ಸಮರ್ಥ ಉಪನಾಯಕನ ಹುಡುಕಾಟದಲ್ಲಿದ್ದು ಆ ಸ್ಥಾನಕ್ಕೂ ರಹಾನೆ ಸೂಕ್ತ ಆಟಗಾರ ಎನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಆರಂಭಿಕ ಆಟಗಾರ ಪ್ರಿಯಾಂಕ್ ಪಾಂಚಾಲ್
ಪ್ರಿಯಾಂಕ್ ಪಾಂಚಾಲ್ ಭಾರತ ತಂಡದಲ್ಲಿ ಬ್ಯಾಕ್‌ಅಪ್ ಆರಂಬಿಕ ಆಟಗಾರನಾಗಿ ಕೆಲ ಸರಣಿಗಳಲ್ಲಿ ಪ್ರವಾಸ ಕೈಗೊಂಡಿದ್ದರು. ಆದರೆ ಭಾರತದ ಆಡುವ ಬಳಗದಲ್ಲಿ ಅವಕಾಶ ಪಡೆಯಲು ವಿಫಲವಾಗಿದ್ದಾರೆ. ಆದರೆ ಇತ್ತೀಚೆಗೆ ಮುಕ್ತಾಯವಾಗಿರುವ ರಣಜಿ ಟೂರ್ನಿಯಲ್ಲಿ ಪಾಂಚಾಲ್ ಅದ್ಭುತ ಪ್ರದರ್ಶನ ನೀಡಿದ್ದು ಗುಜರಾತ್ ಪರವಾಗಿ ಐದು ಪಂದ್ಯಗಳಲ್ಲಿ 583 ರನ್‌ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 97.17.

ಸ್ಪಿನ್ನರ್ ಶಹ್ಬಾಜ್ ನದೀಮ್
ಎಡಗೈ ಸ್ಪಿನ್ನರ್ ಶಹ್ಬಾಜ್ ನದೀಮ್ ಈ ವರ್ಷ ಝಾರ್ಖಂಡ್ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿದ ಆಟಗಾರ. ಬೌಲಿಂಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಇವರು ಆಡಿದ 8 ಪಂದ್ಯಗಳಲ್ಲಿ 42 ವಿಕೆಟ್ ಸಂಪಾದಿಸಿದ್ದಾರೆ. ನಾಲ್ಕು ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದು ಮಿಂಚಿದ್ದಾರೆ ಶಹ್ಬಾಜ್ ನದೀಮ್.

ಯುವ ಆಟಗಾರ ಪೃಥ್ವಿ ಶಾ
ಮುಂಬೈನ ಯುವ ಆಟಗಾರ ಪೃಥ್ವಿ ಶಾ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದಾರೆ.ಇತ್ತೀಚೆಗೆ ವೈಟ್‌ಬಾಲ್ ಮಾದರಿಗೆ ಕಮ್‌ಬ್ಯಾಕ್ ಮಾಡಿರುವ ಶಾ ಟೆಸ್ಟ್ ತಂಡದಲಿಯೂ ಸ್ಥಾನ ಗಿಟ್ಟಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಈ ವರ್ಷದ ರಣಜಿ ಟೂರ್ನಿಯಲ್ಲಿ ಅಸ್ಸಾಮ್ ವಿರುದ್ಧದ ಪಂದ್ಯದಲ್ಲಿ ಪೃಥ್ವಿ ಶಾ ಭರ್ಜರಿ 379 ರನ್‌ಗಳನ್ನು ಗಳಿಸಿದ್ದು 49 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ದರು. ಕಳೆದ ಎರಡ್ಮೂರು ರಣಜಿ ಆವೃತ್ತಿಯಲ್ಲಿ ಶಾ ಸ್ಥಿರವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications