ಐಪಿಎಲ್ 2025ರ ಸಿದ್ಧತೆಗಳು ಭರದಿಂದ ಸಾಗಿವೆ. ಈ ಬಾರಿ ಮೆಗಾ ಹರಾಜು ನಡೆಯಲಿದ್ದು, ತಂಡಗಳು ಸಹ ಸಿದ್ಧತೆ ನಡೆಸಿವೆ. ಯಾವ ಆಟಗಾರರನ್ನು ಕೈ ಬಿಡಬೇಕು, ಯಾರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಐಪಿಎಲ್ ತಂಡಗಳ ಮಾಲೀಕರು ಚಿಂತನೆ ನಡೆಸಿದ್ದಾರೆ. ಈ ಬಾರಿ ಹರಾಜಿಗೆ ಸ್ಟಾರ್ ಆಟಗಾರರು ಮತ್ತೆ ಎಂಟ್ರಿ ನೀಡುವ ಸಾಧ್ಯತೆ ಇದೆ.
ಐಪಿಎಲ್ 2024ರ ಮಿನಿ ಹರಾಜಿನಲ್ಲಿ ಸೇಲ್ ಆಗದೆ ಉಳಿದಿದ್ದ ಆಟಗಾರರು ಈ ಬಾರಿ ಮಾಲೀಕರ ಚಿತ್ತ ಕದಿಯಲು ತಯಾರಿ ನಡೆಸಿದ್ದಾರೆ. ಕಳೆದ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿರುವ ಆಟಗಾರರು ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಈ ಪಟ್ಟಿಯಲ್ಲಿ ಖ್ಯಾತ ನಾಮ ಆಟಗಾರರ ಹೆಸರುಗಳು ಸೇರಿವೆ. ಟಿ20 ಕ್ರಿಕೆಟ್‌ನಲ್ಲಿ ಈ ಸ್ಟಾರ್ ಆಟಗಾರರು ನೀಡಿದ ಪ್ರದರ್ಶನವನ್ನು ಪರಿಗಣಿಸಿ, ಮಾಲೀಕರು ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಕಳೆದ ಬಾರಿ ಬಿಕರಿ ಆಗದೆ ಉಳಿದ ಐವರು ಆಟಗಾರರು ಈ ಬಾರಿ ತಂಡ ಸೇರಲು ಸಿದ್ಧರಾಗಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಸದ್ದು ಮಾಡಿರುವ ಆಟಗಾರ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್.. ಇವರು ಕಳೆದ ಬಾರಿ ಬಿಕರಿ ಆಗದೆ ಉಳಿದಿದ್ದರು. ಆದರೆ ಈ ಬಾರಿ ಮಾಲೀಕರು ಇವರತ್ತ ಚಿತ್ತ ಹರಿಸಲಿದ್ದಾರೆ. ಸ್ಟೀವ್ ಸ್ಮಿತ್ ಅವರ ಇತ್ತೀಚಿನ ಫಾರ್ಮ್ ಅತ್ಯುತ್ತಮವಾಗಿದೆ. ಆದ್ದರಿಂದ, ಸ್ಟೀವ್ ಸ್ಮಿತ್ ಐಪಿಎಲ್ 2025 ರಲ್ಲಿ ಮರಳಬಹುದು ಎಂದು ನಂಬಲಾಗಿದೆ.
ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದು ಮಿಂಚಿರುವ ಪ್ಲೇಯರ್ ಸರ್ಫರಾಜ್ ಖಾನ್. ಕಳೆದ ಬಾರಿ ಈ ಪ್ಲೇಯರ್ ಕೊಂಡುಕೊಳ್ಳಲು ಯಾವುದೇ ತಂಡ ಮನಸ್ಸು ಮಾಡಿರಲಿಲ್ಲ. ಅಲ್ಲದೆ 2023ರಲ್ಲಿ ಸರ್ಫರಾಜ್ ಪ್ರದರ್ಶನವೂ ನಿರಾಶಾದಾಯಕವಾಗಿತ್ತು. ದೇಶೀಯ ಟೂರ್ನಿಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಸರ್ಫರಾಜ್ ಈ ಬಾರಿ ಐಪಿಎಲ್ ಮಾಲೀಕರ ಚಿತ್ತ ಕದಿಯಬಹುದು ಎಂದು ಅಂದಾಜಿಸಲಾಗಿದೆ.

ಕಳೆದ ಎರಡು ಆವೃತ್ತಿಯ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಗದೆ ನಿರಾಸೆಯನ್ನು ಅನುಭವಿಸಿದ್ದ ವೇಗದ ಬೌಲರ್ ಟೈಮಲ್ ಮಿಲ್ಸ್. ಇವರು ಕೊನೆಯ ಬಾರಿಗೆ 2022ರ ಐಪಿಎಲ್‌ನಲ್ಲಿ ಮುಂಬೈ ಪರ ಬೌಲಿಂಗ್ ನಡೆಸಿದ್ದರು. ಈ ಬಾರಿ ಮತ್ತೆ ಐಪಿಎಲ್ ತಂಡ ಸೇರಲು ಇವರು ತುದಿಗಾಲಿನಲ್ಲಿ ನಿಂತಿದ್ದಾರೆ.
ದಕ್ಷಿಣ ಆಫ್ರಿಕಾದ ಸ್ಪಿನ್ ಬೌಲರ್ ತಬ್ರೇಜ್ ಶಂಸಿ ಮತ್ತೆ ಐಪಿಎಲ್‌ಗೆ ಕಮ್‌ಬ್ಯಾಕ್ ಮಾಡಲು ತಯಾರಿ ನಡೆಸಿದ್ದಾರೆ. ತಬ್ರೇಜ್ 2021ರಲ್ಲಿ ಕೊನೆಯ ಬಾರಿಗೆ ರಾಜಸ್ಥಾನ ರಾಯಲ್ಸ್ ಪರ ಕಾಣಿಸಿಕೊಂಡಿದ್ದರು. ಆದರೆ ಆ ಆವೃತ್ತಿಯಲ್ಲಿ ಅವರಿಗೆ ಆಡುವ ಅವಕಾಶ ಲಭಿಸಿರಲಿಲ್ಲ. ಇತ್ತೀಚಿಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ಶಂಸಿ ಅಮೋಘ ಪ್ರದರ್ಶನ ನೀಡಿದ್ದರಿಂದ, ಐಪಿಎಲ್ ಮಾಲೀಕರು ಇವರನ್ನು ಪರಿಗಣಿಸಬಹುದಾಗಿದೆ.
2019 ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಕಳೆದ ಆವೃತ್ತಿಯಲ್ಲಿ ಗಾಯದ ಸಮಸ್ಯೆಯಿಂದಾಗಿ ಆಡಿರಲಿಲ್ಲ. ಇವರು ಕೊನೆಯ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಅಖಾಡಕ್ಕೆ ಇಳಿದಿದ್ದರು. ಈಗ ಮತ್ತೊಮ್ಮೆ ಶ್ರೀಮಂತ ಲೀಗ್ ಆಡಲು ಸಿದ್ಧತೆ ನಡೆಸಿದ್ದಾರೆ.