ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಗುರುವಾರ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಮುಖಾಮುಖಿ ಆಗಲಿವೆ. ಈ ವೇಳೆ ಆರ್‌ಸಿಬಿ ತವರಿನಲ್ಲಿ ತನ್ನ ಮೊದಲ ಗೆಲುವಿನ ಖಾತೆ ಓಪನ್ ಮಾಡುವ ಪ್ಲ್ಯಾನ್ ಹಾಕಿಕೊಂಡಿದೆ. ಈ ಮೈದಾನದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಸೋಲು ಕಂಡಿದ್ದು, ತವರಿನ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಲು ಪ್ಲ್ಯಾನ್ ಮಾಡಿಕೊಂಡಿದೆ. ನಾಲ್ಕನೇ ಸೋಲನ್ನು ತಪ್ಪಿಸಿಕೊಳ್ಳಲು ರಜತ್ ಪಟಿದಾರ್ ಪಡೆ ಯೋಜನೆ ರೂಪಿಸಿಕೊಂಡಿದೆ.
ಜೈಪುರ್‌ದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಏ.13 ರಂದು ನಡೆದ ಪಂದ್ಯದಲ್ಲಿ ಆರ್‌ಸಿಬಿ 9 ವಿಕೆಟ್ ಜಯ ಸಾಧಿಸಿತ್ತು. ಇದಾದ ಬಳಿಕ ಆರ್‌ಸಿಬಿ ತವರಿನಲ್ಲಿ ಪಂಜಾಬ್ ವಿರುದ್ಧ ಹೀನಾಯ ಸೋಲು ಕಂಡಿತು. ಆದರೆ ನ್ಯೂ ಚಂಡೀಗಡ್ ಅಂಗಳದಲ್ಲಿ ಆರ್‌ಸಿಬಿ ಮತ್ತೆ ಅಬ್ಬರಿಸಿ ಈಗ ತವರಿಗೆ ಆಗಮಿಸಿದೆ. ಸತತ ಸೋಲುಗಳನ್ನೇ ಕಂಡಿರುವ ಆರ್‌ಸಿಬಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ತನ್ನ ಮೊದಲ ಗೆಲುವಿನ ಖಾತೆ ಓಪನ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.

ಆರ್‌ಸಿಬಿ ತವರಿನಲ್ಲಿ 49 ಪ್ರತಿಷತ ಗೆಲುವು ದಾಖಲಿಸಿದೆ. ಈ ಅಂಕಿ ಅಂಶವನ್ನು ಸುಧಾರಿಸಿಕೊಳ್ಳುವ ಅವಶ್ಯಕತೆ ಇದೆ. ಇನ್ನು ಆರ್‌ಸಿಬಿ ಹಾಗೂ ರಾಜಸ್ಥಾನ ತಂಡಗಳು ಈಗಾಗಲೇ ಮೈದಾನದಲ್ಲಿ 33 ಬಾರಿ ಮುಖಾಮುಖಿ ಆಗಿವೆ. ಈ ವೇಳೆ ಆರ್‌ಸಿಬಿ 16 ಹಾಗೂ ರಾಜಸ್ಥಾನ 14 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಉಭಯ ತಂಡಗಳು ಕಣಕ್ಕೆ ಇಳಿದಾಗ 217 ರನ್ ಗರಿಷ್ಠ ಹಾಗೂ 58 ಕನಿಷ್ಠ ಮೊತ್ತವಾಗಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಸ್ಪಿನ್ ಬೌಲರ್‌ಗಳು ವಿಕೆಟ್ ಪಡೆಯಲು ಹೆಣಗಾಟ ನಡೆಸಿದ್ದು, ನಿಜಕ್ಕೂ ಟೀಮ್ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ಈ ಅಂಗಳದಲ್ಲಿ ಆರ್‌ಸಿಬಿ ಪರ ಸ್ಪಿನ್ ಬೌಲರ್‌ಗಳು 15 ಓವರ್ ಬೌಲ್ ಮಾಡಿ 9.6ರ ಎಕಾನಮಿಯಲ್ಲಿ 144 ರನ್ ನೀಡಿದ್ದು, ಕೇವಲ 1 ವಿಕೆಟ್ ಕಬಳಿಸಿದ್ದಾರೆ. ಇದೇ ಸ್ಪಿನ್ ಬೌಲರ್‌ಗಳು ತವರಿನಾಚೆ ಅಮೋಘ ಪ್ರದರ್ಶನ ನೀಡಿದ್ದು, 35.1 ಓವರ್‌ಗಳಲ್ಲಿ 15 ವಿಕೆಟ್ ಪಡೆದು, 8.5 ಎಕಾನಮಿಯೊಂದಿಗೆ ರನ್ ನೀಡಿದ್ದಾರೆ.
ಈ ಐಪಿಎಲ್‌ನಲ್ಲಿ ಆರ್‌ಸಿಬಿ ಪವರ್ ಪ್ಲೇನಲ್ಲಿ 8ಕ್ಕೂ ಕಡಿಮೆ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದು, ಚಿಂತೆಯನ್ನು ಹೆಚ್ಚಿಸಿವೆ.
ತವರಿನಲ್ಲಿ ಆರ್‌ಸಿಬಿ ಪರ ಟಾಪ್ ಆರ್ಡರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದ ತಂಡದ ಟೆನ್ಷನ್ ಹೆಚ್ಚಿಸಿದೆ. ವಿರಾಟ್ ಕೊಹ್ಲಿ ರನ್ ಚೇಸ್ ಮಾಡುವಾಗ ತವರಿನಾಚೆ ಮೂರು ಅರ್ಧಶತಕ ಬಾರಿಸಿದ್ದಾರೆ. ಆದರೆ ಇವರ ಬ್ಯಾಟ್ ತವರಿನಲ್ಲಿ ಮೌನಕ್ಕೆ ಶರಣಾಗಿದೆ. ಇನ್ನು ಫಿಲ್ ಸಾಲ್ಟ್ ಅಬ್ಬರ ಬೆಂಗಳೂರಿನಲ್ಲಿ ನಡೆದರೆ ಗೆಲುವಿನ ಚಾನ್ಸ್ ಹೆಚ್ಚಾಗುತ್ತದೆ.
ಆರ್‌ಸಿಬಿ ತಂಡ ಒಟ್ಟಾರೆ ಐಪಿಎಲ್ 2025ರಲ್ಲಿ ಒಟ್ಟು 7 ಕ್ಯಾಚ್‌ಗಳನ್ನು ಬಿಟ್ಟಿದೆ. ಅಲ್ಲದೆ 19 ರನ್‌ಔಟ್‌ಗಳನ್ನು ಮಿಸ್ ಮಾಡಿಕೊಂಡಿದೆ. ಇನ್ನು 31 ಮಿಸ್ ಫೀಲ್ಡ್ ಮಾಡಿದ್ದು, ತಂಡಕ್ಕೆ ಪೆಟ್ಟು ಬಿದ್ದಂತೆ ಆಗಿದೆ.