ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಎಲ್ಲ ತಂಡಗಳು ಈ ನಿಟ್ಟಿನಲ್ಲಿ ಭರ್ಜರಿ ತಾಲೀಮು ನಡೆಸಿ, ಭಾರತದತ್ತ ಮುಖ ಮಾಡಿವೆ. ಈಗಾಗಲೇ ಹಲವು ತಂಡಗಳು ಇಂಡಿಯಾದಲ್ಲಿ ಬೀಡು ಬಿಟ್ಟಿವೆ. ಇನ್ನು ಕೆಲವು ತಂಡಗಳು ಬರಲು ಸಜ್ಜಾಗಿವೆ.
ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವವ್ಯಾಪಿ ಕ್ರಿಕೆಟ್ ಜ್ವರ ಕ್ರಮೇಣ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಎಲ್ಲ ತಂಡಗಳು ಸಿಕ್ಕ ಅವಕಾಶದಲ್ಲಿ ಅಬ್ಬರಿಸಿವೆ. ಅಲ್ಲದೆ ಎದುರಾಳಿ ತಂಡಗಳಿಗೆ ತಮ್ಮ ಸಂದೇಶವನ್ನು ರವಾನಿಸಿವೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯದ ವೇಳೆಯೂ ಸ್ಟಾರ್ ಪ್ಲೇಯರ್ ಒಬ್ಬ ಭರ್ಜರಿ ಫಾರ್ಮ್ ಗೆ ಮರಳಿದ್ದು ಕಾಂಗರೂ ಪಾಳಯದಲ್ಲಿ ಸಂತಸ ತಂದಿದೆ.

ಹೌದು ರಾಜಕೋಟ್‌ದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ತನ್ನ ಬೌಲಿಂಗ್ ನಿಂದಲೇ ತಂಡಕ್ಕೆ ನೆರವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್. ಗ್ಲೆನ್ ಮ್ಯಾಕ್ಸ್ ವೆಲ್ ಗೆ ಭಾರತದ ಪಿಚ್ ಗಳಲ್ಲಿ ಆಡಿದ ಅನುಭವ ಇದೆ. ಅಲ್ಲದೆ ಇಲ್ಲಿನ ಪಿಚ್ ಸ್ಪಿನ್ ಸ್ನೇಹಿ ಆಗಿದ್ದು, ಇದರ ಲಾಭವನ್ನು ಇವರು ಪಡೆದುಕೊಳ್ಳಬಲ್ಲರು.
ಈ ವಿಷಯವನ್ನೇ ಬುಧವಾರ ನಡೆದ ಪಂದ್ಯದಲ್ಲಿ ಸಾಬೀತಾಗಿದೆ. ಟೀಮ್ ಇಂಡಿಯಾದ ಬ್ಯಾಟರ್ ಗಳನ್ನು ಕಾಡಿದ್ದು, ಮೂರನೇ ಪಂದ್ಯದಲ್ಲಿ ಅನುಭವಿ ವೇಗದ ಬೌಲರ್ ಗಳು ಅಲ್ಲ. ಟ್ರಂಪ್ ಕಾರ್ಡ್ ಸ್ಪಿನ್ ಬೌಲರ್ ಆಡಂ ಜಂಪಾ ಸಹ ಅಲ್ಲ. ಕಾಂಗರೂ ಪಡೆಯ ಜಯದಲ್ಲಿ ಮಿಂಚಿದ್ದು ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್..
ಗ್ಲೆನ್ ಮ್ಯಾಕ್ಸ್ ವೆಲ್ ಒಬ್ಬ ಸ್ಟಾರ್ ಆಲ್ ರೌಂಡರ್ ಅನ್ನೋದರಲ್ಲಿ ಎರಡು ಮಾತಿಲ್ಲ. ತಮ್ಮ ಬ್ಯಾಟಿಂಗ್ ನಿಂದ ಅದೆಷ್ಟೋ ಪಂದ್ಯಗಳ ಗತಿಯನ್ನೇ ಬುಡಮೇಲು ಮಾಡಿದ್ದ ಗ್ಲೆನ್, ಬೌಲಿಂಗ್ ನಲ್ಲಿ ಅವಕಾಶ ಸಿಕ್ಕಾಗ ರನ್ ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬಲ್ಲರು. ಅಲ್ಲದೆ ಮೈದಾನದಲ್ಲಿ ಇವರು ಒಬ್ಬ ಬೆಸ್ಟ್ ಫೀಲ್ಡರ್.. ಇವರ ಕಣ್ಣಂಚಿನಿಂದ ಚೆಂಡು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.
ಟಿ20 ಪಂದ್ಯಗಳು ಹೆಚ್ಚಾದಂತೆ ಮತ್ತು ಅವುಗಳಿಗೆ ಪ್ರಾಮುಖ್ಯತೆ ಸಿಗುತ್ತಾ ಸಾಗಿದಂತೆ, ಆಲ್ ರೌಂಡರ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಒಬ್ಬ ಆಲ್ ರೌಂಡರ್ ತಂಡಕ್ಕೆ ಬೂಸ್ಟ್ ನೀಡಬಲ್ಲ ಪ್ಲೇಯರ್. ಗ್ಲೇನ್ ಮ್ಯಾಕ್ಸ್‌ವೆಲ್ ಐಪಿಎಲ್ ನಲ್ಲಿ ಹಲವು ತಂಡಗಳನ್ನು ಪ್ರತಿನಿಧಿಸಿದ್ದರಿಂದ ಅವರಿಗೆ ಇಲ್ಲಿನ ಪಿಚ್ ಗಳ ಮರ್ಮ ಚೆನ್ನಾಗಿ ತಿಳಿದಿದೆ. ಹೀಗಾಗಿ ಮ್ಯಾಕ್ಸ್ ವೆಲ್ ಭಾರತೀಯ ಪಿಚ್ ಗಳಲ್ಲಿ ಬೌಲಿಂಗ್ ನಲ್ಲೂ ಕಮಾಲ್ ಪ್ರದರ್ಶನ ನೀಡಬಲ್ಲರು.
ಕೆಲವು ತಿಂಗಳುಗಳ ಹಿಂದೆ ಪಾರ್ಟಿಯ ವೇಳೆ ಗಾಯಕ್ಕೆ ತುತ್ತಾಗಿದ್ದ ಗ್ಲೆನ್, ವಿಶ್ವಕಪ್ ನಲ್ಲಿ ಹೇಗೆ ಪ್ರದರ್ಶನ ನೀಡ್ತಾರೆ ಎಂಬ ಪ್ರಶ್ನೆಗಳು ಎದ್ದಿದ್ದವು. ಆದರೆ ಮೊನ್ನೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಆಸೀಸ್ ಆಲ್ ರೌಂಡರ್ ಅಬ್ಬರಿಸಿದ್ದಾರೆ. ಅಲ್ಲದೆ ಮತ್ತೊಮ್ಮೆ ತಂಡ ವಿಶ್ವಕಪ್ ಗೆಲ್ಲಲು ತಾವು ಬೆವರು ಹರಿಸುವುದಾಗಿ ಹೇಳಿದ್ದಾರೆ. ಗ್ಲೆನ್ ತಮ್ಮ ಸ್ಥಿರ ಪ್ರದರ್ಶನವನ್ನು ಹೀಗೆ ಮುಂದುವರೆಸಿದಲ್ಲಿ ಆಸೀಸ್ ವಿಶ್ವಕಪ್ ಸನಿಹಕ್ಕೆ ಹೋಗಿ ನಿಲ್ಲುವುದಂತೂ ಗ್ಯಾರಂಟಿ..