2010ರ ಅಂಡರ್ 19 ವಿಶ್ವಕಪ್‌ನಲ್ಲಿ ಕೆಎಲ್ ರಾಹುಲ್ ಜತೆ ಕಣಕ್ಕಿಳಿದಿದ್ದ ಐವರು ಫೇಮಸ್ ಕ್ರಿಕೆಟಿಗರಿವರು

ಕೆಎಲ್ ರಾಹುಲ್, ತನ್ನ ಉತ್ತಮ ಪ್ರದರ್ಶನದ ಮೂಲಕ ಕ್ರಿಕೆಟ್ ಅಭಿಮಾನಿಗಳು ಹಾಗೂ ಆಯ್ಕೆಗಾರರ ಮನಸ್ಸನ್ನು ಗೆದ್ದು ಇಂದು ಸ್ಟಾರ್ ಆಟಗಾರನಾಗಿ ಮಿಂಚುತ್ತಿರುವ ಪ್ರತಿಭೆ. ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿರುವ ಹಲವು ಆಟಗಾರರಂತೆ ಕೆಎಲ್ ರಾಹುಲ್ ಕೂಡ ಈ ಹಿಂದೆ ಭಾರತ ಅಂಡರ್ 19 ತಂಡದ ಭಾಗವಾಗಿದ್ದರು.
2010ರಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾದಲ್ಲಿ ಕೆಎಲ್ ರಾಹುಲ್ ಕೂಡ ಭಾಗಿಯಾಗಿದ್ದರು. ಆದರೆ ಈ ತಂಡ 2008ರಲ್ಲಿ ವಿರಾಟ್ ಕೊಹ್ಲಿ ಮುನ್ನಡೆಸಿದ್ದ ಭಾರತ ಅಂಡರ್ 19 ತಂಡದ ಹಾಗೆ ಯಶಸ್ಸನ್ನು ಸಾಧಿಸದ ಕಾರಣ ಹೆಚ್ಚೇನೂ ಪ್ರಸಿದ್ಧಿಯನ್ನು ಪಡೆಯಲಿಲ್ಲ. ಈ ತಂಡವನ್ನು ನಾಯಕನಾಗಿ ಅಶೋಕ್ ಮೆನಾರಿಯ ಎಂಬ ಆಟಗಾರ ಮುನ್ನಡೆಸಿದ್ದರು ಹಾಗೂ ಮನ್ ದೀಪ್ ಸಿಂಗ್ ಉಪನಾಯಕನಾಗಿ ತಂಡದಲ್ಲಿದ್ದರು.
ಇನ್ನು ಓರ್ವ ಸಾಮಾನ್ಯ ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಕೆಎಲ್ ರಾಹುಲ್ ಜತೆ ಅಂದು ಕಣಕ್ಕಿಳಿದಿದ್ದ ಐವರು ಆಟಗಾರರು ಇಂದಿಗೂ ಸಹ ಅಂತರರಾಷ್ಟ್ರೀಯ, ದೇಸಿ ಮತ್ತು ಐಪಿಎಲ್ ಟೂರ್ನಿಗಳಲ್ಲಿ ಮಿಂಚುತ್ತಿದ್ದಾರೆ. ಆ 5 ಆಟಗಾರರ ಪಟ್ಟಿ ಮುಂದೆ ಓದಿ..

1. ಮಯಾಂಕ್ ಅಗರ್ವಾಲ್
2010ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತೋರ್ವ ಕನ್ನಡಿಗ ಕೆಎಲ್ ರಾಹುಲ್ ಸಹ ಆಟಗಾರನಾಗಿದ್ದರು. ಕೇವಲ ಅಂಡರ್ 19 ತಂಡ ಮಾತ್ರವಲ್ಲದೇ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಒಟ್ಟಿಗೆ ಟೀಮ್ ಇಂಡಿಯಾ ಮತ್ತು ಐಪಿಎಲ್ ತಂಡಗಳನ್ನೂ ಪ್ರತಿನಿಧಿಸಿದ್ದಾರೆ.

2. ಹರ್ಷಲ್ ಪಟೇಲ್
ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ವಿಜೇತನಾಗಿ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದಿದ್ದ ಹರ್ಷಲ್ ಪಟೇಲ್ ಕೂಡ ಕೆಎಲ್ ರಾಹುಲ್ ಜತೆ 2010ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಸದ್ಯ ಹರ್ಷಲ್ ಪಟೇಲ್ ಐಪಿಎಲ್ ಟೂರ್ನಿಯಲ್ಲಿ ಮಿಂಚಿ ಟೀಮ್ ಇಂಡಿಯಾ ಸದಸ್ಯನಾಗಿಯೂ ತಮ್ಮ ಕ್ರಿಕೆಟ್ ಪಯಣ ಮುಂದುವರೆಸಿದ್ದಾರೆ.

3. ಮನ್ ದೀಪ್ ಸಿಂಗ್
ಮನ್ ದೀಪ್ ಸಿಂಗ್ ಕೂಡ ಕೆ ಎಲ್ ರಾಹುಲ್ ಜತೆ 2010ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಆಟಗಾರ. 2016ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದ ಈತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಕೆಎಲ್ ರಾಹುಲ್ ಜತೆ ಕಣಕ್ಕಿಳಿದಿದ್ದರು. ನಂತರದ ದಿನಗಳಲ್ಲಿ ಹೆಚ್ಚಿನ ಅವಕಾಶ ಪಡೆಯದ ಹಾಗೂ ಫಾರ್ಮ್ ಕಳೆದುಕೊಂಡ ಮನದೀಪ್ ಸಿಂಗ್ ಸದ್ಯ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದಾರೆ.

4. ಜಯದೇವ್ ಉನಾದ್ಕತ್
ಜಹೀರ್ ಖಾನ್ ಅಂತರರಾಷ್ಟ್ರೀಯ ನಿವೃತ್ತಿ ಹೊಂದುವ ಸನಿಹದಲ್ಲಿ ಟೀಮ್ ಇಂಡಿಯಾ ಎಡಗೈ ವೇಗಿ ಜಯದೇವ್ ಉನಾದ್ಕತ್ ಅವರನ್ನೂ ಬದಲಿ ಆಟಗಾರನನ್ನಾಗಿ ರೂಪಿಸಲು ಪ್ರಯತ್ನಿಸಿತ್ತು. ಆದರೆ ಆ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಜಯದೇವ್ ಉನಾದ್ಕತ್ ನಂತರ ರಣಜಿ ಟೂರ್ನಿಯಲ್ಲಿ ಮಿಂಚಿದರು, ಆದರೆ ದುರದೃಷ್ಟವಶಾತ್ ಜಯದೇವ್ ಉನಾದ್ಕತ್ ಮತ್ತೆ ಅವಕಾಶ ಪಡೆಯಲಿಲ್ಲ. ಸದ್ಯ ದೇಸಿ ಕ್ರಿಕೆಟ್‍ನಲ್ಲಿ ಸೌರಾಷ್ಟ್ರ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿರುವ ಉನಾಡ್ಕತ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದರು.
5. ಸೌರಭ್ ನೇತ್ರವಲ್ಕರ್
ಸೌರಭ್ ನೇತ್ರವಲ್ಕರ್ ಯುಎಸ್ಎ ಕ್ರಿಕೆಟ್ ತಂಡವನ್ನು ದೀರ್ಘಾವಧಿ ಕಾಲದವರೆಗೆ ನಾಯಕನಾಗಿ ಮುನ್ನಡೆಸಿದ್ದ ಆಟಗಾರ. ಈತ ಕೂಡ ಕೆಎಲ್ ರಾಹುಲ್ ಜತೆ 2010ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು ಹಾಗೂ ಮುಂಬೈ ರಣಜಿ ತಂಡದಲ್ಲಿಯೂ ಸ್ಥಾನ ಪಡೆದುಕೊಂಡಿದ್ದ ಈತ ಇಂದಿಗೂ ಯುಎಸ್ಎ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications