ಕ್ರಿಕೆಟ್ ಕ್ರೀಡೆಯಲ್ಲಿ ಒಂದು ತಂಡಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡುವ ಆಟಗಾರ ಅತ್ಯಂತ ಮುಖ್ಯ. ತಂಡದಲ್ಲಿ ನಿಜವಾದ ಆಲ್‌ರೌಂಡರ್ ಯಾವಾಗಲೂ ಆಡುವ ಹನ್ನೊಂದರ ಬಳಗದಲ್ಲಿ ಪ್ರಮುಖ ಪಾತ್ರವಹಿಸುತ್ತಾನೆ. ಏಕೆಂದರೆ ಅವರು ಬಹು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರು ವಿಭಾಗಗಳಲ್ಲಿ ತಂಡಕ್ಕೆ ನೆರವಾಗುತ್ತಾರೆ. ಐಪಿಎಲ್ ಟೂರ್ನಿ ಕಳೆದ 17 ಸೀಸನ್‌ಗಳಲ್ಲಿ ಹಲವು ದಿಗ್ಗಜ ಆಲ್‌ರೌಂಡರ್‌ಗಳನ್ನು ಕಂಡಿದೆ. ಆದರೆ ಇವರಲ್ಲಿ ಕೇವಲ 3 ಆಟಗಾರರು ಮಾತ್ರ ಟೂರ್ನಿಯಲ್ಲಿ ಶತಕ ಮತ್ತು ಹ್ಯಾಟ್ರಿಕ್ ವಿಕೆಟ್ ಪಡೆದ ವಿಶೇಷ ಸಾಧನೆ ಮಾಡಿದ್ದಾರೆ.
ಐಪಿಎಲ್ ಟಿ20 ಲೀಗ್‌ನಲ್ಲಿ ಶತಕ ಗಳಿಸುವುದು ವಿಶೇಷ ಸಾಧನೆ, ಅದರಲ್ಲೂ ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಮತ್ತೊಂದು ವಿಶೇಷ. ಇಲ್ಲಿವರೆಗೆ ಈ ಸಾಧನೆ ಮಾಡಲು ಮೂವರಿಂದ ಮಾತ್ರ ಸಾಧ್ಯವಾಗಿದ್ದು, ಈ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಮತ್ತು ಎರಡು ಶತಕಗಳನ್ನು ಗಳಿಸುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. ಐಪಿಎಲ್ 2009ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡುವಾಗ ಅವರು ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ಅವರ ಆಫ್-ಸ್ಪಿನ್ ಬೌಲಿಂಗ್ ಮಾಡುವ ಮೂಲಕ ಸತತವಾಗಿ 3 ಬ್ಯಾಟರ್ಸ್ ಅನ್ನು ಔಟ್ ಮಾಡಿದರು. ಹ್ಯಾಟ್ರಿಕ್ ವಿಕೆಟ್ ಪಡೆದ ಈ ಪಂದ್ಯದಲ್ಲಿ ರೋಹಿತ್ 15ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಇಬ್ಬರು ಬ್ಯಾಟರ್ಸ್ ಅನ್ನು ಔಟ್ ಮಾಡಿದರೆ, ನಂತರ 17ನೇ ಓವರ್‌ನ ಮೊದಲ ಎಸೆತದಲ್ಲಿ ಮೂರನೇ ವಿಕೆಟ್ ಪಡೆಯುವ ಮೂಲಕ ತಮ್ಮ ಸ್ಪೆಲ್ ಅನ್ನು ಮುಂದುವರಿಸಿದರು. ಅಭಿಷೇಕ್ ನಾಯರ್, ಹರ್ಭಜನ್ ಸಿಂಗ್ ಮತ್ತು ಜೀನ್-ಪಾಲ್ ಮೂವರ ವಿಕೆಟ್ ಕಬಳಿಸಿದ್ದರು.
ರೋಹಿತ್ ಶರ್ಮಾ ಕೂಡ ಐಪಿಎಲ್ ಇತಿಹಾಸದಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ. ಅವರ ಮೊದಲ ಶತಕ ಐಪಿಎಲ್ 2012 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ (ಅಜೇಯ 109) ಬಂದಿತು. ಇದಾದ ಬಳಿಕ ಅವರ ಎರಡನೇ ಶತಕ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ ಅಜೇಯ 105 ರನ್ ಕಲೆ ಹಾಕಿದರು.
ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಐಪಿಎಲ್ ಇತಿಹಾಸದಲ್ಲಿ 4 ಶತಕಗಳನ್ನು ಗಳಿಸಿದ್ದು, ಒಮ್ಮೆ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಐಪಿಎಲ್ 2014 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‍ಹೆಚ್) ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (ಆರ್‍ಆರ್) ಕಣಕ್ಕಿಳಿದಿದ್ದ ವ್ಯಾಟ್ಸನ್, ಇನ್ನಿಂಗ್ಸ್‌ನ 4ನೇ ಓವರ್‌ನ ಕೊನೆಯ ಎಸೆತದಲ್ಲಿ ಶಿಖರ್ ಧವನ್ ಅವರನ್ನು ಮೊದಲು ಔಟ್ ಮಾಡಿದರು. ನಂತರ 17ನೇ ಓವರ್‌ನಲ್ಲಿ ದಾಳಿ ಗಿಳಿದ ಅವರು ಮೊದಲೆರಡು ಎಸೆತಗಳಲ್ಲಿ ಮೊಯಿಸಸ್ ಹೆನ್ರಿಕ್ಸ್ ಮತ್ತು ಕರಣ್ ಶರ್ಮಾ ಅವರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಪೂರ್ಣಗೊಳಿಸಿದರು.
ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ವ್ಯಾಟ್ಸನ್ ತಲಾ ಎರಡು ಶತಕಗಳನ್ನು ಗಳಿಸಿದರು. ಐಪಿಎಲ್ 2013ರಲ್ಲಿ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ವ್ಯಾಟ್ಸನ್ 101 ರನ್ ಗಳಿಸುವ ಮೂಲಕ ಅವರು ತಮ್ಮ ಮೊದಲ ಶತಕ ಗಳಿಸಿದರು. ನಂತರ ಕೆಕೆಆರ್ ವಿರುದ್ಧದ ಅಜೇಯ 104 ರನ್ ಗಳಿಸಿದರು. ಬಳಿಕ 2015 ಮತ್ತು 2018 ರ ಸೀಸನ್ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಶತಕ ಸಿಡಿಸಿದರು.
ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಸುನಿಲ್ ನರೈನ್ ಕೂಡ ಐಪಿಎಲ್‌ನಲ್ಲಿ ಹಲವು ದಾಖಲೆ ಸೃಷ್ಟಿಸಿದ್ದಾರೆ. ಅದರಲ್ಲಿ ಹ್ಯಾಟ್ರಿಕ್ ವಿಕೆಟ್ ಮತ್ತು ಶತಕ ಬಾರಿಸಿರುವ ದಾಖಲೆ ಕೂಡ ಒಂದಾಗಿದೆ. ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ಕೆಕೆಆರ್ ಪರ ಆಡುವಾಗ ನರೈನ್ ತಮ್ಮ ಏಕೈಕ ಹ್ಯಾಟ್ರಿಕ್ ವಿಕೆಟ್ ಪಡೆದರು. ನರೈನ್ ಅವರು ಡೇವಿಡ್ ಹಸ್ಸಿ, ಅಜರ್ ಮಹಮೂದ್ ಮತ್ತು ಗುರುಕೀರತ್ ಸಿಂಗ್ ಮಾನ್ ಅವರನ್ನು ಒಂದೇ ಓವರ್‍ನಲ್ಲಿ ಔಟ್ ಮಾಡಿದರು.
ಐಪಿಎಲ್‌ನಲ್ಲಿ ಅವರ ಮೊದಲ ಮತ್ತು ಏಕೈಕ ಶತಕವು ಐಪಿಎಲ್ 2024 ರಲ್ಲಿ ಆರ್‌ಆರ್ ವಿರುದ್ಧ ಬಂದಿತು. ಕೆಕೆಆರ್ ಪರ ಆಡುವಾಗ, ಅವರು ರಾಜಸ್ಥಾನ ವಿರುದ್ಧ ಕೇವಲ 56 ಎಸೆತಗಳಲ್ಲಿ 109 ರನ್ ಕಲೆ ಹಾಕಿದ್ದರು.