2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ ಯುವ ಆಟಗಾರರಿಂದ ತುಂಬಿದೆ. ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಕೆಲವು ಗಾಯಾಳು ಆಟಗಾರರ ಅಲಭ್ಯತೆಯಿಂದಾಗಿ ಯುವ ಆಟಗಾರರಿಗೆ ಮಣೆ ಹಾಕಿತು.
ಇದೀಗ ಭಾರತದ ಮಾಜಿ ಆಲ್‌ರೌಂಡರ್ ಸುನಿಲ್ ಜೋಶಿ ಅವರು ಶ್ರೀಲಂಕಾ ತಂಡದ ಯುವ ಸ್ಪಿನ್ ಆಲ್‌ರೌಂಡರ್ ದುನಿತ್ ವೆಲ್ಲಾಲಗೆ ಅವರನ್ನು ಹಾಡಿ ಹೊಗಳಿದ್ದಾರೆ. ಇದೇ ವೇಳೆ ಭವಿಷ್ಯದ ಸನತ್ ಜಯಸೂರ್ಯ ಆಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ದುನಿತ್ ವೆಲ್ಲಾಲಗೆ ಅವರು 2023ರ ಏಷ್ಯಾ ಕಪ್‌ನ ತಮ್ಮ ಸೂಪರ್-4 ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ತಮ್ಮ ಮೊದಲ ಐದು ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಬ್ಯಾಟಿಂಗ್‌ನಲ್ಲಿಯೂ ಮಿಂಚಿದರು.

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸುನಿಲ್ ಜೋಶಿ, ದುನಿತ್ ವೆಲ್ಲಾಲಗೆ ಅವರನ್ನು ರೋಚಕ ಆಟಗಾರ ಎಂದು ಕರೆದರು. ಶ್ರೀಲಂಕಾದ ಭವಿಷ್ಯದ ಸನತ್ ಜಯಸೂರ್ಯ ಆಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಎಂದು ತಿಳಿಸಿದರು.
ಭಾರತ ತಂಡದ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ 41 ರನ್‌ಗಳಿಂದ ಸೋತರೂ, ದುನಿತ್ ವೆಲ್ಲಾಲಗೆ ಆಲ್‌ರೌಂಡ್ ಪ್ರದರ್ಶನದಿಂದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
"ಆ ಯುವ ಆಲ್‌ರೌಂಡರ್ ಅಂಡರ್-19 ಶ್ರೀಲಂಕಾ ತಂಡದ ನಾಯಕ. ತಂಡ ನಿರ್ಮಿಸುವಾಗ ಅತ್ಯಾಕರ್ಷಕ ಆಟಗಾರನಿಗೆ ನೀವು ಮನ್ನಣೆ ನೀಡಬೇಕು. ಬಹುಶಃ ಮತ್ತೊಬ್ಬ ಸನತ್ ಜಯಸೂರ್ಯ ಆಗಬಹುದು," ಎಂದು ಭಾರತದ ಮಾಜಿ ಕ್ರಿಕೆಟಿಗ ಕರ್ನಾಟಕದ ಸುನಿಲ್ ಜೋಶಿ ಹೇಳಿದರು.
"ನಾನು ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ. ಆದರೆ, ದುನಿತ್ ವೆಲ್ಲಾಲಗೆ ಸದ್ಯದ ಫಾರ್ಮ್ ಗಮನಿಸಿದರೆ, ಶ್ರೀಲಂಕಾದ ಮುಂದಿನ ಸನತ್ ಜಯಸೂರ್ಯ ಆಗುವ ಎಲ್ಲಾ ಲಕ್ಷಣಗಳಿವೆ ಎಂದು ನಾನು ಭಾವಿಸುತ್ತೇನೆ," ಎಂದು ಸುನಿಲ್ ಜೋಶಿ ಅಭಿಪ್ರಾಯಪಟ್ಟರು.

ಶ್ರೀಲಂಕಾ ಪರ ಜಯಸೂರ್ಯ ಅವರನ್ನು ಅನುಕರಿಸುವ ಬ್ಯಾಟಿಂಗ್ ಮತ್ತು ಬೌಲಿಂಗ್ ಗುಣಗಳನ್ನು ವೆಲ್ಲಲಾಗೆ ಹೊಂದಿದ್ದಾರೆ ಎಂದು ಅವರು ಹೇಳಿದರು. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ 46 ರನ್‌ಗಳಿಗೆ ಅಜೇಯರಾಗಿ ಉಳಿದಿರುವಾಗ ವೆಲ್ಲಲಾಗೆ ಐದು ವಿಕೆಟ್‌ಗಳನ್ನು ಪಡೆದರು.
"ನಾವು ದುನಿತ್ ವೆಲ್ಲಾಲಗೆ ಬೌಲಿಂಗ್ ಮಾಡುವುದನ್ನು ನೋಡಿದ್ದೇವೆ ಮತ್ತು ಹಿಂದಿನ ಇನ್ನಿಂಗ್ಸ್ ಕೂಡ ನಾವು ಗಮನಿಸಿದ್ದೇವೆ. ಆದರೆ ಅವರು ಬ್ಯಾಟಿಂಗ್ ಮಾಡಿದ ರೀತಿ ನೋಡಿದರೆ, ಶ್ರೀಲಂಕಾ ತಂಡಕ್ಕೆ ಮತ್ತೊಬ್ಬ ಸನತ್ ಜಯಸೂರ್ಯ ಆಗಲು ಅವರು ಎಲ್ಲಾ ಗುಣವನ್ನು ಹೊಂದಿದ್ದಾರೆ," ಎಂದು ಕನ್ನಡಿಗ ಸುನಿಲ್ ಜೋಶಿ ತಿಳಿಸಿದರು.
ದುನಿತ್ ವೆಲ್ಲಾಲಗೆ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಚಳ್ಳೆಹಣ್ಣು ತಿನ್ನಿಸುವ ಮೂಲಕ 40 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದು ಅದ್ಭುತವಾಗಿ ಆಡಿದರು. ಇದರಿಂದ ಶ್ರೀಲಂಕಾ ತಂಡ ಭಾರತ ತಂಡವನ್ನು 213 ರನ್‌ಗಳಿಗೆ ನಿರ್ಬಂಧಿಸಲು ನೆರವಾದರು.
ಕೊಲಂಬೊದಲ್ಲಿ ನಡೆದ ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಾತ್ರವಲ್ಲದೆ, ಹಾರ್ದಿಕ್ ಪಾಂಡ್ಯ, ಶುಭ್ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅವರಂತಹ ದಿಗ್ಗಜ ಬ್ಯಾಟರ್‌ಗಳನ್ನು ದುನಿತ್ ವೆಲ್ಲಲಾಗೆ ಬಲೆಗೆ ಬೀಳಿಸಿಕೊಂಡರು. ನಂತರ, ಚೇಸ್ ಮಾಡುವಾಗ ಬ್ಯಾಟಿಂಗ್‌ನಲ್ಲಿಯೂ 43 ರನ್ ಗಳಿಸಿದರು. ಆದರೆ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಸದ್ಯ ಸೂಪರ್-4 ಹಂತದಲ್ಲಿ ಶ್ರೀಲಂಕಾ ಎರಡು ಪಂದ್ಯಗಳಿಂದ ಎರಡು ಅಂಕಗಳನ್ನು ಹೊಂದಿದ್ದು, ಪಾಕಿಸ್ತಾನ ತಂಡವು ಇದೇ ಪರಿಸ್ಥಿತಿಯಲ್ಲಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಗುರುವಾರದ ಪಂದ್ಯದಲ್ಲಿ ಗೆಲ್ಲುವ ತಂಡವು ಸೆಪ್ಟೆಂಬರ್ 17ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದ್ದಾರೆ.