ಭಾರತ ಪ್ರವಾಸವನ್ನು ಇನ್ನೇನು ಕೆಲವೇ ದಿನಗಳಲ್ಲಿ ಬಾಂಗ್ಲಾದೇಶ ಆರಂಭಿಸಲಿದೆ. ಈ ಪ್ರವಾಸದಲ್ಲಿ ಆರಂಭದಲ್ಲಿ ಮೊದಲೆರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಇದಾದ ಬಳಿಕ ಉಭಯ ತಂಡಗಳ ನಡುವೆ ಟಿ20 ಪಂದ್ಯಗಳು ನಡೆಯಲಿವೆ. ಈ ಸರಣಿಯ ಮೊದಲ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.
ಬಿಸಿಸಿಐ ಆಯ್ಕೆ ಸಮಿತಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಮೊದಲ ತಂಡದಲ್ಲಿ ಸ್ಥಾನ ಪಡೆದ ಆಟಗಾರರಲ್ಲಿ ಈ ಮೂವರು ವೇಗಿಗಳು ಎದ್ದು ಕಾಣುತ್ತಾರೆ. ಇದಕ್ಕೆ ಕಾರಣ ಆರ್‌ಸಿಬಿ. ಕಳೆದ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಮಿಂಚಿದ ಮೂವರು ವೇಗಿಗಳಿಗೆ ಟೆಸ್ಟ್ ತಂಡದಲ್ಲಿ ಆಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ಈಗ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡದಲ್ಲಿ ನಿರೀಕ್ಷೆಯಂತೆ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಅವಕಾಶ ಲಭಿಸಿದೆ. ಇವರು ಭಾರತ ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಪಂದ್ಯದಲ್ಲಿ ಖಾಯಂ ಸ್ಥಾನವನ್ನು ಪಡೆದಿದ್ದಾರೆ. ಸಿರಾಜ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭರ್ಜರಿ ಲೈನ್ ಹಾಗೂ ಲೆಂಥ್ ಮೂಲಕ ಬೌಲಿಂಗ್ ನಡೆಸುತ್ತಿದ್ದು, ಎದುರಾಳಿಗಳನ್ನು ಕಾಡಬಲ್ಲರು.
ಮೊಹಮ್ಮದ್ ಸಿರಾಜ್ ಈಗಾಗಲೇ ಭಾರತದ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 74 ವಿಕೆಟ್ ಕಬಳಿಸಿದ್ದಾರೆ. ಇವರಿಗೆ ತಂಡದಲ್ಲಿ ಸ್ಥಾನ ಸಿಗುವುದು ಫಿಕ್ಸ್ ಎನ್ನಲಾಗುತ್ತಿದೆ. ಇವರು ಜಸ್ಪ್ರಿತ್ ಬುಮ್ರಾ ಅವರ ಜೊತೆ ಕಣಕ್ಕೆ ಇಳಿಯಬಹುದು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶವನ್ನು ಪಡೆದಿದ್ದ ಆಕಾಶ್ ದೀಪ್, ಬಾಂಗ್ಲಾದೇಶದ ವಿರುದ್ಧ ಸರಣಿಗೂ ತಂಡ ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಆಡುವ ಅವಕಾಶವನ್ನು ಪಡೆದಿದ್ದ ಆಕಾಶ್ ಮೂರು ವಿಕೆಟ್ ಕಬಳಿಸಿದ್ದರು. ಅಲ್ಲದೆ ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ ಎ ಪರ ಕಣಕ್ಕೆ ಇಳಿದಿದ್ದು, 9 ವಿಕೆಟ್ ಪಡೆದು ಮಿಂಚಿದ್ದಾರೆ. ಇವರಿಗೂ ಸಹ ತಂಡದಲ್ಲಿ ಸ್ಥಾನ ಲಭಿಸುವ ಚಾನ್ಸ್ ಇದೆ.

ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಯಶ್ ದಯಾಳ್, ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲೂ ಆಯ್ಕೆದಾರರ ಗಮನ ಸೆಳೆದಿದ್ದಾರೆ. ಇವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 24 ಪಂದ್ಯಗಳನ್ನು ಆಡಿದ್ದು 76 ವಿಕೆಟ್ ಕಬಳಿಸಿದ್ದಾರೆ. ಇವರು ಭಾರತ ಟೆಸ್ಟ್ ತಂಡದ ಜೆರ್ಸಿ ತೊಡುವ ಕನಸು ಕಾಣುತ್ತಿದ್ದಾರೆ.