ಐಸಿಸಿ ಟೂರ್ನಿಯಲ್ಲಿ 5ಕ್ಕೂ ಹೆಚ್ಚು ಬಾರಿ ಫೈನಲ್ ಪಂದ್ಯ ಆಡಿದ 6 ಕ್ರಿಕೆಟಿಗರು ಇವರು!

ಅಂತಾರಾಷ್ಟ್ರೀಯ ಕ್ರಿಕೆಟ್ ಆಡಳಿತ ಸಂಸ್ಥೆಯಾಗಿರುವ ಐಸಿಸಿ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ಚಾಂಪಿಯನ್ಸ್ ಟ್ರೋಫಿಯಂಥಾ ಟೂರ್ನಿಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು ಕ್ರಿಕೆಟ್‌ನ ಅತ್ಯಂತ ಪ್ರತಿಷ್ಠಿತ ಟೂರ್ನಿಗಳು ಎಂದು ಇವುಗಳನ್ನು ಕರೆಯಲಾಗುತ್ತದೆ. ಹೀಗಾಗಿ ವಿಶ್ವ ಕ್ರಿಕೆಟ್‌ನಲ್ಲಿ ಐಸಿಸಿ ಟೂರ್ನಿಯ ಫೈನಲ್ ಪಂದ್ಯವನ್ನು ಆಡಬೇಕು ಎಂಬುದು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಆರಂಭಿಸುವ ಎಲ್ಲಾ ಕ್ರಿಕೆಟಿಗರ ದೊಡ್ಡ ಕನಸು.
ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿ ದಿಗ್ಗಜರು ಎನಿಸಿಕೊಂಡ ಕೆಲವು ಆಟಗಾರರಿಗೂ ಇದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವರ ತಂಡದಿಂದ ಅಂಥಾ ಉತ್ತಮ ಪ್ರದರ್ಶನಗಳು ಬಾರದ ಕಾರಣ ಇಂಥಾ ಸಂದರ್ಭಗಳು ಉಂಟಾಗುತ್ತವೆ.
ಆದರೆ ಮತ್ತೊಂದೆಡೆ ವಿಶ್ವ ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆ ಮಾಡಿದ ಕೆಲ ಕ್ರಿಕೆಟಿಗರು ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಐದಕ್ಕೂ ಹೆಚ್ಚಿನ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಅಂಥಾ ಆರು ಕ್ರಿಕೆಟಿಗರ ಮಾಹಿತಿ ಇಲ್ಲಿದೆ. ಮುಂದೆ ಓದಿ...

ಶ್ರೀಲಂಕಾ ಮಾಜಿ ನಾಯಕ ಕುಮಾರ್ ಸಂಗಕ್ಕರ
ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕರ ಶ್ರೀಲಂಕಾ ಕ್ರಿಕೆಟ್‌ನ ದಿಗ್ಗಜ ಆಟಗಾರರಲ್ಲಿ ಒಬ್ಬರು. ಲಂಕಾ ಪರವಾಗಿ ಅನೇಕ ದಾಖಲೆ ಹೊಂದಿರುವ ಕುಮಾರ್ ಸಂಗಕ್ಕರ ಒಟ್ಟು ಆರು ಬಾರಿ ಐಸಿಸಿ ಟೂರ್ನಿಯ ಫೈನಲ್ ಪಂದ್ಯವನ್ನು ಆಡಿದ್ದಾರೆ. 2014ರಲ್ಲಿ ಶ್ರೀಲಂಕಾ ತಂಡ ಟಿ20 ವಿಶ್ವಕಪ್ ಗೆದ್ದಾಗ ತಂಡದ ಪ್ರಮುಖ ಸದಸ್ಯರಾಗಿದ್ದರು ಕುಮಾರ್ ಸಂಗಕ್ಕರ.

ಲಂಕಾ ಮಾಜಿ ನಾಯಕ ಮಹೇಲ ಜಯವರ್ದನೆ
ಶ್ರೀಲಂಕಾ ತಂಡದ ಮತ್ತೋರ್ವ ಮಾಜಿ ನಾಯಕ ಮಹೇಲ ಜಯವರ್ದನೆ ಕೂಡ ಆರು ಬಾರಿ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಜಯವರ್ದನೆ ನಾಯಕಯತ್ವದಲ್ಲಿಯೇ ಶ್ರೀಲಂಕಾ ತಂಡ 2014ರಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ಗೆದ್ದುಕೊಂಡಿತ್ತು. ಈ ಮೂಲಕ ಜಯವರ್ದನೆ ಪಡೆ ಚುಟುಕು ಮಾದರಿಯಲ್ಲಿ ಮೊಟ್ಟಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಸಾಧನೆ ಮಾಡುವಲ್ಲಿ ಯಶಸ್ವಿಯಾಯಿತು.

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್
ಅತಿ ಹೆಚ್ಚು ಬಾರಿ ಐಸಿಸಿ ಫೈನಲ್‌ನಲ್ಲಿ ಆಡಿರುವ ಮತ್ತೋರ್ವ ಆಟಗಾರ ಎಂದರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್. ಶ್ರೀಲಂಕಾದ ಆಟಗಾರರಾದ ಸಂಗಕ್ಕರ ಹಾಗೂ ಜಯವರ್ದನೆ ರೀತಿಯಲ್ಲಿಯೇ ರಿಕಿ ಪಾಂಟಿಂಗ್ ಕೂಡ 6 ಬಾರಿ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಆಡಿದ್ದಾರೆ. ಇದರಲ್ಲಿ ಪಾಂಟಿಂಗ್ ನಾಲ್ಕು ಬಾರಿ ನಾಯಕನಾಗಿದ್ದುಕೊಂಡು ಟ್ರೋಫಿಯನ್ನು ಗೆದ್ದಿದ್ದಾರೆ ಎಂಬುದು ವಿಶೇಷ. 2003 ಹಾಗೂ 2007ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟಕ್ಕೇರಿದ್ದು 2006 ಹಾಗೂ 2009ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದ್ದರು.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
ಇನ್ನು ಟೀಮ್ ಇಂಡಿಯಾ ಹಾಲಿ ನಾಯಕನಾಗಿರುವ ರೋಹಿತ್ ಶರ್ಮಾ ಕೂಡ ಈ ಪಟ್ಟಿಯಲ್ಲಿದ್ದಾರೆ. ಮುಂದಿನ ಜೂನ್ ತಿಂಗಳಿನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ 6ನೇ ಬಾರಿಗೆ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಆಡಲಿದ್ದಾರೆ. ಈ ಬಾರಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಫೈನಲ್‌ಗೆ ತಲುಪಿಸಿದ್ದಾರೆ ರೋಹಿತ್ ಶರ್ಮಾ.

ಮಾಜಿ ನಾಯಕ ವಿರಾಟ್ ಕೊಹ್ಲಿ
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ರೋಹಿತ್ ಶರ್ಮಾ ರೀತಿಯಲ್ಲಿಯೇ ಮುಂದಿನ ಜೂನ್‌ನಲ್ಲಿ 6ನೇ ಬಾರಿಗೆ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಆಡಲಿದ್ದಾರೆ. ವಿರಾಟ್ ಕೊಹ್ಲಿ 2011ರ ಏಕದಿನ ವಿಶ್ವಕಪ್ ವಿಜೇತ ಭಾತ ಸದಸ್ಯರಾಗಿದ್ದರಲ್ಲದೆ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಾಗಲೂ ಟೀಮ್ ಇಂಡಿಯಾದ ಪ್ರಮುಖ ಸದಸ್ಯರಾಗಿದ್ದರು.

ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್
ಅತಿ ಹೆಚ್ಚು ಬಾರಿ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಆಡಿರುವ ದಾಖಲೆ ಭಾರತದ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಹೆಸರಿನಲ್ಲಿದೆ. ಯುವರಾಜ್ ಸಿಂಗ್ ಒಟ್ಟು 7 ಬಾರಿ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಆಡಿರುವ ದಾಖಲೆಯನ್ನು ಹೊಂದಿದ್ದಾರೆ. 2000, 2002 ಹಾಗೂ 2017ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಆಡಿರುವ ಯುವರಾಜ್ ಸಿಂಗ್, 2007 ಹಾಗೂ 2014ರಲ್ಲಿ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದ್ದಾರೆ. 2003 ಹಾಗೂ 2011ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿ ದಾಖಲೆ ಬರೆದಿದ್ದಾರೆ ಯುವರಾಜ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications